DK Shivakumar: ಪಕ್ಷಕ್ಕೆ ನಿಷ್ಠರನ್ನು ಹೈಕಮಾಂಡ್ ಕೈಬಿಟ್ಟಿಲ್ಲ; ಡಿಕೆ ಶಿವಕುಮಾರ್ ಹೇಳಿಕೆ ಮರ್ಮವೇನು?

ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಭಿನ್ನಮತ ಇದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಡಿಕೆ ಶಿವಕುಮಾರ್ ಹೈಕಮಾಂಡ್​ ತಮ್ಮನ್ನೇ ಪರಿಗಣಿಸಬಹುದು ಎಂಬರ್ಥದ ಹೇಳಿಕೆ ನೀಡಿದ್ದಾರೆ.

DK Shivakumar: ಪಕ್ಷಕ್ಕೆ ನಿಷ್ಠರನ್ನು ಹೈಕಮಾಂಡ್ ಕೈಬಿಟ್ಟಿಲ್ಲ; ಡಿಕೆ ಶಿವಕುಮಾರ್ ಹೇಳಿಕೆ ಮರ್ಮವೇನು?
ಡಿಕೆ ಶಿವಕುಮಾರ್

Updated on: Apr 06, 2023 | 3:46 PM

ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಜಯ ಗಳಿಸಿದರೆ ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ (Siddaramaiah) ಮತ್ತು ಡಿಕೆ ಶಿವಕುಮಾರ್ ಮಧ್ಯೆ ಪೈಪೋಟಿ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು ಎಂಬುದನ್ನು ಇಬ್ಬರೂ ನಾಯಕರು ಕೆಲವು ಬಾರಿ ಬಹಿರಂಗವಾಗಿಯೇ ಹೇಳಿದ್ದಾರೆ. ಇತ್ತೀಚೆಗಷ್ಟೇ ಈ ಕುರಿತು ಸ್ಪಷ್ಟನೆ ನೀಡಿದ್ದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಬಹುದು. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ನಾವಿಬ್ಬರೂ ಆಕಾಂಕ್ಷಿಗಳು ನಿಜ. ಆದರೆ ಅಂತಿಮವಾಗಿ ಚುನಾಯಿತ ಶಾಸಕರು, ಹೈಕಮಾಂಡ್ ಮುಖ್ಯಮಂತ್ರಿಯ ಆಯ್ಕೆ ಮಾಡಲಿದೆ ಎಂದು ಹೇಳಿದ್ದರು. ಇದೀಗ ಈ ವಿಚಾರವಾಗಿ ಹೇಳಿಕೆ ನೀಡಿರುವ ಡಿಕೆ ಶಿವಕುಮಾರ್, ತಾವು ಪಕ್ಷಕ್ಕೆ ನಿಷ್ಠರಾಗಿರುವುದಾಗಿಯೂ ತಮ್ಮಂಥವರನ್ನು ಹೈಕಮಾಂಡ್ ಕೈಬಿಡುವುದಿಲ್ಲ ಎಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಗಾದಿಗೆ ಹೈಕಮಾಂಡ್ ತಮ್ಮನ್ನೇ ಆಯ್ಕೆ ಮಾಡಬಹುದು ಎಂಬ ಭರವಸೆಯನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಭಿನ್ನಮತ ಇದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಡಿಕೆ ಶಿವಕುಮಾರ್, ಪಕ್ಷವು ನಿಷ್ಠರನ್ನು ಪರಿಗಣಿಸಲಿದೆ. ಈ ವಿಚಾರದಲ್ಲಿ ತಮಗೆ ಯಾವುದೇ ಅನುಮಾನಗಳಿಲ್ಲ ಎಂದು ‘ಎನ್​ಡಿ ಟಿವಿ’ಗೆ ಹೇಳಿದ್ದಾರೆ.

ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಯಾಗಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ‘ನಾನು ಪಕ್ಷದ ನಿಷ್ಠಾವಂತ ವ್ಯಕ್ತಿ. ಎಂದಿಗೂ ಪಕ್ಷಕ್ಕೆ ದ್ರೋಹ ಬಗೆದಿಲ್ಲ. ಕರ್ನಾಟಕವನ್ನು ಗೆದ್ದು ಹೈಕಮಾಂಡ್​ಗೆ ಬಿಡಲಿದ್ದೇವೆ. ಹೈಕಮಾಂಡ್ ಯಾವತ್ತಿಗೂ ಪಕ್ಷದ ಪರ ನಿಂತವರ ಬೆಂಬಲಕ್ಕೆ ನಿಂತಿದೆ. ನಮಗೆ ಹೈಕಮಾಂಡ್ ಮೇಲೆ ನಂಬಿಕೆ ಇದೆ. ಪಕ್ಷದ ನಾಯಕತ್ವದ ಮೇಲೆ ವಿಶ್ವಾಸ ಇದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸ್ಪಷ್ಟನೆ : ಡಿಕೆ ಶಿವಕುಮಾರ್​ ಅವರನ್ನು ಹೈಕಮಾಂಡ್​ ಸಿಎಂ ಮಾಡಲ್ಲ ಎಂದು ನಾನು ಹೇಳಿಲ್ಲ

‘ನಾನು ನಿದ್ದೆ ಮಾಡಿಲ್ಲ ಮತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರಯಾಣಿಸಿ ಪ್ರಚಾರದಲ್ಲಿ ತೊಡಗಿಕೊಂಡಿದ್ದೇನೆ. ಎಲ್ಲವನ್ನೂ ಒಮ್ಮತದೊಂದಿಗೆ ಮುನ್ನಡೆಸಿದ್ದೇನೆ. ನಾವು ಬಿಜೆಪಿ ವಿರುದ್ಧ ಪ್ರಬಲ ಸಂಘಟನೆ ಕಟ್ಟಿದ್ದೇವೆ’ ಎಂದೂ ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಆಂತರಿಕ ಕಲಹ ಮತ್ತು ಪೈಪೋಟಿಯ ವರದಿಗಳನ್ನು ಡಿಕೆಶಿ ತಳ್ಳಿಹಾಕಿದ್ದಾರೆ. ನಾವೆಲ್ಲ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಬಿಜೆಪಿಯವರು ಕಿಡಿಗೇಡಿತನ ಮಾಡುತ್ತಿದ್ದು, ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಬಿಜೆಪಿಯನ್ನು ಸೋಲಿಸಿ ಕರ್ನಾಟಕದ ಘನತೆಯನ್ನು ಮರುಸ್ಥಾಪಿಸುವುದು ನಮ್ಮ ಗುರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾಚವಣೆಯ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us