ವಿಧಾನಮಂಡಲ ಅಧಿವೇಶ: ಹಗರಣಗಳನ್ನು ಮುಂದಿಟ್ಟು ರಾಜ್ಯ ಸರ್ಕಾರ ಕಟ್ಟಿ ಹಾಕಲು ವಿಪಕ್ಷ ಬಿಜೆಪಿ ಸಿದ್ಧತೆ

ವಿಧಾನಮಂಡಲ ಅಧಿವೇಶನ ಆರಂಭಕ್ಕೆ ಇನ್ನೊಂದೇ ವಾರ ಬಾಕಿ ಇದೆ. ಹೀಗಾಗಿ ಸದನದಲ್ಲಿ ರಾಜ್ಯ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷ ಬಿಜೆಪಿ ಸಿದ್ಧತೆಯಲ್ಲಿದೆ. ಸರ್ಕಾರದ ವಿರುದ್ಧ ಕೇಳಿ ಬಂದಿರುವ ಹೊಸ ಆರೋಪಗಳೇ ಈಗ ವಿಪಕ್ಷಗಳ ಅಸ್ತ್ರಗಳಾಗಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸರ್ಕಾರ ವಿರುದ್ಧ ಬಿಜೆಪಿ ಅಸ್ತ್ರ ಮಾಡಿಕೊಳ್ಳಲು ಮುಂದಾಗಿದೆ.

ವಿಧಾನಮಂಡಲ ಅಧಿವೇಶ: ಹಗರಣಗಳನ್ನು ಮುಂದಿಟ್ಟು ರಾಜ್ಯ ಸರ್ಕಾರ ಕಟ್ಟಿ ಹಾಕಲು ವಿಪಕ್ಷ ಬಿಜೆಪಿ ಸಿದ್ಧತೆ
ವಿಧಾನ ಸೌಧ
Follow us
| Updated By: ಆಯೇಷಾ ಬಾನು

Updated on: Jul 08, 2024 | 11:36 AM

ಬೆಂಗಳೂರು, ಜುಲೈ.08: ಹಗರಣದ ಆರೋಪದ ಸುಳಿಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಸರ್ಕಾರ ಸಿಲುಕಿದೆ. ಸಾಲು ಸಾಲು ಹಗರಣದ ಆರೋಪಗಳೇ ಕೇಳಿ ಬರುತ್ತಿದ್ದರೆ ವಿಪಕ್ಷಗಳಿಗೆ ಇದೇ ಅಸ್ತ್ರ ಸಿಕ್ಕಂತಾಗಿದೆ. ಯಾಕೆಂದರೆ ಮೊನ್ನೆ ಮೊನ್ನೆಯಷ್ಟೇ ವಾಲ್ಮೀಕಿ ನಿಗಮದ ಹಗರಣದಲ್ಲಿ ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ ಆಗಿತ್ತು. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ (B Nagendra) ರಾಜೀನಾಮೆ ಕೊಟ್ಟಿದ್ದರು. ವಿಪಕ್ಷ ನಾಯಕ ಆರ್.ಅಶೋಕ್ (R Ashoka) ಅಂತೂ, ಒಂದು ವಿಕೆಟ್ ಅಲ್ಲ, ಮೂರ್ನಾಲ್ಕು ವಿಕೆಟ್​ ಹೋಗುತ್ತದೆ ಎಂಬ ಭವಿಷ್ಯವನ್ನೂ ನುಡಿದಿದ್ದರು. ಇದೀಗ ಮುಡಾ ಹಗರಣ ಸಿಎಂ ಸಿದ್ದರಾಮಯ್ಯಗೂ ಉರುಳಾಗಿದೆ. ಇನ್ನು ಗ್ಯಾರಂಟಿಗೆ ದಲಿತರ ದುಡ್ಡನ್ನ ಬಳಕೆ ಮಾಡಿದ್ದಾರೆ ಅಂತಾ ಇದೀಗ ಬಿಜೆಪಿ (BJP) ಆರೋಪ ಮಾಡುತ್ತಿದೆ. ಇದೆಲ್ಲವನ್ನೂ ಇಟ್ಟುಕೊಂಡು ಮುಂದಿನ ವಾರ ನಡೆಯುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷ ಬಿಜೆಪಿ ಪ್ಲ್ಯಾನ್​ ಮಾಡಿದೆ. ಹೀಗಾಗಿ ಅಧಿವೇಶನದಲ್ಲಿ ಕಾಂಗ್ರೆಸ್​ ಸರ್ಕಾರವನ್ನು ಕಟ್ಟಿ ಹಾಕಲು ವಿಪಕ್ಷಗಳಿಗೆ ನಾಲ್ಕೈದು ಅಸ್ತ್ರವೇ ಸಿಕ್ಕಂತಾಗಿದೆ.

ವಾಲ್ಮೀಕಿ ನಿಗಮದ ಹಗರಣ ಹಾಗೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯರನ್ನೇ ಟಾರ್ಗೆಟ್​ ಮಾಡಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ. ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತಾ ವಿಪಕ್ಷ ನಾಯಕರು ಪಟ್ಟು ಹಿಡಿದಿದ್ದಾರೆ. ಇನ್ನು ಅಧಿವೇಶನ ಹತ್ತಿರ ಬರುತ್ತಿರುವುದರಿಂದ ಸರ್ಕಾರದ ವಿರುದ್ಧ ದಾಖಲೆ ಸಮೇತ ಆರೋಪವನ್ನು ಪ್ರಸ್ತಾಪ ಮಾಡಲು ವಿಪಕ್ಷ ನಾಯಕರು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಸರ್ಕಾರ ಬಹಳ ದಿನ ಇರುವುದಿಲ್ಲ ಅಂತಾ ವಿಪಕ್ಷ ನಾಯಕ ಅಶೋಕ್ ಭವಿಷ್ಯ ನುಡಿದಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣವನ್ನು ಸರ್ಕಾರ ವಿರುದ್ಧ ಬಿಜೆಪಿ ಅಸ್ತ್ರ ಮಾಡಿಕೊಳ್ಳಲು ಮುಂದಾಗಿದೆ. ಸಿಎಂ ಸಿದ್ದರಾಮಯ್ಯರ ಕೈವಾಡ ಇದೆ ಅಂತಾ ಬಿಜೆಪಿ ಆರೋಪವಾಗಿದ್ದು ಸಿದ್ದರಾಮಯ್ಯ ಅವರೂ ರಾಜೀನಾಮೆ ಕೊಡಬೇಕು ಅಂತಾ ಬಿಜೆಪಿ ಪಟ್ಟು ಹಿಡಿದಿದೆ. ಇನ್ನು ಇದಕ್ಕೆ ಕೌಂಟರ್ ಆಗಿ ಬಿಜೆಪಿ ಅವಧಿಯಲ್ಲಿ ಆದ ವರ್ಗಾವಣೆ ಟ್ಯಾಲಿ ಸಂಗ್ರಕ್ಕೆ ಸರ್ಕಾರ ಮುಂದಾಗಿದೆ. ಒಂದು ವೇಳೆ ಟ್ಯಾಲಿಯಲ್ಲಿ ವ್ಯತ್ಯಾಸ ಕಂಡು ಬಂದ್ರೆ ಬಿಜೆಪಿ ವಿರುದ್ಧವೇ ಅಸ್ತ್ರ ಮಾಡಿಕೊಳ್ಳುವುದು ಕಾಂಗ್ರೆಸ್​ ಪ್ಲ್ಯಾನ್​ ಆಗಿದೆ.

ಇದನ್ನೂ ಓದಿ: ಬಿಜೆಪಿ ಕೋಮುವಾದಿ ಪಕ್ಷ ಅಲ್ಲವೆಂದು ದೇವೇಗೌಡರಿಗೆ ತಡವಾಗಿ ಗೊತ್ತಾಯಿತು: ಆರ್ ಅಶೋಕ, ವಿಪಕ್ಷ ನಾಯಕ

ಇನ್ನು ಸರ್ಕಾರದ ವಿರುದ್ಧ ಬಿಜೆಪಿ 2ನೇ ಅಸ್ತ್ರವಾಗಿ ಮುಡಾ ಹಗರಣದಲ್ಲಿ 50:50 ನಿಯಮ ಉಲ್ಲಂಘಿಸಿ ನಿವೇಶನ ಹಂಚಿಕೆ ಮಾಡಿದ್ದಾರೆ, ಸಿದ್ದರಾಮಯ್ಯ ಪತ್ನಿಗೆ ನಿವೇಶನದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಇದೆ, ಹೀಗಾಗಿ ಮುಡಾ ಹಗರಣವನ್ನು ಸಿಬಿಐಗೆ ಕೊಡಬೇಕು ಎಂದು ಅಧಿವೇಶನದಲ್ಲೂ ಪ್ರಸ್ತಾಪಿಸಿ ಕಾಂಗ್ರೆಸ್​ ಪಕ್ಷವನ್ನು ಕಟ್ಟಿ ಹಾಕಲು ಬಿಜೆಪಿ ತಂತ್ರ ಮಾಡಿದೆ.

ಇನ್ನು ಸರ್ಕಾರದ ವಿರುದ್ಧ ಗ್ಯಾರಂಟಿ ಯೋಜನೆಗೆ ಎಸ್ ಸಿಎಸ್ ಪಿ ಟಿಎಸ್ ಪಿ ಅನುದಾನ ಬಳಕೆಯ ಆರೋಪ ಕೇಳಿ ಬಂದಿದ್ದು, ದಲಿತರ ದುಡ್ಡು ಗ್ಯಾರಂಟಿಗೆ ಬಳಕೆ ಎಂದು ಬಿಜೆಪಿ ಗಂಭೀರ ಆರೋಪವನ್ನೇ ಮಾಡುತ್ತಿದೆ. ದಲಿತರ ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿಯ ಆರೋಪವಾಗಿದ್ದು, ಇದೇ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಿ ಅಸ್ತ್ರ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ. ಬಿಜೆಪಿಯ ಆರೋಪಕ್ಕೆ ಕೌಂಟರ್ ಕೊಟ್ಟಿರುವ ಸಚಿವ ಹೆಚ್​.ಸಿ. ಮಹದೇವಪ್ಪ, ಬಿಜೆಪಿ ಆರೋಪ ಸುಳ್ಳು ಅಂತಾ ತಳ್ಳಿ ಹಾಕಿದ್ದಾರೆ.

ಒಟ್ಟಾರೆಯಾಗಿ ಒಂದು ಕಡೆ ಹಗರಣದ ಸುಳಿಯಲ್ಲಿ ಕಾಂಗ್ರೆಸ್​ ಸರ್ಕಾರ ಸಿಲುಕಿದ್ದರೆ, ಇದನ್ನೇ ಅಧಿವೇಶನದಲ್ಲಿ ಅಸ್ತ್ರ ಮಾಡಿಕೊಂಡು ಕೌಂಟರ್ ಕೊಡಲು ವಿಪಕ್ಷ ಬಿಜೆಪಿ ನಾಯಕರು ಪ್ಲ್ಯಾನ್​ ಮಾಡಿದ್ದಾರೆ. ಮತ್ತೊಂದೆಡೆ ತಿರುಗೇಟು ಕೊಡಲು ಆಡಳಿತ ಪಕ್ಷ ಕಾಂಗ್ರೆಸ್​ ಕೂಡಾ ಸಿದ್ಧತೆ ನಡೆಸುತ್ತಿದೆ. ಹೀಗಾಗಿ ಈ ಬಾರಿ ಮಾಜಿ ಸಿಎಂಗಳು ಇಲ್ಲದ ಅಧಿವೇಶನ ಅದ್ಯಾವ ಮಟ್ಟಿನ ಹಂಗಾಮಕ್ಕೆ ಕಾರಣವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ