ಹಗರಣಗಳೇ ಬಿಜೆಪಿ ನಾಯಕರಿಗೆ ಅಸ್ತ್ರ..ಕಾಂಗ್ರೆಸ್‌ನಿಂದ ಪ್ರತ್ಯಸ್ತ್ರ: ಸದನ ಸಮರ ಫಿಕ್ಸ್
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ನಡುವೆ ಜಟಾಪಟಿ ಜೋರಾಗಿದೆ. ಸಾಲು ಸಾಲು ಆರೋಪಗಳನ್ನೇ ಬಿಜೆಪಿ ಅಸ್ತ್ರ ಮಾಡಿಕೊಂಡಿದೆ. ಇದಕ್ಕೆ ಅಧಿವೇಶನದಲ್ಲಿ ಪ್ರತ್ಯಸ್ತ್ರ ಬಿಡುವುದಕ್ಕೆ ಕಾಂಗ್ರೆಸ್ ಕೂಡ ತಯಾರಿ ನಡೆಸುತ್ತಿದೆ. ಏನಿದು ಅಸ್ತ್ರಕ್ಕೆ ಪ್ರತ್ಯಸ್ತ್ರ ಎನ್ನುವುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಬೆಂಗಳೂರು, (ಜುಲೈ 07): ಸಿದ್ದರಾಮಯ್ಯ ಸರ್ಕಾರದ ಸುತ್ತ ಬರೀ ಸವಾಲುಗಳೇ ಸುತ್ತಿಕೊಂಡಿವೆ. ಒಂದರ ಹಿಂದೆ ಮತ್ತೊಂದರಂತೆ ವಿವಾದಗಳು ಕಾಂಗ್ರೆಸ್ಗೆ ತಲೆನೋವು ತಂದಿಟ್ಟಿವೆ. ಮುಡಾ ಸೈಟ್ ಹಂಚಿಕೆ ವಿವಾದ, ವಾಲ್ಮೀಕಿ ನಿಗಮದ ಅಕ್ರಮ, ಗ್ಯಾರಂಟಿಗೆ SC-ST ಹಣ ಬಳಸಿಕೊಂಡ ವಿಚಾರ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಹೀಗಿರೋವಾಗಲೇ ಮುಂದಿನ ಸೋಮವಾರದಿಂದ ಅಧಿವೇಶನ ಆರಂಭವಾಗಲಿದೆ. ಈಗಾಗಲೇ ಹಗರಣಗಳನ್ನೇ ಅಸ್ತ್ರ ಮಾಡಿಕೊಂಡಿರುವ ಬಿಜೆಪಿ ನಾಯಕರು ಸದನದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಅತ್ತ ಬಿಜೆಪಿ ಕೈ ಪಡೆ ವಿರುದ್ಧ ಮುಗಿಬೀಳೋದಕ್ಕೆ ತುದಿಗಾಲಲ್ಲಿ ನಿಂತಿದೆ. ಇತ್ತ ಬಿಜೆಪಿ ಬಾಯಿ ಮುಚ್ಚಿಸೋದಕ್ಕೆ ಕಾಂಗ್ರೆಸ್ ನಾಯಕರು ಕೂಡ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಸ್ತ್ರಕ್ಕೆ ಪ್ರತ್ಯಸ್ತ್ರ.. ಏಟಿಗೆ-ಎದಿರೇಟು ಕೊಡೋದಕ್ಕೆ ತೆರೆ ಮರೆಯಲ್ಲೇ ಕಸರತ್ತು ನಡೆಸ್ತಿದ್ದಾರೆ. ಈ ಬಾರಿಯ ಅಧಿವೇಶನದಲ್ಲಿ ಸರ್ಕಾರಕ್ಕೆ ಮೂರು ಸವಾಲಗಳು ಎದುರಾಗಿವೆ. ಹಾಗಾದ್ರೆ, ಈ ಬಾರಿ ಅಧಿವೇಶನದಲ್ಲಿ ಸದನದಲ್ಲಿ ನಡೆಯೋ ಮೂರು ಸಮರಗಳು ಯಾವುವು ಎನ್ನುವುದು ಈ ಕೆಳಗಿನಂತಿದೆ.
ಇದನ್ನೂ ಓದಿ: ವಿಧಾನಮಂಡಲ ಮುಂಗಾರು ಅಧಿವೇಶನಕ್ಕೆ ಮುಹೂರ್ತ ಫಿಕ್ಸ್, ಸರ್ಕಾರದ ವಿರುದ್ಧ ಮುಗಿಬೀಳಲು ವಿಪಕ್ಷಗಳ ಸಜ್ಜು
ಸದನ ಸಮರ ನಂ.1 ಮುಡಾ ಹಗರಣ
ಮುಡಾದಿಂದ ಬಿಜೆಪಿ, ಜೆಡಿಎಸ್್ನ ನಾಯಕರಿಗೆ, ಯಾರಿಗಾದ್ರೂ ಸೈಟ್ ಹಂಚಿಕೆಯಾಗಿದ್ಯಾ ಅನ್ನೋ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರ ಸೈಟ್ನ ಮಾಹಿತಿಯನ್ನ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವರು ಕಲೆ ಹಾಕ್ತಿದ್ದಾರೆ. ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಸೇರಿ ಇನ್ನಿತರ ನಾಯಕರಿಗೆ ನೀಡಿರುವ ಸೈಟ್ಗಳ ಬಗ್ಗೆ ವಿವರವನ್ನ ಸಂಗ್ರಹ ಮಾಡಲಾಗುತ್ತಿದೆ. ಹೀಗೆ ಒಂದ್ವೇಳೆ ವಿಪಕ್ಷದವರ ಮಾಹಿತಿ ಸಿಕ್ಕರೆ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತ್ಯಸ್ತ್ರವಾಗಿ ಬಳಸಿಕೊಳ್ಳಲಿದೆ.
ಸದನ ಸಮರ ನಂ.2 ವಾಲ್ಮೀಕಿ ನಿಗಮ ಹಗರಣ
ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ಹಗರಣ ಪ್ರಕರಣ ಸರ್ಕಾರವನ್ನ ಮುಜುಗರಕ್ಕೀಡು ಮಾಡಿದೆ. ಈ ಪ್ರಕರಣವನ್ನ ಮುಚ್ಚಿ ಹಾಕೋದಕ್ಕೆ ಕಾಂಗ್ರೆಸ್ ಪ್ರಭಾವ ಬಳಸಿಕೊಳ್ತಿದೆ, ತನಿಖೆಯ ದಿಕ್ಕು ತಪ್ಪಿಸ್ತಿದೆ ಅಂತಾ ಬಿಜೆಪಿ ನಾಯಕರು ಬೆಂಕಿ ಉಗುಳ್ತಿದ್ದಾರೆ. ಈ ವಿಚಾರದಲ್ಲಿಯೂ ತಿರುಗುಬಾಣ ಬಿಡೋದಕ್ಕೆ ಕಾಂಗ್ರೆಸ್ ಮುಂದಾಗಿದೆ. ವಾಲ್ಮೀಕಿ ನಿಗಮದಲ್ಲಿ ನಡೆದಿರೋ ಕಳೆದ 10 ವರ್ಷದ ಹಣಕಾಸು ವಹಿವಾಟು ದಾಖಲೆ ಸಂಗ್ರಹ ಮಾಡೋದಕ್ಕೆ ಕಾಂಗ್ರೆಸ್ ಮುಂದಾಗಿದೆ. ಬಿಜೆಪಿ ಅವಧಿಯಲ್ಲಿ ಆದ ವರ್ಗಾವಣೆಯನ್ನ ಪರಸ್ಪರ ಟ್ಯಾಲಿ ಮಾಡ್ತಿದೆ. ಒಂದ್ವೇಳೆ ಟ್ಯಾಲಿಯಲ್ಲಿ ವ್ಯತ್ಯಾಸ ಏನಾದ್ರೂ ಕಂಡು ಬಂದ್ರೆ, ಬಿಜೆಪಿ ವಿರುದ್ಧ ಪ್ರತ್ಯಸ್ತ್ರ ಬಿಡಲಿದೆ.
ಸದನ ಸಮರ ನಂ.3 SCSP, TSP ಫಂಡ್
ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನೂ ಕಾಂಗ್ರೆಸ್ ಗ್ಯಾರಂಟಿಗೆ ಬಳಸಿಕೊಂಡಿದೆ. SC-ST ಸಮುದಾಯದ ವಿಶೇಷ ನಿಧಿ ದುರ್ಬಳಕೆಗೆ ಬಿಜೆಪಿ ಕೆಂಡಕಾರಿದೆ. ಅಧಿವೇಶನದಲ್ಲೂ ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ಅಂತಾ ಬಿಂಬಿಸೋದಕ್ಕೆ ಬಿಜೆಪಿ ಸಜ್ಜಾಗಿದೆ. ಆದ್ರೆ, ಪ್ರತ್ಯಸ್ತ್ರ ಬಿಡೋದಕ್ಕೆ ಕಾಂಗ್ರೆಸ್ ಒಂದೊಂದೇ ಬಾಣಗಳನ್ನ ಚೂಪು ಮಾಡಿಕೊಳ್ತಿದೆ. ಫಂಡ್ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸಚಿವ ಹೆಚ್.ಸಿ ಮಹದೇವಪ್ಪ ಸಿಎಂ ಸಿದ್ದರಾಮಯ್ಯ ಸೂಚನೆ ಕೊಟ್ಟಿದ್ದಾರೆ. ಇದಕ್ಕೆ ಇಂಬು ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಸಚಿವರು ಕೂಡ ಸಮರ್ಥನೆಯ ಮಾತನ್ನಾಡಿದ್ದಾರೆ.
ಇದೆಲ್ಲದರ ನಡುವೆ, ರಾಜ್ಯ ರಾಜಕಾರಣದಲ್ಲಿ ಸಿಎಂ-ಡಿಸಿಎಂ ಕೂಗಿನ ಸದ್ದು ಜೋರಾಗಿದೆ. ಹೀಗಿರೋವಾಗ್ಲೇ ದಲಿತ ಸಚಿವರು ಹಾಗೂ ನಾಯಕರು ಸಚಿವ ಮಹದೇವಪ್ಪ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಹೆಚ್ಚುವರಿ ಡಿಸಿಎಂ ಹಾಗು ಸಿಎಂ ಬದಲಾವಣೆಯ ಕೂಗಿನ ಬೆನ್ನಲ್ಲೇ ಸಚಿವರ ನಡೆ ಕುತೂಹಲ ಕೆರಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.