ಬೆಂಗಳೂರು, (ಮಾರ್ಚ್ 04): ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ (Dr CN Manjunath) ಅವರು ಲೋಕಸಭಾ ಚುನಾವಣೆಗೆ (Loksabha Elections 2024) ಸ್ಪರ್ಧಿಸುವ ಸಂಬಂಧ ಸುದ್ದಿಗಳು ಹರಿದಾಡುತ್ತಲೇ ಇದೆ. ಈ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ ಎಂದು ಮಂಜುನಾಥ್ ಸ್ಪಷ್ಟಪಡಿಸಿದ್ದರೂ ಸಹ ಬೆಂಗಳೂರು ಗ್ರಾಮಾಂತರ ಅಥವಾ ಬೆಂಗಳೂರು ಉತ್ತರದಲ್ಲಿ ಕಣಕ್ಕಿಳಿಯುವ ಸಾಧ್ಯತೆಯ ಬಗ್ಗೆ ಅಂತೆಕಂತೆ ಸುದ್ದಿ ವೈರಲ್ ಆಗುತ್ತಿದೆ. ಇದರ ಮಧ್ಯೆ ಇದೀಗ ಅಳಿಯನ ಬಗ್ಗೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ(HD Devegowda) ಪ್ರತಿಕ್ರಿಯಿಸಿದ್ದು, ಅವರು ರಾಜಕೀಯಕ್ಕೆ ಬರುವುದು ಬೇಡ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಇಂದು(ಮಾರ್ಚ್ 04) ಬೆಂಗಳೂರಿನಲ್ಲಿ ಮಾತನಾಡಿರುವ ದೇವೇಗೌಡ, ಇಡೀ ದೇಶಾದ್ಯಂತ ಮಂಜುನಾಥ್ ತಮ್ಮದೇ ಆದ ಹೆಸರು ಮಾಡಿದ್ದಾರೆ. ಇಂತಹ ರಾಜಕೀಯ ಪರಿಸ್ಥಿತಿಯಲ್ಲಿ ಅಂತಹವರು ಬರುವುದು ಸರಿಯಲ್ಲ. ಈ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಎಂದು ಒತ್ತಾಯಿಸಲ್ಲ. ವ್ಯಕ್ತಿತ್ವಕ್ಕೆ ಕಳಂಕ ತರುವ ತೀರ್ಮಾನ ನಾವು ಮಾಡಲ್ಲ. ಅವರು ರಾಜಕೀಯಕ್ಕೆ ಬರುವುದಕ್ಕೆ ಸಮ್ಮತಿ ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ದೇವೇಗೌಡ್ರು ಅಳಿಯ (ಮಂಜುನಾಥ್) ರಾಜಕೀಯ ಕ್ಷೇತ್ರಕ್ಕೆ ಬರುವುದು ಬೇಡ ಎನ್ನುವ ಅರ್ಥದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೃದ್ರೋಗ ತಜ್ಞ ಮಂಜುನಾಥ್ ದೇವೇಗೌಡರ ಅಳಿಯ ಆಗಿದ್ದು ಹೇಗೆ? ದೇವೇಗೌಡರು ಅಳಿಯನಿಗೆ ಕೊಟ್ಟ ಉಡುಗೊರೆ ಏನು?
ಆದ್ರೆ, ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಬಿಜೆಪಿ ಮಾತ್ರ ಮಂಜುನಾಥ್ ಅವರನ್ನು ಈ ಬಾರಿ ಲೋಕಸಭಾ ಚುನಾವಣೆ ಕಣಕ್ಕಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ರಾಜಕೀಯ ಎದುರಾಳಿ ಡಿಕೆ ಸುರೇಶ್ ಅವರನ್ನು ಗುರಿಯಾಗಿಸಿಕೊಂಡಿದ್ದು, ಈ ಬಾರಿ ಮಂಜುನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸಿ ಡಿಕೆ ಸುರೇಶ್ ಅವರನ್ನು ಸೋಲಿಸುವ ತಂತ್ರರೂಪಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಠಕ್ಕರ್ ಕೊಡುವ ನಿಟ್ಟಿನಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಣಕ್ಕಿಳಿಸುವ ಲೆಕ್ಕಾಚಾರವನ್ನ ದಳಪತಿಗಳು ಹಾಕಿಕೊಂಡಿದ್ದರು. ಇತ್ತ ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾದ ಡಿ ವಿ ಸದಾನಂದಗೌಡರು ರಾಜಕೀಯ ನಿವೃತ್ತಿ ಘೋಷಿಸಿದ್ದು, ಈ ಕ್ಷೇತ್ರವೇ ಸೂಕ್ತ ಎಂದು ಕಮಲ-ದಳ ನಾಯಕರು ಚರ್ಚಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಮಂಡ್ಯ ಕ್ಷೇತ್ರದಿಂದಲೇ ಡಾ.ಸಿಎನ್ ಮಂಜುನಾಥ್ ಸ್ಪರ್ಧೆ ಮಾಡಲಿ ಎಂದು ಮಾಜಿ ಸಚಿವ ಸಿಎಸ್ ಪುಟ್ಟರಾಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜಯದೇವ ಸಂಸ್ಥೆಯಿಂದ ನಿವೃತ್ತರಾದ ಬಳಿಕ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಅವರ ಸೇವೆಯನ್ನು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳುವುದಕ್ಕಾಗಿ ಬಿಜೆಪಿ ಕೂಡಾ ಅವರ ಸ್ಪರ್ಧೆಗೆ ಒತ್ತು ನೀಡಲಿದೆ. ಸ್ವತಃ ಅಮಿತ್ ಶಾ ಮತ್ತು ಮೋದಿ ಅವರೇ ಈ ವಿಚಾರದಲ್ಲಿ ಉತ್ಸುಕರಾಗಿದ್ದಾರೆ. ಅವರು ಮುಂದೆ ದೇಶದ ಆರೋಗ್ಯ ಸಚಿವರಾಗಲೂಬಹುದು ಎಂಬವರೆಗೆ ಮಾತುಗಳು ಹರಿದಾಡಿದ್ದವು.
ಒಟ್ಟಿನಲ್ಲಿ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕರು ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ್ರ ಅಳಿಯ ಡಾ.ಸಿಎನ್ ಮಂಜುನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಕುರಿತು ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಮಂಜುನಾಥ್ ಅವರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Mon, 4 March 24