ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಎದುರಾಳಿಯಾದರೆ ಒಳ್ಳೆಯದು: ಪ್ರತಾಪ್ ಸಿಂಹ

| Updated By: ಗಣಪತಿ ಶರ್ಮ

Updated on: Jan 13, 2024 | 12:24 PM

ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ಗೆ ಅಭ್ಯರ್ಥಿಗಳಿಲ್ಲ. ಮಂತ್ರಿಗಳನ್ನು ಚುನಾವಣೆಗೆ ನಿಲ್ಲಿಸುವ ದಯನೀಯ ಸ್ಥಿತಿಗೆ ಬಂದಿದೆ. ನಮ್ಮಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಗೊಂದಲ ಇಲ್ಲ. ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಎದುರಾಳಿಯಾದರೆ ಒಳ್ಳೆಯದು: ಪ್ರತಾಪ್ ಸಿಂಹ
ಪ್ರತಾಪ್ ಸಿಂಹ & ಯತೀಂದ್ರ
Follow us on

ಮೈಸೂರು, ಜನವರಿ 13: ಮೈಸೂರು-ಕೊಡಗು ಕ್ಷೇತ್ರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ (Yathindra Siddaramaiah) ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ (Pratap Simha), ಲೋಕಸಭೆ ಚುನಾವಣೆಯಲ್ಲಿ ಅವರು ಎದುರಾಳಿಯಾದರೆ ಒಳ್ಳೆಯದು ಎಂದಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಯತೀಂದ್ರ ಸ್ಪರ್ಧೆ ಮಾಡಿದರೆ ಸಿಎಂ ಪುತ್ರ – ಪತ್ರಕರ್ತನ ನಡುವೆ ಫೈಟ್ ನಡೆಯುತ್ತದೆ. ಯಾವತ್ತೂ ಎದುರಾಳಿಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಎದುರು ಯಾವ ಎದುರಾಳಿಯ ಹೆಸರು ಕೂಡ ನಡೆಯುವುದಿಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ಗೆ ಅಭ್ಯರ್ಥಿಗಳಿಲ್ಲ. ಮಂತ್ರಿಗಳನ್ನು ಚುನಾವಣೆಗೆ ನಿಲ್ಲಿಸುವ ದಯನೀಯ ಸ್ಥಿತಿಗೆ ಬಂದಿದೆ. ನಮ್ಮಲ್ಲಿ ಬಿಜೆಪಿ-ಜೆಡಿಎಸ್ ನಡುವೆ ಗೊಂದಲ ಇಲ್ಲ. ನನ್ನ ಪರ ಎರಡು ಪಕ್ಷದ ನಾಯಕರ ಆಶೀರ್ವಾದವಿದೆ ಎಂದು ಪ್ರತಾಪ್ ಸಿಂಹ ಹೇಳಿದರು.

ರಾಮ ಜನ್ಮಭೂಮಿಗಾಗಿ ರಥಯಾತ್ರೆ ಮಾಡಿದವರು ಎಲ್​ಕೆ ಅಡ್ವಾಣಿ. ಕಾನೂನು ಹೋರಾಟ ಮಾಡಿದವರು ರವಿಶಂಕರ್ ಪ್ರಸಾದ್. ನಂತರ ದೇಶಾದ್ಯಂತ ಈ ಬಗ್ಗೆ ಅಭಿಪ್ರಾಯ ಮೂಡಿಸಿದವರು ಪ್ರಧಾನಿ ಮೋದಿ. ಅಡ್ವಾಣಿಯಿಂದ ಮೋದಿವರೆಗೆ ರಾಮ ಜನ್ಮಭೂಮಿ ವಿಚಾರದಲ್ಲಿ ಬಿಜೆಪಿ ಪಾತ್ರ ದೊಡ್ಡದಿದೆ. ರಾಮ ಜನ್ಮಭೂಮಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ್ದು ಯಾವ ಪಾತ್ರವೂ ಇಲ್ಲ. ಹೀಗಾಗಿ ಅವರಿಗೆ ಅಪರಾಧಿ ಪ್ರಜ್ಞೆ ಇದೆ. ಅಪರಾಧಿ ಪ್ರಜ್ಞೆ ಕಾರಣ ಅವರು ಉದ್ಘಾಟನೆಯಿಂದ ಹಿಂದೆ ಸರಿದಿದ್ದಾರೆ ಎಂದು ಅವರು ಟೀಕಿಸಿದರು.

ಇದನ್ನೂ ಓದಿ: ಬಿಜೆಪಿ ಟಿಕೆಟ್ ಕೈ ತಪ್ಪಿದಕ್ಕೆ ಸುಮಲತಾ ಮುನಿಸು, ಬಿ.ವೈ. ವಿಜಯೇಂದ್ರ ಮಾತುಕತೆ ಸಾಧ್ಯತೆ

ಸಿಎಂ ಸಿದ್ದರಾಮಯ್ಯ ಅಯೋಧ್ಯೆಗೆ ಉದ್ಘಾಟನೆ ನಂತರ ಹೋಗುತ್ತೇನೆ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿ, ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದ ಕಾಂಗ್ರೆಸ್ ಪಾಪ ತೊಳೆದುಕೊಳ್ಳಲು ಸಿದ್ದರಾಮಯ್ಯ ಅವರು ತಮ್ಮ ಶಿಷ್ಯರ ಜೊತೆ ಅಯೋಧ್ಯೆಗೆ ಹೋಗಿ ಬರಲಿ ಎಂದು ವಾಗ್ದಾಳಿ ನಡೆಸಿದರು.

ಹೆದ್ದಾರಿ ಸುರಕ್ಷತೆಗೆ ಕೇಂದ್ರದಿಂದ 688 ಕೋಟಿ ರೂ. ಬಿಡುಗಡೆ

ಮೈಸೂರು ಬೆಂಗಳೂರು ಹೈವೇ ಸುರಕ್ಷತಾ ಕ್ರಮಕ್ಕೆ ಕೇಂದ್ರ ಸರ್ಕಾರ 688 ಕೋಟಿ ರೂ. ಬಿಡುಗಡೆ ಮಾಡಿದೆ. ಹೈವೇಯಲ್ಲಿ ಆಗುತ್ತಿದ್ದ ಅವಘಡಗಳನ್ನ ತಪ್ಪಿಸಲು ಸುರಕ್ಷತಾ ಕ್ರಮಕ್ಕೆ ಮುಂದಾಗಿದೆ. ಇದರ ಬಗ್ಗೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಬಳಿ ಮನವಿ ಮಾಡಿದ್ದೆ. ನಮ್ಮ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಇದೆಲ್ಲದರ ಕ್ರೆಡಿಟ್ ಕೇಂದ್ರ ಸರ್ಕಾರ ಮತ್ತು ಮೋದಿಯವರಿಗೆ ಸಲ್ಲುತ್ತದೆ ಎಂದು ಪ್ರತಾಪ್ ಸಿಂಹ ತಿಳಿಸಿದರು.

ಎಕ್ಸ್​ಪ್ರೆಸ್​ ವೇಯಲ್ಲಿ ಎಂಟ್ರಿ ಎಕ್ಸಿಟ್‌ಗಳು ಸಮರ್ಪಕವಾಗಿ ಇರಲಿಲ್ಲ. ಈಗ ಅದೆಲ್ಲವನ್ನೂ ಸರಿ ಮಾಡುವ ಕೆಲಸ ಆಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:24 pm, Sat, 13 January 24