Kannada News Politics INC AICC Congress President Election Counting and Results Winner to be declared on Wednesday; Check details in Kannada
AICC Results ಮಲ್ಲಿಕಾರ್ಜುನ ಖರ್ಗೆ vs ಶಶಿ ತರೂರ್: ಎಐಸಿಸಿ ಫಲಿತಾಂಶದ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು
AICC Congress President Election Counting: ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಬುದ್ಧಿಜೀವಿಗಳ ವಲಯದಲ್ಲಿ ಸಕ್ರಿಯರಾಗಿರುವ ಶಶಿ ತರೂರ್ ನಡುವೆ ಸ್ಪರ್ಧೆ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಜಯಗಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಐಸಿಸಿ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್
Follow us on
ದೆಹಲಿ: ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಯೊಬ್ಬರು ಅಖಿಲ ಭಾರತ ಕಾಂಗ್ರೆಸ್ ಸಮಿತಿ (All India Congress Committee – AICC) ಅಧ್ಯಕ್ಷ ಸ್ಥಾನವನ್ನು ಅಲಂಕರಿಸಲು ವೇದಿಕೆ ಸಿದ್ಧವಾಗಿದೆ. ಪಕ್ಷದ ಆಂತರಿಕ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಬುದ್ಧಿಜೀವಿಗಳ ವಲಯದಲ್ಲಿ ಸಕ್ರಿಯರಾಗಿರುವ ಶಶಿ ತರೂರ್ ನಡುವೆ ಸ್ಪರ್ಧೆ ನಡೆದಿತ್ತು. ಮಲ್ಲಿಕಾರ್ಜುನ ಖರ್ಗೆ ಅವರು ಜಯಗಳಿಸುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಎಐಸಿಸಿ ಚುನಾವಣೆ ಬಗ್ಗೆ ನೀವು ತಿಳಿಯಬೇಕಾದ 10 ಮುಖ್ಯ ಬೆಳವಣಿಗೆಗಳಿವು…
ಮತಎಣಿಕೆ: ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬುಧವಾರ (ಅ 19) ಬೆಳಿಗ್ಗೆ 10 ಗಂಟೆಗೆ ಮತಎಣಿಕೆ ಆರಂಭವಾಗಲಿದೆ. ದೇಶದ ವಿವಿಧೆಡೆ ಚಲಾವಣೆಯಾಗಿರುವ ಮತಪತ್ರಗಳನ್ನು ಎಣಿಸಲಾಗುತ್ತದೆ. ಒಟ್ಟು 9,915 ಅರ್ಹ ನಾಯಕರು ಕಳೆದ ಸೋಮವಾರ (ಅ 17) ನಡೆದ ಮತದಾನದಲ್ಲಿ ಮತ ಚಲಾಯಿಸಿದ್ದರು.
ಆಪದ್ಬಾಂಧವ ಖರ್ಗೆ: ಸುದೀರ್ಘ ಅವಧಿಯಿಂದ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ, ಹಲವು ಆಯಕಟ್ಟಿನ ಹುದ್ದೆಗಳನ್ನು ನಿರ್ವಹಿಸಿರುವ ಮತ್ತು ಗಾಂಧಿ ಕುಟುಂಬದ ನಿಷ್ಠಾವಂತರೆನಿಸಿರುವ ಮಲ್ಲಿಕಾರ್ಜು ಖರ್ಗೆ ಅವರು ಗೆಲ್ಲುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ. ಹಲವು ಸಂಕಷ್ಟ ಪರಿಸ್ಥಿತಿಯಲ್ಲಿ ಗಾಂಧಿ ಕುಟುಂಬದ ಕೈಹಿಡಿದವರು ಖರ್ಗೆ. ಇವರು ಗೆದ್ದರೆ ಗಾಂಧಿ ಕುಟುಂಬವು ಇವರನ್ನು ರಿಮೋಟ್ ಕಂಟ್ರೋಲ್ನಂತೆ ಬಳಸಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾಗೆಲ್ಲ ಆಗಲ್ಲ: ಖರ್ಗೆ ಅವರು ಗಾಂಧಿ ಕುಟುಂಬದ ರಿಮೋಟ್ ಕಂಟ್ರೋಲ್ ಆಗುತ್ತಾರೆ ಎಂಬ ಆರೋಪಗಳನ್ನು ಕಾಂಗ್ರೆಸ್ ನಾಯಕರು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಈ ಕುರಿತು ಪ್ರತಿಕ್ರಿಯಿಸಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ‘ಇಂಥ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಇಬ್ಬರು ಸಮರ್ಥರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಹೇಳಿದ್ದರು.
ಸಮಾನ ಅಂತರ: ಗಾಂಧಿ ಕುಟುಂಬವು ಎಐಸಿಸಿ ಅಧ್ಯಕ್ಷ ಚುನಾವಣೆಯಿಂದ ಅಂತರ ಕಾಯ್ದುಕೊಂಡಿತ್ತು. ಅಭ್ಯರ್ಥಿಗಳಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಅವರು ಈ ಅಂಶವನ್ನು ಹಲವು ಬಾರಿ ಸ್ಪಷ್ಟಪಡಿಸಿದ್ದರು. ಆದರೆ ಒಮ್ಮೆ ಮಾತ್ರ ತರೂರ್ ಅವರು, ‘ನನಗೆ ಸ್ವಲ್ಪ ಕಷ್ಟವಾಗಬಹುದು, ನಮ್ಮ ನಾಯಕರ ಒಲವು ಖರ್ಗೆ ಪರ ಇದ್ದಂತೆ ಇದೆ’ ಎಂದು ಆಕ್ಷೇಪಿಸಿದ್ದರು.
ಉದ್ದೇಶಪೂರ್ವಕ: ಶಶಿ ತರೂರ್ ನಾಮಪತ್ರಕ್ಕೆ ಸಹಿ ಹಾಕಿದ್ದ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಈ ಕುರಿತು ಸ್ಪಷ್ಟನೆ ನೀಡಿದ್ದರು. ಚುನಾವಣೆಯ ಬಗ್ಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ತರೂರ್ ಅವರು ಗಮನಾರ್ಹ ಪ್ರಮಾಣದ ಮತಗಳನ್ನು ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಪೂರ್ಣಾವಧಿ ಅಧ್ಯಕ್ಷರು: ಕಾಂಗ್ರೆಸ್ ಪಕ್ಷವು 2014 ಮತ್ತು 2019ರ ಮಹಾ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರ ನೈತಿಕ ಹೊಣೆ ಹೊತ್ತು ರಾಹುಲ್ ಗಾಂಧಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರದ ದಿನಗಳಲ್ಲಿ ಸೋನಿಯಾ ಗಾಂಧಿ ಅವರು ಹಂಗಾಮಿ ಅಧ್ಯಕ್ಷೆಯಾಗಿ ಪಕ್ಷವನ್ನು ಮುನ್ನಡೆಸಿದ್ದರು. ಇದೀಗ ಪೂರ್ಣಾವಧಿ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ.
ಪೈಲಟ್ vs ಗೆಹ್ಲೋಟ್: ಶಶಿ ತರೂರ್ ಅವರಿಗೆ ಎದುರಾಳಿಯಾಗಿ ಮಲ್ಲಿಕಾರ್ಜುನ ಖರ್ಗೆ ನಾಮಪತ್ರ ಸಲ್ಲಿಸುವ ಮೊದಲು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿಲ್ಲಬಹುದು ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿದ್ದವು. ಆದರೆ ರಾಜಸ್ಥಾನದಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದ ಹಿನ್ನೆಲೆಯಲ್ಲಿ ಅಶೋಕ್ ಗೆಹ್ಲೋಟ್ ನಾಮಪತ್ರ ಸಲ್ಲಿಸಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೇ ಇದ್ದರೂ ಗೆಹ್ಲೋಟ್ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ಸಚಿನ್ ಪೈಲಟ್ ಮುಖ್ಯಮಂತ್ರಿಯಾಗುವುದು ಗೆಹ್ಲೋಟ್ ಬೆಂಬಲಿಗರಿಗೆ ಇಷ್ಟವಿರಲಿಲ್ಲ.
ತೃಪ್ತಿಕರ: ಕಾಂಗ್ರೆಸ್ ಪಕ್ಷವು ಚುನಾವಣೆಗಾಗಿ ಮಧುಸೂದನ್ ಮಿಸ್ತ್ರಿ ಅವರನ್ನು ಸಮಿತಿಯ ಅಧ್ಯಕ್ಷರಾಗಿ ಗುರುತಿಸಿತ್ತು. ಮತದಾನ ಪ್ರಕ್ರಿಯೆಯು ಸಮರ್ಪಕವಾಗಿ ನಡೆದಿದೆ ಎಂದು ಮಿಸ್ತ್ರಿ ತೃಪ್ತಿ ವ್ಯಕ್ತಪಡಿಸಿದ್ದರು.
1939ರಲ್ಲಿ ಮೊದಲ ಚುನಾವಣೆ: ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ನೆಹರು ಕುಟುಂಬವೇ ಮುನ್ನಡೆಸಿದೆ. ಸಾಮಾನ್ಯವಾಗಿ ಎಐಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಅವಿರೋಧವಾಗಿಯೇ ನಡೆಯುತ್ತಿತ್ತು. 1939ರಿಂದ ಈವರೆಗೆ ಒಟ್ಟು ಆರು ಬಾರಿ ಮಾತ್ರ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಚುನಾವಣೆ ನಡೆದಿದೆ. 1939ರಲ್ಲಿ ಮಹಾತ್ಮಾ ಗಾಂಧಿ ಬೆಂಬಲದಿಂದ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪಿ.ಸೀತಾರಾಮಯ್ಯ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್ ಎದುರು ಸೋಲನುಭವಿಸಿದ್ದರು.
ಸೋನಿಯಾ ನಿರ್ಧಾರ: ರಾಹುಲ್ ಗಾಂಧಿ ರಾಜೀನಾಮೆಯಿಂದ ತೆರವಾದ ಎಐಸಿಸಿ ಅಧ್ಯಕ್ಷ ಸ್ಥಾನವನ್ನು ಸೋನಿಯಾ ಗಾಂಧಿ ಅನಿವಾರ್ಯ ಪರಿಸ್ಥಿತಿಯಲ್ಲಿ ಅಲಂಕರಿಸಿದ್ದರು. ‘ಜಿ-23’ ಎಂದು ಹೇಳಲಾಗುವ ನಾಯಕರು ಪತ್ರ ಬರೆದ ನಂತರ ಆಗಸ್ಟ್ 2020ರಲ್ಲಿ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಪಕ್ಷದ ಕೇಂದ್ರ ಕಾರ್ಯಕಾರಿ ಸಮಿತಿಯು ಅವರಿಗೆ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚಿಸಿತ್ತು. ನಂತರದ ದಿನಗಳಲ್ಲಿ ಸೋನಿಯಾ ಗಾಂಧಿ ನಿರ್ಧಾರದ ಅನ್ವಯವೇ ಈ ಚುನಾವಣೆ ನಡೆಯುತ್ತಿದೆ.