ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿಯಲು ಮುಂದಾದ ಡಿಕೆಶಿ ಬಾವ, ಟಿಕೆಟ್​ಗಾಗಿ ಅರ್ಜಿ ಸಲ್ಲಿಕೆ

ಮುಂದಿನ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಾವ ಟಿಕೆಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಕುಮಾರಸ್ವಾಮಿ ವಿರುದ್ಧ ಅಖಾಡಕ್ಕಿಳಿಯಲು ಮುಂದಾದ ಡಿಕೆಶಿ  ಬಾವ, ಟಿಕೆಟ್​ಗಾಗಿ ಅರ್ಜಿ ಸಲ್ಲಿಕೆ
ಡಿಕೆ ಶಿವಕುಮಾರ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 17, 2022 | 5:40 PM

ಬೆಂಗಳೂರು/ರಾಮನಗರ: ವಿಧಾನಸಭೆ ಚುನಾವಣೆಗೆ ಇನ್ನೂ ಐದಾರು ತಿಂಗಳು ಬಾಕಿ ಇದೆ. ಆಗಲೇ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ (Channapatna) ರಾಜಕೀಯ ಗುದ್ದಾಟ ಆರಂಭವಾಗಿದೆ. ಮಾಜಿ ಸಿಎಂ ಹೆಚ್​.​ಡಿ ಕುಮಾರಸ್ವಾಮಿ (HD Kumaraswamy) ಹಾಗೂ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ನಡುವೆ ಜಂಗೀ ಕುಸ್ತಿ ಶುರುವಾಗಿದೆ. ಇದರ ಮಧ್ಯೆ ಇದೀಗ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಅಂದ್ರೆ ಮಾಜಿ ಮುಖ್ಯಮಂತ್ರಿ ವಿರುದ್ಧ ಕಣಕ್ಕಿಳಿಯಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಬಾವ ಮುಂದಾಗಿದ್ದಾರೆ.

ಹೌದು… ರಾಮನಗರ ಜಿಲ್ಲೆಯ ಚನ್ನಪಟ್ಟಣದಿಂದ ಸ್ಪರ್ಧಿಸಲು ಡಿಕೆ ಶಿವಕುಮಾರ್ ಬಾವ ಶರತ್ ಚಂದ್ರ ಅವರು ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ಚನ್ನಪಟ್ಟಣ ಕ್ಷೇತ್ರದ ಟಿಕೆಟ್​ಗಾಗಿ ಯಾರೂ ಅರ್ಜಿ ಸಲ್ಲಿಸಿಲ್ಲ. ಇದರಿಂದ ಶರತ್ ಚಂದ್ರ ಅವರು ಇಂದು (ನ.17) ಎರಡು ಲಕ್ಷ ರೂ. ಡಿ.ಡಿಯೊಂದಿಗೆ ಅರ್ಜಿ ಸಲ್ಲಿಸಿದರು.

ಕಾಂಗ್ರೆಸ್ ಸೇರಿ ಆರೇ ತಿಂಗಳಿಗೆ ವಿಧಾನಸಭೆ ಚುನಾವಣೆ ಟಿಕೆಟ್​ಗಾಗಿ​ ಅರ್ಜಿ ಸಲ್ಲಿಸಿದ ​ನಟ, ನಿರ್ದೇಶಕ ಎಸ್. ನಾರಾಯಣ್

ಕಳೆದ ಚುನಾವಣೆಯಲ್ಲಿ ಟಿಕೆಟ್ ವಿಚಾರವಾಗಿ ಡಿಕೆ ಸಹೋದರರ ಜೊತೆ ಮುನಿಸಿಕೊಂಡಿದ್ದರು. ಇದೀಗ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿ ಶರತ್ ಚಂದ್ರ ಅವರು ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಟಿವಿ9ಗೆ ಶರತ್ ಚಂದ್ರ ಪ್ರತಿಕ್ರಿಯಿಸಿದ್ದು, ಹತ್ತು ವರ್ಷದಿಂದ ಕ್ಷೇತ್ರದಲ್ಲಿ‌ ಕೆಲಸ ಮಾಡಿದ್ದೇನೆ. ನಾನು ಕೆಪಿಸಿಸಿ ಸದಸ್ಯನಿದ್ದೇನೆ, ಕಳೆದ ಬಾರಿಯೇ ನನ್ನ ‌ಸಿಂಗಲ್ ನೇಮ್ ಎಐಸಿಸಿಗೆ ಹೋಗಿತ್ತು. ಕಾರಣಾಂತರಗಳಿಂದ ನನಗೆ ಟಿಕೆಟ್ ‌ಸಿಗಲಿಲ್ಲ. ಯಾರು ಬೇಕಾದರೂ ಅರ್ಜಿ ಹಾಕಬಹುದು. ಹೀಗಾಗಿ ನಾನು ಅರ್ಜಿ ಸಲ್ಲಿಸಿದ್ದೇನೆ. ಟಿಕೆಟ್ ನೀಡುವುದು ಹೈಕಮಾಂಡ್​ಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು.

ನಾನು‌ ಡಿಕೆ ಶಿವಕುಮಾರ್ ಕುಟುಂಬಕ್ಕೆ ಬರುವುದಿಲ್ಲ. ನಾನು ಚನ್ನಪಟ್ಟಣದ ಸ್ಥಳೀಯ. ನಾನು ಅವರ ಮನೆಯ ಹೆಣ್ಣು ಮಗಳನ್ನ ಮದುವೆ ಆಗಿದ್ದೇನೆ ಅಷ್ಟೇ. ಕಾರ್ಯಕರ್ತರಿಗೆ ಕೇಳಿದ್ರೆ ನನ್ನ ಹೆಸರು ಹೇಳುತ್ತಾರೆ. ನಮಗೂ ಅವಕಾಶ ಮಾಡಿಕೊಡಿ‌ ಎಂದು ಡಿಕೆ ಸಹೋದರರಿಗೆ ಹೇಳಿದ್ದೇನೆ. ನನಗೆ ಈ ಬಾರಿ ಟಿಕೆಟ್ ‌ಸಿಗುತ್ತದೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಶಿವಕುಮಾರ್ ತವರು ಜಿಲ್ಲೆ, ಕಾಂಗ್ರೆಸ್ ಅಲೆ ಇದೆ. ಶಿವಕುಮಾರ್ ಸಿಎಂ ಆಗಬೇಕು ಎಂದು ಜನ ಒಲವು ತೋರಿಸುತ್ತಿದ್ದಾರೆ. ಬದಲಾವಣೆ ಆಗುವ ಸಾಧ್ಯತೆ ಇದೆ. ಕಾರ್ಯಕರ್ತರು‌ ನನ್ನ ಮೇಲೆ ಒತ್ತಡ ಹಾಕಿದ್ರು. ಹೀಗಾಗಿ ಅರ್ಜಿ ಸಲ್ಲಿಸಿದ್ದೇನೆ ಎಂದು ಹೇಳಿದರು.

ಕುಮಾರಸ್ವಾಮಿ-ಯೋಗೇಶ್ವರ್​ ಫೈಟ್

2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್​ನಿಂದ ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಹಾಗೂ ಕಾಂಗ್ರೆಸ್​ನಿಂದ ಎಚ್​.ಎಂ. ರೇವಣ್ಣ ಅವರು ಸ್ಪರ್ಧಿಸಿದ್ದರು. ಈ ಮೂವರ ನಡುವೆ ನಡೆದ ಪೈಪೋಟಿಯಲ್ಲಿ ಕುಮಾರಸ್ವಾಮಿ ಗೆದ್ದು ಬೀಗಿದ್ದರು. ಇದೀಗ 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಸಹ ಕುಮಾರಸ್ವಾಮಿ ಮತ್ತೊಮ್ಮೆ ಚನ್ನಪಟ್ಟಣದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಇನ್ನು ಬಿಜೆಪಿ ನಾನೇ ಸ್ಪರ್ಧಿಸುತ್ತೇನೆ ಎಂದು ಸಿ.ಪಿ. ಯೋಗೇಶ್ವರ್​ ಎಚ್​ಡಿಕೆಗೆ ತೊಡೆತಟ್ಟಿದ್ದಾರೆ. ಇದೀಗ ಇದರ ಮಧ್ಯೆ ಕಾಂಗ್ರೆಸ್​ನಿಂದ ಅಖಾಡಕ್ಕಿಳಿಯಲು ಶರತ್ ಚಂದ್ರ ಇಂಗಿತ ವ್ಯಕ್ತಪಡಿಸಿದ್ದು, ಟಿಕೆಟ್​​ಗಾಗಿ ಅರ್ಜಿ ಹಾಕಿದ್ದಾರೆ. ಆದ್ರೆ, ಡಿಕೆ ಶಿವಕುಮಾರ್ ತಮ್ಮ ಭಾವನಿಗೆ ಟಿಕೆಟ್​ ಕರುಣಿಸುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Thu, 17 November 22