ಅಶ್ಲೀಲ ವಿಡಿಯೋ ಹಂಚಿದವರಿಗೆ ಮಾಫಿಯೇ? ಸಿದ್ದು ಮಾತಿನಲ್ಲಿ ಸಿಕ್ತು ಸುಳಿವು; ಎಸ್ಐಟಿ ಪ್ರಕಟಣೆ ಉಲ್ಲೇಖಿಸಿ ಹೆಚ್ಡಿಕೆ ತಿರುಗೇಟು
ಅಶ್ಲೀಲ ವಿಡಿಯೋಗಳುಳ್ಳ ಪೆನ್ಡ್ರೈವ್ ಹಂಚಿಕೆ ಅಪರಾಧ ಎಂದು ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿದ ಸಿಎಂ ಸಿದ್ದರಾಮಯ್ಯಗೆ ಅವರದ್ದೇ ಸರ್ಕಾರ ರಚಿಸಿದ ಎಸ್ಐಟಿಯ ಪ್ರಕಟಣೆಯನ್ನು ಮುಂದಿಟ್ಟುಕೊಂಡು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹಾಗಾದರೆ ಏನು ಹೇಳಿದ್ದರು ಸಿದ್ದರಾಮಯ್ಯ? ಕುಮಾರಸ್ವಾಮಿ ಹೇಳಿದ್ದೇನು? ಇಲ್ಲಿದೆ ವಿವರ.
ಬೆಂಗಳೂರು, ಮೇ 25: ಅತ್ಯಾಚಾರಕ್ಕಿಂತ ಅದರ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂದು ಯಾವ ಕಾನೂನಿನಲ್ಲಿದೆ ಎಂದು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯಗೆ (Siddaramaiah) ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಎಸ್ಐಟಿ ಪ್ರಕಟಣೆಯನ್ನೇ ಮುಂದಿಟ್ಟುಕೊಂಡು ತಿರುಗೇಟು ನೀಡಿದ್ದಾರೆ. ನೀವೇ ಆದೇಶಿಸಿ ರಚನೆ ಮಾಡಿಸಿರುವ ವಿಶೇಷ ತನಿಖಾ ತಂಡ (SIT) ಹೊರಡಿಸಿರುವ ಪತ್ರಿಕಾ ಪ್ರಕಟಣೆ, ರೂಪಿಸಿರುವ ಕಾನೂನುಬದ್ಧ ನಿಯಮಗಳು ‘ಸಾಕ್ಷಾತ್ ಸಿಎಂ’ ಆಗಿರುವ ನಿಮ್ಮ ಗಮನಕ್ಕೇ ಬಂದಿಲ್ಲವೆಂದರೆ!? ತಾವು ಸರಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ ಎಂದು ಕುಮಾರಸ್ವಾಮಿ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ ಮೂಲಕ ಪ್ರಶ್ನಿಸಿದ್ದಾರೆ.
ಹೀಗಿದೆ ಕುಮಾರಸ್ವಾಮಿ ತಿರುಗೇಟು
‘ಕ್ಷಣಕ್ಕೊಂದು ಮಾತು, ಘಳಿಗೆಗೊಂದು ಹೇಳಿಕೆ! ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಮೇಲೆ ನೀವು ಕೂತಿದ್ದಿರೋ ಅಥವಾ ಊಸರವಳ್ಳಿ ಏನಾದರೂ ಕೂತಿದೆಯೋ? ನನಗಂತೂ ಅನುಮಾನ! ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ ಸಿದ್ದರಾಮಯ್ಯನವರೇ. ಮೈಸೂರಿನಲ್ಲಿ ಇವತ್ತು ಬೆಳಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದೀರಿ. ನೊಂದ ಮಹಿಳೆಯರ ವಿಡಿಯೋಗಳನ್ನು ಜಾಲತಾಣಗಳಲ್ಲಿ ಹಂಚುವುದು, ಹರಡುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ! ಅಶ್ಲೀಲ ವಿಡಿಯೋಗಳನ್ನು ವೈರಲ್ ಮಾಡಿದ್ದು ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ ಎಂದು ನನಗೆ ಪ್ರಶ್ನೆ ಮಾಡಿದ್ದೀರಿ. ನಿಜ, ನೀವು ಸ್ವಯಂಘೋಷಿತ ಸಂವಿಧಾನ ತಜ್ಞರು! ಪ್ರ(ಕು)ಖ್ಯಾತ ಮಾಜಿ ವಕೀಲರು! ಹಾಲಿ ಮುಖ್ಯಮಂತ್ರಿಗಳು. ಆದರೂ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವುದು ನನ್ನ ಧರ್ಮ. ಆದರೆ, ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ, ‘ನಾನು ಲಾಯರ್ ಗಿರಿ ಮಾಡ್ತಾ ಇದ್ದೆ. ಸುಮ್ಕೆ ಕೂತ್ಕಳಿ’ ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ನೀವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಎಕ್ಸ್ ಸಂದೇಶ
•ಕ್ಷಣಕ್ಕೊಂದು ಮಾತು, ಘಳಿಗೆಗೊಂದು ಹೇಳಿಕೆ! ಕರ್ನಾಟಕದ ಮುಖ್ಯಮಂತ್ರಿ ಕುರ್ಚಿಯ ಮೇಲೆ ನೀವು ಕೂತಿದ್ದಿರೋ ಅಥವಾ ಊಸರವಳ್ಳಿ ಏನಾದರೂ ಕೂತಿದೆಯೋ? ನನಗಂತೂ ಅನುಮಾನ!! ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ @siddaramaiah ನವರೇ..… pic.twitter.com/AwI9R1G43p
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) May 25, 2024
ಮುಂದುವರಿದು, ‘ಇದೇ ಕಾರಣಕ್ಕೆ ನಾನು ನಿಮ್ಮನ್ನು ಅತ್ಯಂತ ವಿನಮ್ರತೆಯಿಂದ ವಿನಂತಿ ಮಾಡಿಕೊಂಡಿದ್ದು, ದಯಮಾಡಿ ವಕೀಲಿಕೆ ಮಾಡಬೇಡಿ ಎಂದು. ಕಾನೂನಿನ ಬಗ್ಗೆ ಸಾಸಿವೆ ಕಾಳಿನಷ್ಟು ತಿಳಿವಳಿಕೆ ಇಲ್ಲದವರೊಬ್ಬರು ‘ನಾನೂ ವಕೀಲ, ನಾನೂ ವಕೀಲಿಕೆ ಮಾಡ್ತಾ ಇದ್ದೆ’ ಎಂದು ಹೇಳಿಕೊಳ್ಳುವುದು ಗೌರವಾನ್ವಿತ ವಕೀಲ ಸಮುದಾಯಕ್ಕೆ ಮಾಡುವ ಅಪಚಾರ. ತಮಗೆ ಇನ್ನಾದರೂ ಇರಲಿ ಶಿಷ್ಟಾಚಾರ’ ಎಂದು ಕುಮಾರಸ್ವಾಮಿ ಝಾಡಿಸಿದ್ದಾರೆ.
ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ: ಹೆಚ್ಡಿಕೆ ಪ್ರಶ್ನೆ
‘ನೊಂದ ಮಹಿಳೆಯರ ವಿಡಿಯೋಗಳನ್ನು ಹಂಚುವುದು ಅಪರಾಧ ಎಂದು ಯಾವ ಸೆಕ್ಷನ್ ನಲ್ಲಿ ಹೇಳಿದ್ದಾರೆ’ ಎಂದು ಒಂದನೇ ಕ್ಲಾಸು ಮಗುವಿನಂತೆ ಕೇಳಿದ್ದೀರಿ! ನಿಮ್ಮ ಸರಕಾರದ ಅಧೀನದಲ್ಲಿರುವ, ನೀವೇ ಆದೇಶಿಸಿ ರಚನೆ ಮಾಡಿಸಿರುವ ವಿಶೇಷ ತನಿಖಾ ತಂಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ, ರೂಪಿಸಿರುವ ಕಾನೂನುಬದ್ಧ ನಿಯಮಗಳು ‘ಸಾಕ್ಷಾತ್ ಸಿಎಂ’ ಆಗಿರುವ ನಿಮ್ಮ ಗಮನಕ್ಕೇ ಬಂದಿಲ್ಲವೆಂದರೆ!? ತಾವು ಸರಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
‘ನಿಮ್ಮ (ಸಿದ್ದರಾಮಯ್ಯ) ಘನತವೆತ್ತ ಅವಗಾಹನೆಗೆ ಎಸ್ಐಟಿ ಹೊರಡಿಸಿರುವ ಪ್ರತಿಕಾ ಪ್ರಕಟಣೆಯನ್ನು ಇಲ್ಲಿ ಲಗತ್ತಿಸಿದ್ದೇನೆ. ದಯಮಾಡಿ ಓದಿಕೊಳ್ಳಿ, ಅರ್ಥ ಮಾಡಿಕೊಳ್ಳಿ. ನೀವು ಕೇಳಿದ ಎಲ್ಲಾ ಸೆಕ್ಷನ್ ಗಳು ಅದರಲ್ಲಿಯೇ ಇವೆ. ಒಂದಲ್ಲಾ, ಹತ್ತಾರು ಸಲ ಓದಿ ಮನನ ಮಾಡಿಕೊಳ್ಳಿ. ನಿಮ್ಮನ್ನು ಅಪಮಾನಿಸುತ್ತಿದ್ದೇನೆ ಎಂದು ಅನ್ಯಥಾ ಭಾವಿಸಬೇಡಿ. ವಯಸ್ಸಿನಲ್ಲಿ ಹಿರಿಯರು, ಹೆಚ್ಚು ಅನುಭಸ್ಥರು ನೀವು. ಆದರೆ, ಪೆನ್ ಡ್ರೈವ್ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪ್ರಶ್ನಾರ್ಹ. ಅಮಾಯಕ ಹೆಣ್ಮಕ್ಕಳ ಮಾನವನ್ನು ವೋಟಿಗೆ ಒತ್ತೆ ಇಟ್ಟ ಕ್ರಿಮಿನಲ್ ಅನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ. ಸಂವಿಧಾನಬದ್ಧವಾಗಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನ ದ್ರೋಹಿ ಕೃತ್ಯ ಎಸಗಿರುವ ವ್ಯಕ್ತಿ ನಿಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ! ಇದಕ್ಕಿಂತ ನಿರ್ಲಜ್ಜತೆ ಉಂಟೇ? ನೀವು, ನಿಮ್ಮ ಇಡೀ ಕಾಂಗ್ರೆಸ್ ಪಕ್ಷ ಸಿಡಿ ಶಿವು ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೀರಿ. ನಿಮ್ಮ ಇಡೀ ಕ್ಯಾಬಿನೆಟ್ ಆ ವ್ಯಕ್ತಿಯ ಹಿತಾಸಕ್ತಿಗಾಗಿ, ಆತ ರೂಪಿಸಿರುವ ಒಳಸಂಚಿನಲ್ಲಿ ಭಾಗಿಯಾಗಿದೆ. ನಿಮ್ಮದು CABINET OF KARNATAKA ಅಲ್ಲ, ಅದು CABINET OF CONSPIRACY! ಬಹಳ ನೊಂದು ಈ ಮಾತು ಹೇಳುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ಪ್ರಕರಣ: ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು
ಇಂದು ಬೆಳಗ್ಗೆ ಮೈಸೂರಿನಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, ಅತ್ಯಾಚಾರಕ್ಕಿಂತ ಅದರ ವಿಡಿಯೋ ಹಂಚಿದ್ದು ದೊಡ್ಡ ಅಪರಾಧ ಎಂದು ಯಾವ ಕಾನೂನಿನಲ್ಲಿದೆ ಹೇಳಿ. ಕುಮಾರಸ್ವಾಮಿ ಯಾವುದಾದರೂ ನಿರ್ದಿಷ್ಟ ಸೆಕ್ಷನ್ ಉಲ್ಲೇಖಿಸಿದ್ದಾರೆಯೇ? ಅದು ಭಾರತೀಯ ದಂಡ ಸಂಹಿತೆಯಲ್ಲಿದೆಯಾ? ಅಥವಾ ಇವರೇ ಬರೆದುಕೊಂಡ ಕಾನೂನಿನಲ್ಲಿ ಇದೆಯಾ ಹೇಳಿ ಎಂದಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ