ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ: ಈಶ್ವರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ವಿರುದ್ಧ ಮುನಿಸಿಕೊಂಡು ಬಂಡಾಯವೆದ್ದಿರುವ ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಅವರು ಮತ್ತೆ ರಾಯಣ್ಣ ಬ್ರಿಗೇಡ್​ ಆರಂಭಿಸುವುದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ, ರಾಯಣ್ಣ ಬ್ರಿಗೇಡ್ ಆರಂಭಿಸುವ ಚಿಂತನೆ ಇದೆ: ಈಶ್ವರಪ್ಪ
ಕೆಎಸ್​ ಈಶ್ವರಪ್ಪ
Follow us
Basavaraj Yaraganavi
| Updated By: ವಿವೇಕ ಬಿರಾದಾರ

Updated on: Jul 08, 2024 | 12:30 PM

ಶಿವಮೊಗ್ಗ, ಜುಲೈ 08: ತುರ್ತಾಗಿ ಬಿಜೆಪಿ (BJP) ಸೇರುವ ಚಿಂತನೆ ಇಲ್ಲ. ರಾಯಣ್ಣ ಬ್ರಿಗೇಡ್ (Rayanna Brigade) ಆರಂಭಿಸುವ ಚಿಂತನೆ ಇದೆ. ಇನ್ನು ನಿರ್ಧಾರ ಕೈಗೊಂಡಿಲ್ಲ. ಹಿಂದೂ ಹೋರಾಟಗಾರರಿಗೆ ಮತ್ತು ಹಿಂದುತ್ವಕ್ಕೆ ನ್ಯಾಯ ಸಿಗಲಿ. ಅಪ್ಪ-ಮಕ್ಕಳ ಕೈಯಲ್ಲಿ ಬಿಜೆಪಿ ಇರುವುದು ತಪ್ಪು. ಈ ಕಾರಣಕ್ಕೆ ನಾನು ಚುನಾವಣೆಗೆ ಸ್ಪರ್ಧೆ ಮಾಡಿದ್ದೆ ಎಂದು ಮಾಜಿ ಸಚಿವ ಕೆಎಸ್​. ಈಶ್ವರಪ್ಪ (KS Eshwarappa) ಹೇಳಿದರು.

ತುಂಗಾ ನದಿಗೆ ಬಾಗಿನ ಅರ್ಪಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿಕ್ಕಿ ಬಿದ್ದಿದ್ದಾರೆ. ಮನೆಯಲ್ಲಿದ್ದ ಹೆಣ್ಣು ಮಕ್ಕಳನ್ನು ಬೀದಿಗೆ ತಂದಿದ್ದಾರೆ. ಈ ಹಗರಣದಲ್ಲಿ ಸಿಎಂ ಕುಟುಂಬದವರು ಭಾಗಿಯಾಗಿದ್ದಾರೆ. ಮುಡಾ ಅಕ್ರಮ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ದೇಶದ ಗಮನ ಸೆಳೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಜೀನಾಮೆ ನೀಡಿಲ್ಲ. ನಾಗೇಂದ್ರ, ಬಸವರಾಜ ದದ್ದಲ್​ರನ್ನು ಕೂಡಲೇ ಬಂಧಿಸಬೇಕು ಎಂದರು.

ಇದನ್ನೂ ಓದಿ: ವಾಪಸ್ಸಾಗುವಂತೆ ಬಿಜೆಪಿಯಿಂದ ಕರೆ ಬಂದಿದೆ, ನನ್ನ ಅಭಿಪ್ರಾಯವಿನ್ನೂ ತಿಳಿಸಿಲ್ಲ: ಕೆಎಸ್ ಈಶ್ವರಪ್ಪ

ನೇರವಾಗಿ ಹಿಂದು ಸಮಾಜ ಟೀಕೆ ಮಾಡುವ ಧೈರ್ಯ ಯಾರು ಮಾಡಿರಲಿಲ್ಲ. ಈಗ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದು ಧರ್ಮಕ್ಕೆ ಟೀಕೆ ಮಾಡುತ್ತಿದ್ದಾರೆ. ಬಿಜೆಪಿಗೆ ಪೂರ್ಣ ಬಹುಮತ ಬರದಿರುವುದು ರಾಹುಲ್ ಗಾಂಧಿಗೆ ಖುಷಿ ತರಿಸಿದೆ. ಹಿಂದೂಗಳಿಗೆ ರಾಹುಲ್ ಗಾಂಧಿ ನೋವುಂಟು ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಗೌರವ ಬರುವ ರೀತಿ ನಡೆದುಕೊಳ್ಳಲಿ. ಇಲ್ಲದಿದ್ದರೆ ಇಡೀ ಹಿಂದೂ ಸಮಾಜ ತಿರುಗಿ ಬೀಳಲಿದೆ ಎಂದು ಎಚ್ಚರಿಸಿದರು.

ಲೋಕಸಭೆ ಚುನಾವಣೆಯಲ್ಲಿ ಪುತ್ರ ಕೆ.ಈ. ಕಾಂತೇಶ್​ಗೆ ಹಾವೇರಿ ಕ್ಷೇತ್ರದ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ವಿರುದ್ಧ ಮುನಿಸಿಕೊಂಡು ಮಾಜಿ ಸಚಿವ ಕೆಎಸ್​ ಈಶ್ವರಪ್ಪ ಬಿಜೆಪಿ ಪಕ್ಷದ ವಿರುದ್ಧ ಬಂಡಾಯವೆದ್ದಿದ್ದಾರೆ. ಪಕ್ಷದ ಅಭ್ಯರ್ಥಿ ಬಿವೈ ರಾಘವೇಂದ್ರ ವಿರುದ್ಧ ಶಿವಮೊಗ್ಗದಲ್ಲಿ ಸ್ಪರ್ಧಿಸಿದ್ದರು. ವರಿಷ್ಠರ ಮನವೊಲಿಕೆಗೂ ಬಗ್ಗದ ಈಶ್ವರಪ್ಪ ಅವರು ಚುನಾವಣಾ ಅಖಾಡಕ್ಕೆ ಧುಮುಕಿದ್ದರು. ಬಳಿಕ ಬಿಜೆಪಿ ಈಶ್ವರಪ್ಪ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿತು. ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ