ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಿಂದ ಟೀಕೆ: ಬಿಜೆಪಿ ನಾಯಕರಿಗೆ ಡಿಕೆ ಶಿವಕುಮಾರ್ ತಿರುಗೇಟು
ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗ ನಾಯಕರಿಂದ ಟೀಕೆ ಮಾಡುತ್ತಿದ್ದು, ಈ ಹಿನ್ನೆಲೆ ಡಿಸಿಎಂ ಡಿ.ಕೆ ಶಿವಕುಮಾರ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬೆಂಗಳೂರು: ಬಿಜೆಪಿ (BJP) ಯವರು 15 ಲಕ್ಷ ಅಕೌಂಟ್‌ಗೆ ಹಾಕ್ತೀವಿ ಅಂದ್ರಲ್ಲಾ?, ಹಾಕಿದ್ರಾ? ಒಂದು ಲಕ್ಷ ರೂಪಾಯಿ ಸಾಲ ಮನ್ನಾ ಮಾಡ್ತೀವಿ ಅಂದ್ರು, ಏನಾಯ್ತು? ಮೊದಲು ಅವರು ನೀಡಿದ್ದ ಭರವಸೆಗಳ ಬಗ್ಗೆ ಮಾತನಾಡಲಿ ಎಂದು ಬಿಜೆಪಿ ನಾಯಕರ ಟೀಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನ ಐದು ಗ್ಯಾರಂಟಿಗಳ ಬಗ್ಗೆ ವಿಪಕ್ಷಗಳಿಂದ ಟೀಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಮಗು ಹುಟ್ಟಿ 15 ದಿನ ಆಗಿದೆ, ಬಟ್ಟೆ ಹೊಲಿಸಬೇಕು, ಅಳತೆ ಕೊಡಬೇಕು ಎಂದು ಟಾಂಗ್ ನೀಡಿದ್ದಾರೆ.
ಜೂನ್ 1ರಂದು ಸಚಿವ ಸಂಪುಟ ಸಭೆಯನ್ನು ಕರೆಯಲಾಗಿದೆ. 5 ಗ್ಯಾರಂಟಿಗಳ ಜಾರಿ ಬಗ್ಗೆ ಗೈಡ್‌ಲೈನ್ಸ್ ಬರಲಿದೆ. ಸ್ಟ್ರೈಕ್ ಮಾಡೋರಿಗೆ ಬೇಡ ಅನ್ನಲ್ಲ, ಮಾಡಲಿ ಎಂದರು.
ಪಕ್ಷದ ತೀರ್ಮಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಬದ್ಧ: ಡಿಕೆ ಶಿವಕುಮಾರ್
ಸಚಿವ ರಾಮಲಿಂಗಾ ರೆಡ್ಡಿ ಭೇಟಿಯ ನಂತರ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಪಕ್ಷದ ತೀರ್ಮಾನಕ್ಕೆ ಸಚಿವ ರಾಮಲಿಂಗಾ ರೆಡ್ಡಿ ಬದ್ಧರಾಗಿರುತ್ತಾರೆ. ರಾಮಲಿಂಗಾ ರೆಡ್ಡಿ ಸತತ 8 ಬಾರಿ ಶಾಸಕರಾಗಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ರಾಮಲಿಂಗಾ ರೆಡ್ಡಿ, ನನಗೆ ಸಚಿವ ಸ್ಥಾನ ಇರಲಿಲ್ಲ. ನಾವೆಲ್ಲಾ ಪಕ್ಷ ಬಿಟ್ಟು ಹೋಗಿದ್ದರೆ ಏನೋನೋ ಆಗಿರುತ್ತಿದ್ದೆವು. ಕೆಲವೊಮ್ಮೆ ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿರಬೇಕಾಗುತ್ತೆ ಎಂದು ಹೇಳಿದರು.
ಹೀಗಾಗಿ ಖಾತೆಗಳ ಹಂಚಿಕೆ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಬಹಳಷ್ಟು ಬಾರಿ ನೋವು ತಿಂದಿದ್ದೇವೆ, ಪಕ್ಷವನ್ನೂ ಕಟ್ಟಿದ್ದೇವೆ. ಮನುಷ್ಯ ಅಂದ ಮೇಲೆ ರಾಜಕೀಯ ಅಂದ ಮೇಲೆ ಹಿರಿತನ ಬರುತ್ತೆ. ಕೆಲವೊಮ್ಮೆ ರಾಜಕೀಯದಲ್ಲಿ ಏನೂ ಮಾಡಲು ಆಗಲ್ಲ. ಜನರಿಗೆ ಕೊಟ್ಟ ಭರವಸೆ ಈಡೇರಿಸಬೇಕು ಅಷ್ಟೇ. ಇನ್ನೂ ನನಗೆ ಖಾತೆ ಹಂಚಿಕೆಯ ಪಟ್ಟಿಯೇ ಸಿಕ್ಕಿಲ್ಲ ಎಂದು ಹೇಳಿದರು.
ಸಚಿವ ಆರ್.ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆಯೇ ಫಿಕ್ಸ್?
ಡಿಸಿಎಂ ಡಿಕೆ ಶಿವಕುಮಾರ್ ಮನವೊಲಿಕೆಗೆ ಬಗ್ಗಿದ ಸಚಿವ ರಾಮಲಿಂಗಾ ರೆಡ್ಡಿಗೆ ಸಾರಿಗೆ ಇಲಾಖೆಯೇ ಫಿಕ್ಸ್ ಎನ್ನಲಾಗುತ್ತಿದೆ. ಸಾರಿಗೆ ಇಲಾಖೆ ಜೊತೆ ಹೆಚ್ಚುವರಿ ಇಲಾಖೆ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಸಿಎಂ ಸಿದ್ಧರಾಮಯ್ಯ ಜೊತೆ ಚರ್ಚಿಸಿ ಹೆಚ್ಚುವರಿ ಖಾತೆ ನೀಡುವ ಬಗ್ಗೆ ತೀರ್ಮಾನ ಮಾಡುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹಾಗಾಗಿ ಭರವಸೆಗೆ ಸಚಿವ ರಾಮಲಿಂಗಾ ರೆಡ್ಡಿ ಒಪ್ಪಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Sun, 28 May 23