ತುಮಕೂರು, (ಫೆಬ್ರವರಿ 05): ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು (Congress JDS Alliance) ನಾನು ವಿಶ್ಲೇಷಣೆ ಮಾಡಿದ್ದೇನೆ. 4 ಲಕ್ಷ ಮತ ಹೆಚ್ಚಿದೆ ಎಂದು ಜೆಡಿಎಸ್ನವರು (JDS) ಅಭ್ಯರ್ಥಿ ಹಾಕಿದ್ದರು. ಫಲಿತಾಂಶ ಬಂದಾಗ ಲೆಕ್ಕಾಚಾರ ಉಲ್ಟಾ ಆಗಿತ್ತು. ಮೈತ್ರಿಯಾದ್ರೆ ಸಾಮೂಹಿಕವಾಗಿ ಎಲ್ಲಾ ಮತ ಬರುತ್ತೆಂಬುದು ಸುಳ್ಳು. ಹಾಗಾಗಿ ನಮ್ಮ ಜಾಗೃತಿಯಲ್ಲಿ ನಾವು ಇರಬೇಕು. ಸ್ಥಳೀಯ ಮಟ್ಟದಲ್ಲಿ ಪರಿಪೂರ್ಣವಾಗಿ ಮೈತ್ರಿ ಆಗುವುದು ಕಷ್ಟ . ಹಾಗಾಗಿ ನಮ್ಮ ಜಾಗೃತಿಯಲ್ಲಿ ನಾವು ಇರಬೇಕು, ನಮ್ಮ ಶಕ್ತಿಯನ್ನ ನಾವು ಹೆಚ್ಚಿಸಿಕೊಳ್ಳಬೇಕು ಎಂದು ಪರೋಕ್ಷವಾಗಿ ಮಿತ್ರ ಪಕ್ಷ ಜೆಡಿಎಸ್ನ ನಂಬಬೇಡಿ ಎಂದು ಮಾಜಿ ಸಚಿವ ಜೆಸಿ ಮಾಧುಸ್ವಾಮಿ (JC Madhuswamy) ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಗ್ಗೆ ವಿ.ಸೋಮಣ್ಣ ಸ್ಪಷ್ಟನೆ ಇಲ್ಲಿದೆ
ತುಮಕೂರಿನ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಧುಸ್ವಾಮಿ, ನಮ್ಮ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರತಿ ಪಂಚಾಯ್ತಿಯಲ್ಲಿಯೂ ಎರಡೆರಡು ಗುಂಪು ಇದೆ. ಹಾಗಾಗಿ ನಾವು ತುಂಬಾ ಜಾಗೃತೆಯಿಂದ ಚುನಾವಣೆ ಮಾಡಬೇಕು. ಹಾಗಂತ ಮೈತ್ರಿ ಬೇಡ ಅಂತಾ ನಾನು ಹೇಳುತ್ತಿಲ್ಲ. ತುಮಕೂರು ಲೋಕಸಭೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಈ ಬಗ್ಗೆ ವರಿಷ್ಟರಿಗೂ ತಿಳಿಸಿದ್ದೇನೆ. ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಸೋಮಣ್ಣ ಸೇರಿದಂತೆ ಯಾರು ಬೇಕಾದ್ರೂ ಓಡಾಡಬಹುದು ಎಂದು ಹೇಳಿದರು.
ಇನ್ನು ಇದೇ ವೇಳೆ ಸೋಮಣ್ಣ ಅಭ್ಯರ್ಥಿಯಾದ್ರೆ ನಿಮ್ಮ ಬೆಂಬಲ ಇರುತ್ತಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ನಾನು ಇಂತಹ ಕಪೋಲಕಲ್ಪಿತ ಪ್ರಶ್ನೆಗಳಿಗೆ ಈಗಲೇ ಉತ್ತರ ಕೊಡಲ್ಲ. ಬಸವರಾಜು ಅವರು ಸೋಮಣ್ಣ ಪರ ಬ್ಯಾಟ್ ಬಿಸಿರುವುದು ಅವರ ವೈಯಕ್ತಿಕ. ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ತುಮಕೂರಿನಲ್ಲಿ ವಲಸೆ ಅಭ್ಯರ್ಥಿಗಳು ಗೆಲ್ಲಲ್ಲ ಎಂದು ನಾನು ಹೇಳೋದಿಲ್ಲ. ಈ ಹಿಂದೆ ಬಂದವರು ಗೆದ್ದಿಲ್ಲ, ಕೋದಂಡರಾಮಯ್ಯ ಸೋಲ್ತಾರೆ ಅಂತಾ ನಾನೇ ಹೇಳಿದ್ದೆ. ದೇವೇಗೌಡರು ಕೂಡ ಸೋತಿದ್ರು. ಹಾಗಂದ ಮಾತ್ರಕ್ಕೆ ಮುಂದೆ ಬರುವವರು ಗೆಲ್ಲಲ್ಲ ಎಂದು ನಾನು ಹೇಳಲ್ಲ ಎಂದು ಹೇಳಿದರು.
ಸೋಮಣ್ಣ ಚಾಮರಾಜನಗರದಲ್ಲೂ ಆಕ್ಟಿವ್ ಆಗಿದ್ರು. ಹಾಸನದಲ್ಲೂ ಆಕ್ಟಿವ್ ಆಗಿದ್ದರು. ಇಡೀ ರಾಜ್ಯದಲ್ಲಿ ಆಕ್ಟಿವ್ ಆಗಿರ್ತಾರೆ. ಅವರು ಶಕ್ತಿ ಇದ್ದವರು, ನಾವೇನು ಹೇಳೋಕಾಗಲ್ಲ. ನನಗೆ ಟಿಕೆಟ್ ಸಿಗುವಂತಹ ಭರವಸೆ ಇದೆ. ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ಸಿಗಲಿಲ್ಲ ಅನ್ನೋ ನೋವಿದೆ. ತುಂಬಾ ಬಾರಿ ನಾವು ಇದನ್ನ ಹೇಳಿದ್ದೇವೆ. ಆದ್ರೆ ಅದನ್ನ ಯಾರೂ ಅಲ್ಲಿವರೆಗೆ ಮುಟ್ಟಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ