ಕಾಂಗ್ರೆಸ್​​​ಗೆ ಕೈಕೊಟ್ಟ ಜಗದೀಶ್​ ಶೆಟ್ಟರ್​​ ಮಾತೃಪಕ್ಷ ಬಿಜೆಪಿಗೆ ಘರ್​ವಾಪಸಿ ಆದರು

| Updated By: Rakesh Nayak Manchi

Updated on: Jan 25, 2024 | 1:32 PM

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ.

ಕಾಂಗ್ರೆಸ್​​​ಗೆ ಕೈಕೊಟ್ಟ ಜಗದೀಶ್​ ಶೆಟ್ಟರ್​​ ಮಾತೃಪಕ್ಷ ಬಿಜೆಪಿಗೆ ಘರ್​ವಾಪಸಿ ಆದರು
Image Credit source: ANI
Follow us on

ನವದೆಹಲಿ, ಜ.25: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa), ಬಿವೈ ವಿಜಯೇಂದ್ರ (BY Vijayendra), ಕೇಂದ್ರ ಸಚಿವ ಭುಪೇಂದ್ರ ಯಾದವ್​, ರಾಜೀವ್​ ಚಂದ್ರಶೇಖರ್​ ಸಮ್ಮುಖದಲ್ಲಿ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಪಕ್ಷ ಸೇರ್ಪಡೆಗೂ ಮುನ್ನ ಶೆಟ್ಟರ್ ಅವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರೊಂದಿಗೆ ದೆಹಲಿಯಲ್ಲಿನ ಅಮಿತ್ ಶಾ ನಿವಾಸದಲ್ಲಿ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಮಾತುಕತೆ ವೇಳೆ​ ಶೆಟ್ಟರ್ ಮನವೋಲಿಸುವಲ್ಲಿ ಅಮಿತ್ ಶಾ ಯಶಸ್ವಿಯಾಗಿದ್ದು, ಪಕ್ಷಕ್ಕೆ ಮರಳಲು ಶೆಟ್ಟರ್ ಒಪ್ಪಿಗೆ ಸೂಚಿಸಿದ್ದರು.

ಕಾಂಗ್ರೆಸ್​ಗೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್

ಪಕ್ಷ ಸೇರ್ಪಡೆಗೂ ಮುನ್ನ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಪಕ್ಷ ಹಾಗೂ ಎಂಎಲ್​ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಫ್ಯಾಕ್ಸ್ ಮೂಲಕ ರಾಜೀನಾಮೆ ಪತ್ರ ರವಾನಿಸಿದ್ದಾರೆ. ರಾಜೀನಾಮೆಗೂ ಮುನ್ನ ಶೆಟ್ಟರ್ ಅವರು ಹೊರಟ್ಟಿಗೆ ಕರೆ ಮಾಡಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು. ಈ ವೇಳೆ ಪತ್ರದ ಮೂಲಕ ಬೇಡ, ನೇರವಾಗಿ ಬಂದು ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಇದನ್ನೂ ಓದಿ: ಬಿಜೆಪಿ ನಾಯಕರು ಶೆಟ್ಟರ್ ದುಂಬಾಲು ಬಿದ್ದಿರೋದು ಆ ಪಕ್ಷ ದುರ್ಬಲಗೊಂಡಿರುವುದಕ್ಕೆ ಸಾಕ್ಷಿ: ಡಿಕೆ ಶಿವಕುಮಾರ್

ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ: ಶೆಟ್ಟರ್

ಪಕ್ಷ ಸೇರ್ಪಡೆ ನಂತರ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಶೆಟ್ಟರ್, ನಾನು ಪಕ್ಷಕ್ಕೆ ವಾಪಸಾಗಬೇಕೆಂದು ನಾಯಕರ ಅಪೇಕ್ಷೆ ಇತ್ತು. ಅಮಿತ್​ ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ನಾನು ಬಿಜೆಪಿ ಮರು ಸೇರ್ಪಡೆಯಾಗಿದ್ದಕ್ಕೆ ಬಹಳ ಸಂತಸ ಆಗಿದೆ. ನಾನು ಪರಿಷತ್​ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದೇನೆ. ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ನೀಡಿದ್ದೇನೆ. ಇ-ಮೇಲ್​ ಮೂಲಕ ರಾಜೀನಾಮೆಯನ್ನ ನೀಡಿದ್ದೇನೆ ಎಂದರು.

ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕು. ನಾನು ಪಕ್ಷಕ್ಕೆ ನಿಷ್ಠನಾಗಿ ಕೆಲಸ ಮಾಡುತ್ತೇನೆ. ಕಾಂಗ್ರೆಸ್​ನವರು ಕೂಡ ಒಳ್ಳೇ ಗೌರವ, ಸ್ಥಾನಮಾನ ನೀಡಿದ್ದರು. ಕಾಂಗ್ರೆಸ್​ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್​ಗೆ ಧನ್ಯವಾದ ತಿಳಿಸುತ್ತೇನೆ ಎಂದರು.

ಶೆಟ್ಟರ್ ಬಿಜೆಪಿ ಸೇರ್ಪಡೆ ಮೊಬೈಲ್​ನಲ್ಲಿ ವೀಕ್ಷಿಸಿದ ದೇವೇಗೌಡ

ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗುತ್ತಿರುವುದನ್ನು ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಅವರು ಮೊಬೈಲ್‌ನಲ್ಲಿ ವೀಕ್ಷಿಣೆ ಮಾಡಿದರು. ಹಾಸನ ಜಿಲ್ಲೆಯ ಆಲೂರು ಪಟ್ಟಣದಲ್ಲಿ ನಡೆಯುತ್ತಿರುವ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆಯಲ್ಲಿ ಕುಳಿತು ಜಗದೀಶ್ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾಗುತ್ತಿರುವುದನ್ನು ಆಪ್ತ ಸಹಾಯಕರ ಮೊಬೈಲ್ ಮೂಲಕ ವೀಕ್ಷಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:14 pm, Thu, 25 January 24