ಬೆಂಗಳೂರು, ಸೆಪ್ಟೆಂಬರ್ 14: ಬಿಜೆಪಿ ಶಾಸಕ ಮುನಿರತ್ನ (Munirathna) ಜೀವ ಬೆದರಿಕೆ, ಜಾತಿ ನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಗುತ್ತಿಗೆದಾರ ಚಲುವರಾಜು (Contractor Chaluvaraju) ಆರೋಪ ಮಾಡಿದ್ದಾರೆ. ಈ ವಿಚಾರವಾಗಿ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ (DK Suresh) ಮಾತನಾಡಿ, ಶಾಸಕ ಮುನಿರತ್ನ ಚುನಾವಣೆ ಸಂದರ್ಭದಲ್ಲಿ ನಮ್ಮ ಅಭ್ಯರ್ಥಿಗೂ ಬೆದರಿಕೆ ಹಾಕಿದ್ದರು. ಶಾಸಕ ಮುನಿರತ್ನರಿಂದ ಅಧಿಕಾರಿಗಳಂತೂ ಭಯ ಭೀತರಾಗಿದ್ದಾರೆ. ಕೆಲವು ಅಧಿಕಾರಿಗಳು ನನ್ನ ಬಳಿ ಅಳಲು ತೋಡಿಕೊಂಡಿದ್ದಾರೆ. ಅಧಿಕಾರಿಗಳು ದೂರು ಕೊಟ್ಟರೆ ಸರ್ಕಾರ ಅವರ ರಕ್ಷಣೆಗೆ ಬರುತ್ತೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಶಾಸಕ ಮುನಿರತ್ನ ಅವರು ದಲಿತ ಸಮುದಾಯಕ್ಕೆ ಕೀಳು ಪದಗಳಿಂದ ಸಂಬೋಧನೆ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಮುನಿರತ್ನ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಸುಮೋಟೋ ಕೇಸ್ ದಾಖಲಿಸಬೇಕು. ಎರಡು ಜಾತಿಗಳನ್ನು ಎತ್ತಿಕಟ್ಟುವ ಕೆಲಸ ಆಗಿದೆ ಎಂದರು.
ಇದನ್ನು ಬಿಜೆಪಿ ನಾಯಕರು ಯಾವ ರೀತಿ ಅರಗಿಸಿಕೊಳ್ಳುತ್ತಿದ್ದಾರೆ? ಬಿಜೆಪಿಯ ಒಬ್ಬೇ ಒಬ್ಬರು ನಾಯಕರು ಇದುವರೆಗೂ ಹೇಳಿಕೆ ನೀಡಿಲ್ಲ. ಬಿಜೆಪಿಯವರಿಗೆ ನೈತಿಕತೆ ಇದ್ರೆ ಮುನಿರತ್ನ ಅವರನ್ನು ಇಷ್ಟೊತ್ತಿಗಾಗಲೇ ಪಕ್ಷದಿಂದ ವಜಾ ಮಾಡಬೇಕಿತ್ತು ಎಂದಿದ್ದಾರೆ.
ಇದನ್ನೂ ಓದಿ: ಶಾಸಕ ಮುನಿರತ್ನ, ಗುತ್ತಿಗೆದಾರ ಆಡಿಯೋ ವೈರಲ್: ರೇಣುಕಾಸ್ವಾಮಿಗೆ ಆದ ಗತಿ ನಿನಗೂ ಆಗುತ್ತೆ, ಕೊಲೆ ಬೆದರಿಕೆ ಆರೋಪ
ನಾವ್ಯಾರೂ ಕೂಡ ಕೇಳಿರದ ಅವಾಚ್ಯ ಪದಗಳನ್ನು ಕೇಳಬೇಕಾಗಿದೆ. ಇದಕ್ಕಿಂತ ಕೀಳು ಪದಗಳನ್ನು ಯಾರೂ ಉಪಯೋಗಿಸಲು ಸಾಧ್ಯವಿಲ್ಲ. ಕೀಳರಿಮೆ ಮನಸ್ಥಿತಿ ಇರುವವರು ಯಾರೂ ಇಂತಹ ಪದ ಬಳಸಲ್ಲ. ಒಂದು ಕಡೆ ರಾಮನ ಜಪ, ಒಂದು ಕಡೆ ಸಂಸ್ಕೃತಿ ಜಪ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಅದೇ ತಾಯಂದಿರನ್ನು ಮಂಚಕ್ಕೆ ಕರೆಯುವ ಜಪ ಮಾಡುತ್ತಾರೆ ಎಂದು ವಾಗ್ದಾಳಿ ಮಾಡಿದರು.
ದಲಿತ ಸಮುದಾಯದವರ ಬಗ್ಗೆ ಯಾರೂ ಇಂಥ ಪದ ಬಳಸಿಲ್ಲ. ದಲಿತ ಸಮುದಾಯದ ಮೇಲೆ ಇಂತಹ ಪದ ಬಳಕೆ ಎಷ್ಟು ಸರಿ? ದಲಿತ ಸಮುದಾಯವನ್ನು 80ರ ದಶಕದ ಬಳಿಕ ಯಾರೂ ಇಂಥ ಪದ ಬಳಸುತ್ತಿರಲಿಲ್ಲ. ದಲಿತ ಸಮುದಾಯದ ಮೇಲೆ ಇಂಥ ಪದ ಬಳಕೆ ಮಾಡುವುದು ಎಷ್ಟು ಸರಿ? ಇದಕ್ಕೆ ಬಿಜೆಪಿ ನಾಯಕರು, ಎನ್ಡಿಎ ನಾಯಕರು ಪ್ರತಿಕ್ರಿಯಿಸಬೇಕೆಂದು ಎಂದು ಒತ್ತಾಯಿಸಿದ್ದಾರೆ.
ಕುಮಾರಸ್ವಾಮಿಯೇ ನಾಗಮಂಗಲ ಗಲಾಟೆ ಮಾಡಿಸಿರಬಹುದು. ಪ್ರತಿ ವಾರ ಇಲ್ಲಿಗೆ ಬರುತ್ತಾರಲ್ಲ, ಹಾಗೆ ಗಲಾಟೆ ಮಾಡಿಸಿರಬಹುದು. ಮುಸ್ಲಿಮನಾಗಿ ಹುಟ್ಟಬೇಕು ಅಂತಾ ಹೇಳುತ್ತಿದ್ದವನು ನಾನಲ್ಲ. ಹೆಚ್. ಡಿ.ಕುಮಾರಸ್ವಾಮಿ ನಿತ್ಯ ಒಂದೊಂದು ಹೇಳಿಕೆ ಕೊಡುತ್ತಾರೆ. ಹಿಂದೆ ಗಲಭೆಗಳಾದಾಗ ಅಮಿತ್ ಶಾ, ಪ್ರಧಾನಿ ಮೋದಿ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಕೊಟ್ಟಿದ್ದರು ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:01 pm, Sat, 14 September 24