ನೀರಾವರಿ ವಿಚಾರದಲ್ಲಿ ಕೇಂದ್ರದಿಂದ ರಾಜ್ಯದ ಕಡೆಗಣನೆ; ‘ಜಲಧಾರೆ‘ ಮೂಲಕ ಜನರಿಗೆ ಅರಿವು ಮೂಡಿಸಲು ಯತ್ನ: ಹೆಚ್ಡಿ ಕುಮಾರಸ್ವಾಮಿ
HD Kumaraswamy | Jaladhare:ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ‘ಜಲಧಾರೆ’ ಕುರಿತು ಮಾಹಿತಿ ನೀಡಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಒಳಗೊಂಡಂತೆ 15 ತಂಡಗಳು ರಾಜ್ಯದಲ್ಲಿ ಸಂಚಾರ ಮಾಡಿ ನೀರಾವರಿ ಕುರಿತು ಜನರಲ್ಲಿ ಅರಿವು ಮೂಡಿಸಲಿವೆ ಎಂದು ಹೆಚ್‌ಡಿಕೆ ನುಡಿದಿದ್ದಾರೆ.
ಬೆಂಗಳೂರು: ಜಲಧಾರೆ (Jaladhare) ಯಾತ್ರೆಯ ಮೂಲಕ ನೀರಾವರಿ ಯೋಜನೆಗೆ ಸಂಬಂಧಿಸಿ ಕೇಂದ್ರದ ಅನ್ಯಾಯ ಹಾಗೂ ಕಿರುಕುಳದ ಕುರಿತು ಜನರಿಗೆ ಅರಿವು ಮೂಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಘೋಷಿಸಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಅವರು ಮಾತನಾಡಿದರು. ‘‘2022 ಜೆಡಿಎಸ್‌ನ ಸಂಘಟನಾ ವರ್ಷ ಎಂದು ಹಲವಾರು ಬಾರಿ ಹೇಳಿದ್ದೇನೆ. ಈ ನಿಟ್ಟಿನಲ್ಲಿ ಜಲಧಾರೆ ಯಾತ್ರೆ ಎಂಬ ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಯಾತ್ರೆ ಕೈಗೊಳ್ಳಲಾಗುವುದು. ಇದರ ಮೂಲಕ ನೀರಾವರಿ ಕುರಿತ ಕೇಂದ್ರ ಸರ್ಕಾರದ ಅನ್ಯಾಯ, ಹಾಗೂ ಕಿರುಕುಳದ ಬಗ್ಗೆ ಜನರ ಬಳಿಗೆ ತೆಗೆದುಕೊಂಡು ಹೋಗುತ್ತೇವೆ. ಕಳೆದ 75 ವರ್ಷಗಳಲ್ಲಿ ಹಲವಾರು ನದಿಗಳು ರಾಜ್ಯದಲ್ಲಿ ಹುಟ್ಟಿ ಹರಿಯುತ್ತಿವೆ. ಕೇಂದ್ರ ಸರ್ಕಾರಗಳು ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮನ್ನು ನಿರ್ಲಕ್ಷಿಸಿವೆ. ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೆರಿ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮಗೆ ಅನ್ಯಾಯ ಆಗಿದೆ. 2 ರಾಷ್ಟ್ರೀಯ ಪಕ್ಷಗಳು ಮಾಯಾ ಜಿಂಕೆಗಳಾಗಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಿವೆ. ನೀರಾವರಿ ವಿಚಾರದಲ್ಲಿ ಯಾವುದೇ ಪದ್ದತಿ ಅನುಸರಿಸಿಲ್ಲ. ಇದರ ಬಗ್ಗೆ, ಜನರಿಗೆ ಅರಿವು ಮೂಡಿಸಲಾಗುತ್ತದೆ. ಮತವಾಗಿ ಪರಿವರ್ತನೆ ಮಾಡುವ ಬದಲು, ಜನರಿಗೆ ಅರಿವು ಮೂಡಿಸಲಾಗುತ್ತದೆ’’ ಎಂದು ಕುಮಾರಸ್ವಾಮಿ ನುಡಿದಿದ್ದಾರೆ.
ಜಲಧಾರೆ ಕಾರ್ಯಕ್ರಮದ ಕುರಿತು ಕುಮಾರಸ್ವಾಮಿ ಮಾತು: ಕಾಂಗ್ರೆಸ್ ನಿಂದ ಮೇಕೆದಾಟು ಪಾದಯಾತ್ರೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಗೆ ಕೌಂಟರ್ ಕೊಡಲು ಜೆಡಿಎಸ್ ತಯಾರಾಗಿದ್ದು, ‘ಜಲಧಾರೆ’ ಸಂಕಲ್ಪ ತೊಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಆಗಬೇಕಿರುವ ಪ್ರಮುಖ ನೀರಾವರಿ ಯೋಜನೆಗಳು, ಆ ಯೋಜನೆಗಳ ಅನುಷ್ಠಾನ ಸಂಬಂಧ ಮಹಾ ಸಂಕಲ್ಪವನ್ನು ಜೆಡಿಎಸ್ ತೊಟ್ಟಿದೆ. ಜನವರಿ 26ರ ಗಣರಾಜ್ಯೋತ್ಸವದ ದಿನದಿಂದ 15 ರಥಗಳಿಂದ ರಾಜ್ಯದಲ್ಲಿ ಯಾತ್ರೆ ಮಾಡಿ, ವಿವಿಧ ಜಲಾಶಯ ಗಳಿಗೆ ತೆರಳಿ ಅಲ್ಲಿ ನೀರು ಸಂಗ್ರಹ ಮಾಡಲಾಗುತ್ತದೆ. ಅಂದೇ ಆ ಭಾಗದಲ್ಲಿ ಜೆಡಿಎಸ್ ನಾಯಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುತ್ತದೆ. ಅಂತಿಮವಾಗಿ ಬೆಂಗಳೂರಿನಲ್ಲಿ ಒಂದು ದೊಡ್ಡ ಸಮಾವೇಶ ಮಾಡಲಾಗುತ್ತದೆ. ಈ ಮೂಲಕ ಭಿನ್ನ ರೀತಿಯಲ್ಲಿ ಜನರನ್ನು ತಲುಪುವ ಯತ್ನಕ್ಕೆ ಜೆಡಿಎಸ್ ಮುಂದಾಗಿದೆ. ಆದರೆ ಕೊರೊನಾ ಪ್ರಕರಣಗಳನ್ನು ನೋಡಿಕೊಂಡು ಯಾತ್ರೆ ನಡೆಸಲಾಗುತ್ತದೆ. ಜನರ ಜೀವ ಮುಖ್ಯ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಜಲಧಾರೆ ಕಾರ್ಯಕ್ರಮದ ಕುರಿತು ಮಾತನಾಡಿದ ಕುಮಾರಸ್ವಾಮಿ, 180 ಕ್ಷೇತ್ರಗಳಿಗೂ ಜೆಡಿಎಸ್‌ನ ಜಲಧಾರೆ ಯಾತ್ರೆ ಹೋಗುತ್ತದೆ. ಜಲಧಾರೆ ಕಾರ್ಯಕ್ರಮಕ್ಕೆ ಒಂದು ಟೀಮ್ ರಚನೆ ಮಾಡುತ್ತಿದ್ದೇವೆ. ದೇವೇಗೌಡರು ಸೇರಿದಂತೆ ಒಟ್ಟು 15 ಟೀಮ್ ಮಾಡಿ ಕಳಿಸುತ್ತೇವೆ. ಎಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುತ್ತೇವೆ. ಕೊರೊನಾ ನಿಯಂತ್ರಣಕ್ಕೆ ಬಂದರೆ ಮಾತ್ರ ನಮ್ಮ ಕಾರ್ಯಕ್ರಮ. ಇಲ್ಲದಿದ್ದರೆ ಜೆಡಿಎಸ್‌ನ ಜಲಧಾರೆ ಕಾರ್ಯಕ್ರಮ ಮಾಡುವುದಿಲ್ಲ. ಆದರೆ ಜೆಡಿಎಸ್‌ನ ಜಲಧಾರೆ ರಥ ಪ್ರತಿ ಹಳ್ಳಿಗೂ ಹೋಗುತ್ತದೆ. ನೀರಾವರಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಕೇಂದ್ರದಲ್ಲಿ ಎಂದೂ ನಮಗೆ ಗೌರವ ಸಿಕ್ಕಿಲ್ಲ: ಕುಮಾರಸ್ವಾಮಿ ಆರೋಪ ಸರ್ಕಾರ ನಡೆಸುವವರಿಗೆ ಬದ್ಧತೆ ಇದ್ದರೆ ಯೋಜನೆ ಆಗುತ್ತದೆ. ಕೇಂದ್ರ ನಾಯಕರನ್ನು ಒಪ್ಪಿಸುವ ಚಾಕಚಕ್ಯತೆ ಇವರಿಗಿರಬೇಕು. ನಾನು ಸಿಎಂ ಆಗಿದ್ದಾಗ ಮೋದಿಯವರನ್ನು ಭೇಟಿ ಮಾಡಿದ್ದೆ. ನಿತಿನ್ ಗಡ್ಕರಿಯನ್ನು ಭೇಟಿಯಾಗಿ ಮನವಿ ಮಾಡಿದ್ದೇನೆ. ಆಗ ಡಿಪಿಆರ್ ಸಲ್ಲಿಸುವಂತೆ ಗಡ್ಕರಿಯವರು ಕೇಳಿದ್ದರು. ನೀರಾವರಿ ವಿಚಾರವಾಗಿ ಹಲವು ಭಾರಿ ಭೇಟಿ ಮಾಡಿದ್ದೆವು. ಎಂದೂ ಸಹ ನಮಗೆ ಗೌರವ ಸಿಕ್ಕಿಲ್ಲ. ಕಾನೂನು, ತಾಂತ್ರಿಕ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್‌ನವರಿಗೆ ದೇವೇಗೌಡರ ಇತಿಹಾಸ ಗೊತ್ತಿಲ್ಲ: ಹೆಚ್‌ಡಿಕೆ ಕಾಂಗ್ರೆಸ್‌ನವರಿಗೆ ಹೆಚ್.ಡಿ.ದೇವೇಗೌಡರ ಇತಿಹಾಸ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ‘‘ಬಾಂಗ್ಲಾದೇಶ ನೀರಿನ ಸಮಸ್ಯೆಯನ್ನು ಬಗೆಹರಿಸಿದವರು ದೇವೇಗೌಡರು. ರಾಜ್ಯದ ನೀರಾವರಿ ವಿಚಾರದಲ್ಲಿ ಹೆಚ್‌ಡಿಡಿ ಅವರನ್ನು ನಿರ್ಲಕ್ಷಿಸಬೇಡಿ. ದೇವೇಗೌಡರನ್ನು ನಿರ್ಲಕ್ಷ್ಯ ಮಾಡಿದರೆ ರಾಜ್ಯಕ್ಕೇ ನಷ್ಟ. ದೇವೇಗೌಡರು ಇನ್ನೆಷ್ಟು ದಿನಗಳು ಇರುತ್ತಾರೋ ಗೊತ್ತಿಲ್ಲ. ಈ ನಾಡಿಗಾಗಿ ದೇವೇಗೌಡರು ಹೋರಾಟ ಮಾಡುತ್ತಿದ್ದಾರೆ. ನಾನು ಕೂಡ ಈ ರಾಜ್ಯದಲ್ಲಿ ಆಡಳಿತವನ್ನು ನಡೆಸಿದ್ದೇನೆ. ಹಣ ಹೊಂದಿಸುವುದು ದೊಡ್ಡ ಸಮಸ್ಯೆಯಲ್ಲ. ಸರ್ಕಾರ, ರಾಜಕೀಯ ಪಕ್ಷಗಳಿಗೆ ಕೆಲಸದ ಬದ್ಧತೆ ಇಲ್ಲ’’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಯಾವುದೇ ಷಡ್ಯಂತ್ರದ ಕೆಲಸ ಮಾಡಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ: ‘‘ನಾನು ಯಾವುದೇ ಷಡ್ಯಂತ್ರ ಮಾಡುವ ನೀಚ ಕೆಲಸ ಮಾಡಲ್ಲ. ನನ್ನ ಮೇಲೆಯೂ ₹150 ಕೋಟಿ ಹಗರಣದ ಬಗ್ಗೆ ಕೇಳಿಬಂತು. ನಾನು ಸಿಎಂ ಆದ ಎರಡು ತಿಂಗಳಿಗೇ ಆರೋಪ ಕೇಳಿಬಂತು. ಆರೋಪ ಕೇಳಿಬಂದ ಬಳಿಕ 16 ತಿಂಗಳು ಅಧಿಕಾರದಲ್ಲಿದ್ದೆ. ಆರೋಪಿಸಿದವರ ವಿರುದ್ಧ ಅಧಿಕಾರ ದುರುಪಯೋಗ ಮಾಡಿಕೊಂಡಿಲ್ಲ. ನಾನು B.S.ಯಡಿಯೂರಪ್ಪ ವಿರುದ್ಧ ಹೋರಾಟ ಮಾಡಿದ್ದು ನಿಜ. ದಾಖಲೆಗಳನ್ನು ಮುಂದಿಟ್ಟು ನಾನು ಹೋರಾಟ ಮಾಡಿದ್ದೇನೆ. ಇವರಂತೆ ಬಿಟ್ ಕಾಯಿನ್ ಎಂದು ಆರೋಪ ಮಾಡೋದಿಲ್ಲ. ಅವರು ಹೇಳಿದರು, ಇವರು ಹೇಳಿದರೆಂದು ಮಾತನಾಡಲ್ಲ. ಎಲ್ಲಿ ಹೋಯ್ತಪ್ಪಾ ಬಿಟ್ ಕಾಯಿನ್?’’ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.
ನಾನು ದೆಹಲಿಯಲ್ಲಿ 4 ದಿನಗಳ ಕಾಲ ಇದ್ದಿದ್ದು ನಿಜ. ಒಂದು ದಿನ ನಮ್ಮ ತಂದೆಯವರ ಪುಸ್ತಕ ಬಿಡುಗಡೆ ಕಾರ್ಯಕ್ರಮವಿತ್ತು. ಹುಟ್ಟುಹಬ್ಬದ ಕಾರಣ ಒಂದು ದಿನ ದೆಹಲಿಯಲ್ಲೇ ಇದ್ದೆ. ದೆಹಲಿಯಲ್ಲಿದ್ದು ಮಸಲತ್ತು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಈ ರೀತಿಯಾಗಿ ಹೇಳುವವರಿಗೆ ಮಾತಿನ ಮೇಲೆ ಹಿಡಿತ ಇರಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ದೇವೇಗೌಡರು ಬಿಜೆಪಿಯವರ ಜತೆ ಕೈ ಜೋಡಿಸಿದ್ದಾರೆಂದಿದ್ದಾರೆ. ತಮ್ಮನ್ನು ಜೈಲಿಗೆ ಕಳಿಸಲು ಕೈ ಜೋಡಿಸಿದ್ದಾರೆ ಎಂದು ಹೇಳುತ್ತಿದ್ದರು. ಯಾವ ಕಾರಣಕ್ಕೆ ಜೈಲಿಗೆ ಕಳಿಸುತ್ತಾರೆ, ಸುಮ್ ಸುಮ್ನೆ ಕಳಿಸ್ತಾರಾ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಾದಯಾತ್ರೆ ಕುರಿತು ಹೆಚ್‌ಡಿಕೆ ವಾಗ್ದಾಳಿ: ಕಾಂಗ್ರೆಸ್ ಪಾದಯಾತ್ರೆ ಇಂದ ನಮಗೆ ಆತಂಕ ಇಲ್ಲ. ಕೃಷ್ಣ ಕಡೆಗೆ ಪಾದಯಾತ್ರೆ ಮಾಡಿದ್ದರು. ನೀರಾವರಿ ವಿಚಾರದಲ್ಲಿ ರಾಜಕೀಯ ಶುರು ಮಾಡಿದ್ದಾರೆ. ಸಿದ್ದರಾಮಯ್ಯ ಸುದ್ದಿಗೋಷ್ಠಿ ಪ್ರಸ್ತಾಪಿಸಿದ ಕುಮಾರಸ್ವಾಮಿ, 2003ರಲ್ಲಿ ಮೇಕೆದಾಟು ವಿಚಾರ ಪ್ರಸ್ತಾಪ ಮಾಡಿದ್ದಾರೆ. ಆದರ ಲಾಭವೇನು? ಎಂದು ಕೇಳಿದ್ದಾರೆ. ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿ ಶೋ ಮಾಡುತ್ತಿದ್ದಾರೆ. ಇವರು ಪಾದಯಾತ್ರೆ ಮಾಡಿದರೆ ತಮಿಳುನಾಡಿನವರೂ ಶುರು ಮಾಡುತ್ತಾರೆ. ಪಾದಯಾತ್ರೆಯಿಂದ ಮೇಕೆದಾಟು ಯೋಜನೆ ಆಗೋದಾದರೆ, ನಾನು ಕೂಡ ಕಾಂಗ್ರೆಸ್ ಪಾದಯಾತ್ರೆಗೆ ಬೆಂಬಲ ನೀಡುತ್ತೇನೆ. ನಮ್ಮ ಕಾರ್ಯಕರ್ತರಿಗೂ ಪಾದಯಾತ್ರೆಗೆ ಹೋಗಲು ಹೇಳುತ್ತೇನೆ. ಸುಮ್ಮನೆ ರಾಜ್ಯದ ಜನರಿಗೆ ವಿಷ ಹಾಕುವ ಕೆಲಸ ಮಾಡುತ್ತಿದ್ದಾರೆ. ವೋಟ್ ಬ್ಯಾಂಕ್‌ಗಾಗಿ ಇದೆಲ್ಲಾ ಮಾಡುತ್ತಿದ್ದಾರೆ ಎಂದು ಹೆಚ್‌ಡಿಕೆ ಆರೋಪಿಸಿದ್ದಾರೆ. ಜೆಡಿಎಸ್ ಅಧಿಕಾರಕ್ಕೆ ಬಂದರೆ ಇದಕ್ಕೆ ಮೋಕ್ಷವಾಗುತ್ತದೆ ಎಂದೂ ಕುಮಾರಸ್ವಾಮಿ ನುಡಿದಿದ್ದಾರೆ.
ಇದನ್ನೂ ಓದಿ:
ಕೊವಿಡ್ ಪರಿಸ್ಥಿತಿಯ ಬಗ್ಗೆ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದೇವೆ: ಆರೋಗ್ಯ ಸಚಿವಾಲಯ
Published On - 4:13 pm, Fri, 7 January 22