ಬೆಂಗಳೂರು, (ಜನವರಿ 25): ಎಂಟೇ ಎಂಟು ತಿಂಗಳು. ಎರಡು ವಿಚಾರಧಾರೆಗಳು. ಎರಡು ಪಕ್ಷಗಳು. ಅವಮಾನ-ಸಮ್ಮಾನ, ಸೋಲು-ಮುಜುಗರ ಏನೇನೆಲ್ಲ ನೋಡ್ಬಿಟ್ಟರು ಉತ್ತರ ಕರ್ನಾಟಕದ ಲಿಂಗಾಯತ ಪ್ರಭಾವಿ ನಾಯಕ ನಾಯಕ ಜಗದೀಶ್ ಶೆಟ್ಟರ್(Jagadish Shettar ). ಪಕ್ಷದ ರಾಜ್ಯಾಧ್ಯಕ್ಷ, 2 ಬಾರಿ ವಿಪಕ್ಷ ನಾಯಕ, ಸ್ಪೀಕರ್, ಮುಖ್ಯಮಂತ್ರಿ.. ಬಿಜೆಪಿಯಲ್ಲಿ ಸಿಗ್ಬೇಕಿದ್ದ ಎಲ್ಲ ಹುದ್ದೆಗಳನ್ನ ಶೆಟ್ಟರ್ ಅನುಭವಿಸಿದವರು. ಆದರೆ, 8 ತಿಂಗಳ ಹಿಂದೆ ಟಿಕೆಟ್ ಕೊಡದೆ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು ಎಂದು ಬಿಜೆಪಿ ಗುಡ್‌ಬೈ ಹೇಳಿದ್ದ ಶೆಟ್ಟರ್ ಮತ್ತೆ ಕೇಸರಿ ಪಡೆಗೆ ಸೇರಿಕೊಂಡಿದ್ದಾರೆ. ಉತ್ತರಕ ರ್ನಾಟಕದಲ್ಲಿ ತಕ್ಕಮಟ್ಟಿಗೆ ಒಂದಿಷ್ಟು ಸಮುದಾಯದ ಹಿಡಿತ ಹೊಂದಿರುವ ಶೆಟ್ಟರ್ ಮರಳಿ ಗೂಡಿಗೆ ಬರಲು ಹಲವು ಕಾರಣಗಳಿದ್ದು, ಅವು ಈ ಕೆಳಗಿನಂತಿವೆ ನೋಡಿ.
ಅಷ್ಟಕ್ಕೂ ಶೆಟ್ಟರ್ ಕಾಂಗ್ರೆಸ್ ತೊರೆಯಲು ಕಾರಣವೇನು ಎನ್ನುವುದನ್ನು ನೋಡುವುದಾದರೆ ಕಾಂಗ್ರೆಸ್ ಸ್ಥಳೀಯ ಮುಖಂಡರಿಂದ ಜಗದೀಶ್ ಶೆಟ್ಟರ್‌ಗೆ ವಿರೋಧವಿತ್ತು. ಶೆಟ್ಟರ್ ವಿರುದ್ಧ ಸ್ಥಳೀಯ ಕಾಂಗ್ರೆಸ್ ಮುಖಂಡರು ಅಪಪ್ರಚಾರ ಮಾಡಿರುವ ಆರೋಪವೂ ಇದೆ. ಸಚಿವ ಸ್ಥಾನ ಸಿಗಲಿದೆ ಎಂದು ಶೆಟ್ಟರ್ ನಂಬಿದ್ದರು. ಆದರೆ, ಸಿಗದಿದ್ದಕ್ಕೆ ತೀವ್ರ ನಿರಾಸೆ ಅನುಭವಿಸಿದ್ದರಂತೆ. ಬಿಜೆಪಿಯಲ್ಲಿ ಬಿ.ಎಲ್.ಸಂತೋಷ್ ಹಿಡಿತ ಕಡಿಮೆಯಾಗಿದ್ದೂ ಬಿಜೆಪಿಗೆ ವಾಪಸ್ ಬರಲು ಕಾರಣ ಅಂತ ಹೇಳಲಾಗ್ತಿದೆ. ಬಿಜೆಪಿಯಲ್ಲಿ ಲಿಂಗಾಯತರಿಗೆ ಮರಳಿ ನಾಯಕತ್ವ ಸಿಕ್ಕಿರುವುದು ಹಾಗೂ ಜಗದೀಶ್ ಶೆಟ್ಟರ್ ಘರ್ ವಾಪ್ಸಿಗೆ ವಿಜಯೇಂದ್ರ ಇನ್ನಿಲ್ಲದ ಪ್ರಯತ್ನ ನಡೆಸಿರುವುದು ಮರಳಿ ಕೇಸರಿ ಪಡೆ ಸೇರಿಕೊಳ್ಳಲು ಹಾದಿ ಸುಗಮವಾಗಿದೆ. ಸ್ಥಳೀಯ ಆಪ್ತ ಬಿಜೆಪಿ ಮುಖಂಡರು ಶೆಟ್ಟರ್ ಮೇಲೆ ತೀವ್ರ ಒತ್ತಡ ಹಾಕಿದ್ದು ಬಿಜೆಪಿ ಸೇರಲು ಕಾರಣವಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ಗೆ ಕೈಕೊಟ್ಟ ಜಗದೀಶ್ ಶೆಟ್ಟರ್ ಮಾತೃಪಕ್ಷ ಬಿಜೆಪಿಗೆ ಘರ್ವಾಪಸಿ ಆದರು
ಹಿರಿಯ ಲಿಂಗಾಯತ ಸಚಿವರೊಬ್ಬರಿಂದ ಶೆಟ್ಟರ್ ತುಳಿಯಲು ಯತ್ನ ನಡೆದಿತ್ತಂತೆ. ಮತ್ತೊಬ್ಬ ಶೆಟ್ಟರು ಬೆಳೆಯಲು ಬಿಡಬಾರದೆಂಬ ಉದ್ದೇಶ ಆ ನಾಯಕನಿಗಿತ್ತಂತೆ. ಇದರಿಂದಾಗಿ ಉತ್ತರ ಕರ್ನಾಟಕದ ಹಿರಿಯ ಸಚಿವರೊಬ್ಬರ ಮೇಲೆ ಶೆಟ್ಟರ್ ಬೇಸರ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ. ಇದಿಷ್ಟೇ ಅಲ್ಲ, ಕಾಂಗ್ರೆಸ್‌ಗಿಂತ ತಮ್ಮ ಭವಿಷ್ಯ ಬಿಜೆಪಿಯಲ್ಲಿ ಗೋಚರಿಸಿದಂತಿದೆ. ಆ ದೂರದೃಷ್ಟಿಯೂ ಇಂಥಾ ನಿರ್ಧಾರಕ್ಕೆ ಕಾರಣ ಎಂದು ತಿಳಿದುಬಂದಿದೆ. ಇನ್ನು ಮೂವರು ಮಾಜಿ ಸಿಎಂ ಜತೆ ಸೇರಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪಾತ್ರವೂ ಶೆಟ್ಟರ್ ತವರು ಮನೆ ಮರು ಸೇರಲು ಕಾರಣವಂತೆ.
ಧಾರವಾಡ ಲೋಕಸಭೆ ಬಿಜೆಪಿ ಅಭ್ಯರ್ಥಿ ಆಗ್ತಾರೆ ಎಂಬ ಮಾತು ಕೇಳಿ ಬರುತ್ತಿವೆ. ಯಾಕಂದ್ರೆ,
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬದಲಿಗೆ ಈ ಕ್ಷೇತ್ರದಲ್ಲಿ ಶೆಟ್ಟರ್ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಗಾಯತ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಅನ್ನೋ ಒತ್ತಾಯ ಬಲು ಜೋರಾಗಿಯೇ ಕೇಳಿ ಬರ್ತಿದೆ. ಹೀಗಾಗಿ, ಜೋಶಿ ಕ್ಷೇತ್ರ ಬದಲಾಯಿಸ್ತಾರೆ ಅನ್ನೋ ವದಂತಿಯೂ ದಟ್ಟವಾಗಿದೆ. ಜೋಶಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡೋ ಚರ್ಚೆ ನಡೆಯುತ್ತಿದೆ. ಹಾಗಾಗಿಯೇ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದಾರೆ ಅಂತಿವೆ ಮೂಲಗಳು. ಇದು ಸಹಜವಾಗಿ ಹಿಂದೆ ಭಾರಿ ಕುತೂಹಲಕ್ಕೂ ಕಾರಣವಾಗಿದೆ.
ಮುನೇನಕೊಪ್ಪರನ್ನ ಕಾಂಗ್ರೆಸ್ಗೆ ಸೇರಿಸುವ ತಯಾರಿಯಲ್ಲಿದ್ದ ಶೆಟ್ಟರ್ ಒತ್ತಾಸೆಯನ್ನು ಕೈ ನಾಯಕರು ನಿರ್ಲಕ್ಷ್ಯಿಸಿದ್ರು ಎಂದು ಹೇಳಲಾಗಿದೆ. ಎಲ್ಲಾ ಸರ್ವೆ ಮಾಡಿಸಿ ಪಕ್ಷಕ್ಕೆ ಸೇರಿಸಿ, ಆದ್ರೆ ಟಿಕೆಟ್ ಕೊಡುವುದಿಲ್ಲ ಎಂದು ಹೇಳಿದ್ರಂತೆ. ಶೆಟ್ಟರ್ ಹೇಳಿಕೆ ನಿರ್ಲಕ್ಷಿಸಿದ್ದಕ್ಕೆ ಅವರನ್ನ ಮರಳಿ ಬಿಜೆಪಿಗೆ ತರಲು ಖುದ್ದು ಮುನೇನಕೊಪ್ಪ ಮುಂದಾಳತ್ವ ವಹಿಸಿದ್ರು. ಇದೀಗ ಅಂತಿಮವಾಗಿ ಕೈ ಕೊಟ್ಟು ಬಿಜೆಪಿಗೆ ಮರಳಿದ್ದಾರೆ.
ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರು ಶೆಟ್ಟರ್ ಜತೆಗೆ ಸಂಪರ್ಕದಲ್ಲಿದ್ದರು ಎನ್ನಲಾಗ್ತಿದೆ. ಅಲ್ಲದೇ ಮಾಜಿ ಸಿಎಂ ಹೆಚ್‌ಡಿಕೆ 2 ಬಾರಿ ಶೆಟ್ಟರ್ ಜತೆಗೆ ಮಾತುಕತೆ ನಡೆಸಿದ್ದರಂತೆ. ಅಲ್ಲದೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಜತೆಗೆ 15 ದಿನಗಳಿಂದಲೂ ಶೆಟ್ಟರ್ ನಿರಂತರ ಮಾತುಕತೆ ನಡೆಸಿದ್ರು. ಬಳಿಕ ಈ ವಿಚಾರವನ್ನ ಬೊಮ್ಮಾಯಿ ಹೈಕಮಾಂಡ್‌ಗೆ ತಲುಪಿಸಿದ್ರು. ಶೆಟ್ಟರ್ ಮೂಲಕ ಡಿಕೆ ಮತ್ತು ಹೆಬ್ಬಾಳ್ಕರ್‌ಗೆ ತಿರುಗೇಟು ಕೊಡಲು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆದಿದ್ದಾರೆ ಅಂತಾ ಹೇಳಲಾಗ್ತಿದೆ. ಹೆಬ್ಬಾಳ್ಕರ್ ಮನೆಯಲ್ಲಿ ಯಾರಾದರೂ ಸ್ಪರ್ಧಿಸಿದ್ರೆ ಶೆಟ್ಟರ್‌ರನ್ನ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೈಕಮಾಂಡ್‌ಗೆ ಜಾರಕಿಹೊಳಿ ಹೇಳಿದ್ರಂತೆ.
ಅಪ್ಪನ ಕಾಲದಿಂದಲೂ ಜನಸಂಘ ಮತ್ತು ಆರ್‌ಎಸ್‌ಎಸ್ ಜತೆಗೆ ಗುರುತಿಸಿಕೊಂಡ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತದೇ ಸಿದ್ಧಾಂತ ಒಪ್ಪಿಅಪ್ಪಿದಾರೆ.