ಚನ್ನಪಟ್ಟಣ ಕ್ಷೇತ್ರದ ಮುಖಂಡರ ಸಭೆ, ಅಭ್ಯರ್ಥಿ ಆಯ್ಕೆ ಬಗ್ಗೆ ರಹಸ್ಯ ಕಾಯ್ದುಕೊಂಡ ಕುಮಾರಸ್ವಾಮಿ
ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣ ರಂಗೇರಿದೆ. ದಿನಾಂಕ ಘೋಷಣೆಗೂ ಮುನ್ನವೇ ಕಾಂಗ್ರೆಸ್ ಈಗಾಗಲೇ ಅಖಾಡಕ್ಕೆ ಧುಮುಕಿದೆ. ಇನ್ನು ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನಾಗಿ ಯಾರನ್ನ ಕಣಕ್ಕಿಳಿಸಬೇಕೆಂದು ಚಿಂತನೆ ನಡೆಸಿವೆ. ಇನ್ನು ಅಭ್ಯರ್ಥಿ ಆಯ್ಕೆ ಸಂಬಂಧ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರು ರಹಸ್ಯ ಸಭೆ ನಡೆಸಿದ್ದಾರೆ.
ಬೆಂಗಳೂರು, (ಜುಲೈ 07): ಲೋಕಸಭೆಗೆ ಆಯ್ಕೆಯಾಗಿರುವುದರಿಂದ ಚನ್ನಪಟ್ಟಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುರುವ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ, ಇದೀಗ ಉಪಚುನಾವಣೆಯಲ್ಲೂ ಚನ್ನಪಟ್ಟಣ ಕ್ಷೇತ್ರವನ್ನು ಗೆಲ್ಲಲು ಬಾರೀ ತಂತ್ರ ರೂಪಿಸುತ್ತಿದ್ದಾರೆ. ಈಗಾಗಲೇ ಡಿಕೆ ಶಿವಕುಮಾರ್ ಅಖಾಡಕ್ಕೆ ಇಳಿದಿದ್ದು, ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಇನ್ನು ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಸಹ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ಹೀಗಾಗಿ ಎಚ್ಡಿಕೆ, ಇಂದು (ಜುಲೈ 07) ಪಕ್ಷದ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಮಹತ್ವದ ಚರ್ಚೆ ನಡೆಸಿದರು. ಆದ್ರೆ, ಅಭ್ಯರ್ಥಿ ಯಾರು ಎನ್ನುವುದನ್ನು ಹೇಳದೇ ರಹಸ್ಯ ಕಾಯ್ದುಕೊಂಡಿದ್ದಾರೆ.
ಚನ್ನಪಟ್ಟಣ ಉಪ ಚನಾವಣೆ ಸಂಬಂಧ ಕುಮಾರಸ್ವಾಮಿ ಅವರು ಇಂದು ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಜೊತೆ ಸಭೆ ನಡೆಸಿದರು. ಈ ವೇಳೆ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವುದು ಮುಖ್ಯವಲ್ಲ. ಅಭ್ಯರ್ಥಿ ಯಾರೇ ಆದರೂ ಅವರು ಎನ್‌ಡಿಎ ಮೈತ್ರಿ ಅಭ್ಯರ್ಥಿ ಆಗಿರುತ್ತಾರೆ. ಈ ಬಗ್ಗೆ ಯಾವುದೇ ಗೊಂದಲ ಬೇಡ. ಎಲ್ಲರೂ ಒಮ್ಮತವಾಗಿ, ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ಫೈನಲ್, ಮಹತ್ವದ ಸುಳಿವು ಕೊಟ್ಟ ಯೋಗೇಶ್ವರ್
ಮೈತ್ರಿ ಅಭ್ಯರ್ಥಿ ಗೆಲ್ಲಬೇಕು ಎನ್ನುವುದು ನಮ್ಮೆಲ್ಲರ ಗುರಿ ಆಗಬೇಕು. ಪ್ರಮುಖ ಮುಖಂಡರೆಲ್ಲ ಖುದ್ದು ಭೇಟಿ ಮಾಡಿ ಸಿ.ಪಿ.ಯೋಗೇಶ್ವರ್ ಜೊತೆಗೂ ಚರ್ಚಿಸಬೇಕು. ಯೋಗೇಶ್ವರ್ ಅವರನ್ನು ಎಲ್ಲಾ ಹಂತಗಳಲ್ಲಿಯೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಅವರ ಮಾರ್ಗದರ್ಶನ ಪಡೆಯಬೇಕು ಎಂದು ಹೇಳಿದರು.
ಮುಂದಿನ ವಾರ ನಾನು ಮತ್ತೆ ಬೆಂಗಳೂರಿಗೆ ಬರುತ್ತೇನೆ. ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಭ್ಯರ್ಥಿ ಬಗ್ಗೆ ಬಿಜೆಪಿಯ ರಾಜ್ಯ, ರಾಷ್ಟ್ರೀಯ ನಾಯಕರ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು. ಈ ಮೂಲಕ ಸಿಪಿ ಯೋಗೇಶ್ವರ್ ವಿಚಾರದಲ್ಲೂ ಯಾವುದೇ ಸ್ಪಷ್ಟತೆ ಕೊಡದ ಕುಮಾರಸ್ವಾಮಿ, ಬಿಜೆಪಿ ನಾಯಕರ ಜತೆ ಚರ್ಚೆ ನಡೆಸಲಾಗುತ್ತದೆ ಅಂತಷ್ಟೇ ಹೇಳಿದರು. ಆದರೆ ಯೋಗೇಶ್ವರ್ ಜತೆಗೂ ಚರ್ಚೆ ನಡೆಸುವಂತೆ ಹೇಳುವ ಮೂಲಕ ಕುತೂಹಲ ಮೂಡಿಸಿದರು.
ಮತ್ತೊಂದೆಡೆ ಸಿಪಿ ಯೋಗೇಶ್ವರ್ ಅವರು ನಾನೇ ಚನ್ನಪಟ್ಟಣ ಬೈಎಲೆಕ್ಷನ್ ಅಭ್ಯರ್ಥಿ. ಅಧಿಕೃತ ಘೋಷಣೆ ಮಾಡುವುದು ಒಂದೇ ಬಾಕಿ ಎಂದು ಹೇಳಿದ್ದಾರೆ. ಆದ್ರೆ, ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಯಾರು ಎನ್ನುವುದು ತಿಳಿದುಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ