ಬೆಂಗಳೂರು, ಜನವರಿ 29: ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಏಕವಚನದಲ್ಲಿ ಮಾತನಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸರಣಿ ಟ್ವೀಟ್ ಮೂಲಕ ಹರಿಯಾದ್ದಿದ್ದಾರೆ. “ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ ಸಿದ್ದರಾಮಯ್ಯನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ” ಎಂದು ಹ್ಯಾಷ್ಟ್ಯಾಗ್ ಶಿಷ್ಟಾಚಾರಗೆಟ್ಟ ಮುಖ್ಯಮಂತ್ರಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್)ನಲ್ಲಿ ಪೋಸ್ಟ್ ಹಾಕಿದ್ದಾರೆ.
“ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು ಮಾತನಾಡುವುದೇ ಹಾಗೆ..” ಎಂದು ನೀವು ಸಮರ್ಥಿಸಿಕೊಳ್ಳುತ್ತಿರಿ. ಸಮರ್ಥನೆಗೂ ಒಂದು ಅಳತೆ, ಗೌರವ ಇರುತ್ತದೆ. ಅದಾವುದನ್ನೂ ನೀವು ಲೆಕ್ಕಕ್ಕೇ ಇಟ್ಟಿಲ. ಹೌದಲ್ಲವೇ?” ಎರಡನೇ ಸಲ ಸಿಎಂ ಆಗಿ ಎಲ್ಲಾ ರೀತಿಯ ಶಿಷ್ಟಾಚಾರದ ಸುಖ ಅನುಭವಿಸುತ್ತಿದ್ದೀರಿ ಮತ್ತು ಪಾಲಿಸುತ್ತಿದ್ದೀರಿ, ಸರಿ. ಆದರೆ, ಭಾಷೆ ವಿಚಾರದಲ್ಲಿ ನೀವು ಯಾಕೆ ಶಿಷ್ಟಾಚಾರ ಕಲಿತಿಲ್ಲ, ಪಾಲಿಸುತ್ತಿಲ್ಲ? ನಿಮ್ಮ ನಾಯಕರಾದ ಶ್ರೀಮತಿ ಸೋನಿಯಾ ಗಾಂಧಿ, ಶ್ರೀ ರಾಹುಲ್ ಗಾಂಧಿ ಅವರಿಗೆ ಏಕವಚನ ಪ್ರಯೋಗಿಸುವಿರಾ?” ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರಪತಿ ಮುರ್ಮುರನ್ನು ಏಕವಚನದಲ್ಲಿ ಸಂಬೋಧಿಸಿದ ವಿಚಾರ: ವಿಷಾದ ವ್ಯಕ್ತಪಡಿಸಿದ ಸಿಎಂ ಸಿದ್ದರಾಮಯ್ಯ
“ಈ ಸೋಗಲಾಡಿತನವನ್ನು ಅರ್ಥ ಮಾಡಿಕೊಳ್ಳದಷ್ಟು ಮುಗ್ಧರೇ ನಮ್ಮ ಜನರು. ಸಿದ್ದರಾಮಯ್ಯನವರೇ, ನಿನ್ನೆ ದಿನ ಶೋಷಿತರ ಜಾಗೃತಿ ಸಮಾವೇಶದಲ್ಲಿ ನಿಮ್ಮ ಭಾಷಣದಲ್ಲಿ ಭಾವುಕತೆ, ಮುಗ್ಧತೆ ಇತ್ತೇ? ಸುಳ್ಳು ಹೇಳುವುದಕ್ಕೂ ಸಂಕೋಚ ಬೇಡವೇ? ನಿಮ್ಮ ಭಾಷಣ ದುರಾಹಂಕಾರದ ಪರಮಾವಧಿ ಮತ್ತು ಆ ಸಮಾವೇಶದ ಕರ್ತೃ,ಕರ್ಮ, ಕ್ರಿಯೆ ಎಲ್ಲವೂ ನೀವೇ. ಹೌದೋ ಅಲ್ಲವೋ? ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಗೌರವಾನ್ವಿತ ರಾಷ್ಟ್ರಪತಿಗಳ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಏಕವಚನ ಪ್ರಯೋಗಿಸುವಾಗ ಭಾವುಕತೆಯಲ್ಲಿ ನಿಮ್ಮ ವಿವೇಕ ಸತ್ತು ಹೋಗಿತ್ತಾ?” ಎಂದು ವಾಗ್ದಾಳಿ ಮಾಡಿದ್ದಾರೆ.
ಅಂಕೆ ಮೀರಿದ ಭಂಡತನಕ್ಕೆ ಮುಖ್ಯಮಂತ್ರಿ ನೀವೇ ಅತ್ಯುತ್ತಮ ಉದಾಹರಣೆ @siddaramaiah ನವರೇ. ಭಾವುಕನಾಗಿ ಮಾತನಾಡುವ ಭರದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳನ್ನು ಏಕವಚನದಲ್ಲಿ ಸಂಬೋಧಿಸಿದೆ ಎಂದು ನೀವು ಕೊಟ್ಟಿರುವ ಸಮಜಾಯಿಷಿ ಮೊಸಳೆಯನ್ನೂ ನಾಚಿಸುವಂತಿದೆ.1/8#ಶಿಷ್ಟಾಚಾರಗೆಟ್ಟ_ಮುಖ್ಯಮಂತ್ರಿ
*
“ಗ್ರಾಮೀಣ ಸೊಗಡಿನ ವ್ಯಕ್ತಿತ್ವ ನನ್ನದು. ನಾನು…— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) January 29, 2024
“ಎರಡು ಬಾರಿ ಸಿಎಂ ಆದವರು, ಡಿಸಿಎಂ, ಹಣಕಾಸು ಸಚಿವರೂ ಆಗಿದ್ದವರು.. ವಕೀಲರೂ, ಸ್ವಯಂಘೋಷಿತ ಸಂವಿಧಾನ ತಜ್ಞರೂ ಆಗಿರುವ ನಿಮ್ಮಂತಹ ಪಂಡಿತರೇ ಭಾವುಕತೆಯಿಂದ ಬಾಯಿ ತಪ್ಪಿದರೆ ಹೇಗೆ? ಇನ್ನು ಆ ನಿಮ್ಮ ಭಾಷಣ! ಅದನ್ನು ಭಾಷಣ ಎನ್ನಲು ಸಾಧ್ಯವೇ? ನಿಮ್ಮ ಭಾಷಣ ನಿಮ್ಮ ಹೃದಯದಲ್ಲಿ ತುಂಬಿದ್ದ ಅಸಹನೆಯ ನಂಜು. ಅನ್ಯಜಾತಿಗಳ ಮೇಲೆ ಮಡುಗಟ್ಟಿದ ದ್ವೇಷ. ಜಾತಿ-ಧರ್ಮಗಳ ನಡುವೆ ಬೆಂಕಿ ಇಡಲು ನೀವು ಕಕ್ಕಿದ ಕಾರ್ಕೋಟಕ ವಿಷಜ್ವಾಲೆ. ಜಾತಿ ವ್ಯವಸ್ಥೆ ಇರುವರೆಗೆ ಇಂಥ ಸಮಾವೇಶಗಳು ನಡೆಯಬೇಕು ಎನ್ನುತ್ತೀರಿ! ಅಂದರೆ ಕಾರ್ಕೋಟಕ ವಿಷಜ್ವಾಲೆ ನಿರಂತರ ಎಂದಾಯಿತು! ನಿರಂತರವಾಗಿ ಅಧಿಕಾರದಲ್ಲಿ ಸುಖಿಸಿದ ನೀವು ಶೋಷಿತ ವರ್ಗಕ್ಕೆ ಮಾಡಿದ್ದೇನು?” ಎಂದು ಕಿಡಿಕಾರಿದ್ದಾರೆ.
“ಮೀಸಲಾತಿ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದೇನು? ಅವರ ನಿಲುವು ಏನಾಗಿತ್ತು? ಸಂವಿಧಾನವೇ ನನ್ನ ಧರ್ಮಗ್ರಂಥ ಎನ್ನುವ ನೀವು, ಇಷ್ಟು ಬೇಗ ಸಂವಿಧಾನ ಬರೆದವರ ಮಾತನ್ನೇ ಮರೆತರೆ ಹೇಗೆ? 14 ಬಜೆಟ್ ಮಂಡಿಸಿದ ಅಪರ ವಿತ್ತವಿಶಾರದರಾದ ತಮಗೆ ಮರೆವೇ? ಇನ್ನೆಷ್ಟು ವರ್ಷ ಸುಳ್ಳುಗಳನ್ನೇ ಹೇಳಿ ಸತ್ಯವನ್ನು ಸಾಗ ಹಾಕುತ್ತೀರಿ? ನನ್ನಂತೆಯೇ ಶೋಷಿತ ಸಮಾಜದಿಂದ ಬಂದವರು, ಅವರ ಬಗ್ಗೆ ಅಪಾರ ಗೌರವವಿದೆ. ಅವರನ್ನು ಏಕವಚನದಲ್ಲಿ ಸಂಬೋಧಿಸಬಾರದಿತ್ತು. ಅಚಾತುರ್ಯದಿಂದ ಆಗಿರುವ ಈ ಪ್ರಮಾದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದೀರಿ. ವಿಷಾದ ವ್ಯಕ್ತಪಡಿಸುವ ಸೌಜನ್ಯ ತೋರಿಸಿದ್ದೀರಿ, ಸಂತೋಷ. ಆದರೆ; ನಿಮ್ಮ ನಂಜಿನ ವಿಷ ರಾಜ್ಯವನ್ನೆಲ್ಲಾ, ದೇಶವನ್ನೆಲ್ಲಾ ವ್ಯಾಪಿಸುತ್ತಿದೆ. ಇದಕ್ಕೆ ಏನಂತೀರಿ?” ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ