ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಮುಚ್ಚಿ ಹಾಕಲು ಪೊಲೀಸರಿಗೆ ನಿರ್ದೇಶನವಿದೆ: ಆರ್ ಅಶೋಕ್ ಗಂಭೀರ ಆರೋಪ
ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಮತ್ತು ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಹಾಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್ ಅಶೋಕ್ ಗಂಭೀರ ಆರೋಪವನ್ನು ಮಾಡಿದ್ದಾರೆ. ಅಲ್ಪಸಂಖ್ಯಾತರ ರಕ್ಷಣೆ ವಿಚಾರವಾಗಿ ಸರ್ಕಾರದ ವಿರುದ್ಧ ಅಶೋಕ್ ಮಾಡಿದ ಆರೋಪದ ಕುರಿತ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 4: ‘ಅಲ್ಪಸಂಖ್ಯಾತರ ಮೇಲೆ ಆರೋಪ ಬಂದರೆ ಅದನ್ನು ಮುಚ್ಚಿಹಾಕಿ. ಬಹು ಸಂಖ್ಯಾತರ ಮೇಲೆ ಆರೋಪ ಬಂದರೆ ಕೂಡಲೇ ಕ್ರಮ ಕೈಗೊಳ್ಳಿ ಎಂಬುದಾಗಿ ಪೊಲೀಸ್ ಇಲಾಖೆಗೆ (Karnataka Police) ಸರ್ಕಾರದಿಂದ (Congress Government) ಸ್ಪಷ್ಟ ನಿರ್ದೇಶನವಿದೆ’ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕರ್ನಾಟಕದ ಪ್ರಜೆಯಾಗಿ ಇದೆಲ್ಲಾ ನಮ್ಮ ಮನಸ್ಸಿಗೆ ಬೇಸರ ತರಿಸಿದೆ. ಹಾಗಿದ್ದರೆ, ಈಗ ಕೇಳಿಬಂದಿರುವ ಎರಡೂ ಆರೋಪಗಳು ಸಾಬೀತಾದರೆ ಸರ್ಕಾರ ವಿಸರ್ಜನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ಎರಡೂ ಕಡೆ ನಡೆದಿರುವುದು ಭಯೋತ್ಪಾದನಾ ಘಟನೆ ಆದರೆ ಸರ್ಕಾರದ ಎಲ್ಲರೂ ರಾಜೀನಾಮೆ ಕೊಡುತ್ತಾರಾ? ಉದ್ಯಮ ಸಂಘರ್ಷದಿಂದ ದಾಳಿ ಎಂದು ಹೇಳಿದ್ದು ಯಾರು? ಹೀಗೆ ಹೇಳಿದರೆ ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆ ಮುಂದುವರಿಸುತ್ತಾರೆ. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಅಶೋಕ್ ಆಗ್ರಹಿಸಿದರು.
ಗೃಹಸಚಿವರು ಒತ್ತಡದಲ್ಲಿದ್ದಾರೆ. ಅವರು ಇದ್ದ ರಿಪೋರ್ಟ್ ಇದ್ದ ಹಾಗೆ ಕೊಡುವವರು. ಅವರ ಮೇಲೆ ಒತ್ತಡ ಇರುವುದು ಸತ್ಯ. ಹಾಗಾಗಿ ರಿಪೋರ್ಟ್ ಕೊಟ್ಟೇ ಇಲ್ಲ ಅಂತ ಹೇಳಿಬಿಡಿ ಎಂದು ಪೊಲೀಸರಿಗೆ ಹೇಳಿರುತ್ತಾರೆ. ನಾನೂ ಕೂಡ ಗೃಹಸಚಿವ ಆಗಿದ್ದವನು. ವರದಿಯಲ್ಲಿ ದಿನಾಂಕ ಹಾಕಿರುತ್ತಾರೆ. ಅವರು ಮ್ಯಾನೇಜ್ ಮಾಡುತ್ತಿದ್ದಾರೆ ಅಷ್ಟೆ ಎಂದು ಪ್ರತಿಪಕ್ಷ ನಾಯಕ ದೂರಿದ್ದಾರೆ.
ನಿಮ್ಮ (ಕಾಂಗ್ರೆಸ್ ಸರ್ಕಾರದ) ಮನಸ್ಥಿತಿಗೆ ನೊಬೆಲ್ ಪ್ರಶಸ್ತಿಯನ್ನೇ ಕೊಡಬೇಕು. ಗೃಹ ಸಚಿವರು ಈಗ ಯಾರದ್ದೋ ಹಿತಾಸಕ್ತಿಯ ಕೈವಾಡಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿ ಸರ್ಕಾರ ಏನೋ ಮುಚ್ಚಿಡುವ ಪ್ರಯತ್ನ ಮಾಡುತ್ತಿದೆ. ಮುಸ್ಲಿಂ ಭಯೋತ್ಪಾದಕರು ಮಾಡಿದ್ದಾರೆಂದು ಗೊತ್ತಾದರೆ ಸರ್ಕಾರಕ್ಕೆ ಹಿನ್ನಡೆ ಆಗುತ್ತದೆ ಎಂದು ಮುಚ್ಚಿಡುವ ಯತ್ನ ಮಾಡಲಾಗುತ್ತಿದೆ. ಎಷ್ಟು ದಿನ ಆಗುತ್ತೋ ಅಷ್ಟು ದಿನ ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಅಶೋಕ್ ಟೀಕಿಸಿದ್ದಾರೆ.
ಇದನ್ನೂ ಓದಿ: ಬಿಜೆಪಿಯ ಖಾಸಗಿ ಎಫ್ಎಸ್ಎಲ್ ವರದಿ ಗಣನೆಗೆ ತೆಗೆದುಕೊಳ್ಳಲ್ಲ : ಜಿ ಪರಮೇಶ್ವರ್
ಖಾಸಗಿ ರಿಪೋರ್ಟ್ನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿದೆ. ಸರ್ಕಾರಕ್ಕೆ ಕೂಡ ಈಗಾಗಲೇ ಎಫ್ಎಸ್ಎಲ್ ವರದಿ ಬಂದಿದೆ. ಯಾರನ್ನೋ ಕಾಪಾಡಲು ರಾಜ್ಯ ಸರ್ಕಾರ ಮುಚ್ಚಿಡುವ ಕೆಲಸ ಮಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಆ ರೀತಿ ಘಟನೆ ನಡೆದೇ ಇಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಪಾದಿಸಿದ್ದಾರೆ. ಬಾಂಬ್ ಸ್ಫೋಟ ವ್ಯಾವಹಾರಿಕ ಸಂಘರ್ಷ ಎಂದು ಹೇಳಿದ್ದಾರೆ. ಮಂಗಳೂರು ಬಾಂಬ್ ಸ್ಫೋಟದ ಸಂಚುಕೋರನನ್ನು ಅಮಾಯಕ ಎಂದಿದ್ದರು. ಇನ್ನೂ ಐದು ದಿನವಾದರೂ ಎಫ್ಎಸ್ಎಲ್ ವರದಿ ಕೊಡುವುದಿಲ್ಲ. ಯಾರ ಮೇಲೆಯೋ ಗೂಬೆ ಕೂರಿಸಲು ಹೊರಟಿದ್ದಾರೆ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:30 pm, Mon, 4 March 24