ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಮಹತ್ವದ ಬೇಡಿಕೆ ಇಟ್ಟ ಕೆಎಸ್ ಈಶ್ವರಪ್ಪ

|

Updated on: Jan 11, 2024 | 6:54 PM

ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗಿ ಹೈಕಮಾಂಡ್​ ಮೆಚ್ಚುಗೆಗೆ ಪಾತ್ರರಾಗಿರುವ ಕೆಎಸ್ ಈಶ್ವರಪ್ಪ ಇಂದು ನವದೆಹಲಿಯಲ್ಲಿ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಕರ್ನಾಟಕ ರಾಜ್ಯ ರಾಜಕಾರಣದ ಸ್ಥಿತಿಗತಿ ಬಗ್ಗೆ ವಿವರಿಸಿದ್ದಾರೆ. ಅಲ್ಲದೇ ಪಕ್ಷದಲ್ಲಿನ ಕೆಲ ಸಮಸ್ಯೆಗಳನ್ನು ಶಾ ಗಮನಕ್ಕೆ ತಂದಿದೆ. ಇನ್ನು ಬಹುಮುಖ್ಯವಾಗಿ ಅಮಿತ್ ಶಾ ಬಳಿ ಮಹತ್ವದ ಬೇಡಿಕೆಯೊಂದನ್ನು ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಅಮಿತ್ ಶಾ ಭೇಟಿಯಾಗಿ ಮಹತ್ವದ ಬೇಡಿಕೆ ಇಟ್ಟ ಕೆಎಸ್ ಈಶ್ವರಪ್ಪ
ಅಮಿತ್ ಶಾ, ಈಶ್ವರಪ್ಪ ಮಾತುಕತೆ
Follow us on

ನವದೆಹಲಿ, (ಜನವರಿ 11): ಚುನಾವಣಾ ರಾಜಕೀಯಕ್ಕೆ ಗುಡ್​ಬೈ ಹೇಳಿವುರ ಬಿಜೆಪಿ ಹಿರಿಯ ನಾಯಕರ ಕೆಎಸ್ ಈಶ್ವರಪ್ಪ (KS Eshwarappa) ಇದೀಗ ತಮ್ಮ ಪುತ್ರನನ್ನು ಬೆಳೆಸಲು ಮುಂದಾಗಿದ್ದಾರೆ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ (Loksabha Elections 2024) ಪುತ್ರ ಕಾಂತೇಶ್​ನನ್ನು ಕಣಕ್ಕಿಳಿಸಲು ಹಾವೇರಿ (Haveri) ಟಿಕೆಟ್​ಗೆ ಲಾಬಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು(ಜನವರಿ 11) ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಪುತ್ರನಿಗೆ ಹಾವೇರಿ ಲೋಕಸಭಾ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮಾಜಿ ಸಚಿವ ಕೆಎಸ್ ಈಶ್ವರಪ್ಪ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿ ರಾಜ್ಯ ರಾಜಕಾರಣದ ಬಗ್ಗೆ ಸಮಲೋಚನೆ ಮಾಡಿದ್ದಾರೆ. ಈ ವೇಳೆ ಪಕ್ಷದಲ್ಲಿನ ಕೆಲವೊಂದು ಸಮಸ್ಯೆ, ಗೊಂದಲಗಳ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪುತ್ರ ಕಾಂತೇಶ್​ ಆಕಾಂಕ್ಷಿಯಾಗಿದ್ದಾರೆ. ಪುತ್ರನ ಸ್ಪರ್ಧೆಗೆ ಅನುವು ಮಾಡಿಕೊಡಬೇಕೆಂದು ಈಶ್ವರಪ್ಪ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬಿಜೆಪಿ ಅಭಿಪ್ರಾಯ ಸಂಗ್ರಹಣೆ ಸಭೆ: ಮುಖಂಡರಿಂದ ಭಿನ್ನ ಅಭಿಪ್ರಾಯಗಳು ವ್ಯಕ್ತ, ಪುತ್ತೂರು ಕ್ಷೇತ್ರದ ಸೋಲಿನ ಬಗ್ಗೆ ಚರ್ಚೆ

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಈಶ್ವರಪ್ಪ ಹೇಳಿದ್ದರು. ಈಶ್ವರಪ್ಪನವರ ನಡೆಗೆ ಬಿಜೆಪಿ ಹೈಕಮಾಂಡ್ ಶ್ಲಾಘಿಸಿತ್ತು. ಅಲ್ಲದೇ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೇ ಪಕ್ಷ ನಿಮ್ಮ ಜೊತೆ ಇರುತ್ತದೆ ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹೈಕಮಾಂಡ್​ ತಮ್ಮ ಪುತ್ರನಿಗೆ ಈ ಬಾರಿ ಹಾವೇರಿ ಲೋಕಸಭಾ ಟಿಕೆಟ್ ನೀಡಲಿದೆ ಎನ್ನುವ ವಿಶ್ವಾಸದಲ್ಲಿ ಈಶ್ವರಪ್ಪ ಇದ್ದಾರೆ.

ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ಇನ್ನು ತವರು ಜಿಲ್ಲೆಯ ಬಗ್ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ಸ್ಪರ್ಧೆ ಬಗ್ಗೆ ನನ್ನ ಜತೆ ಯಾರೂ ಚರ್ಚೆ ಮಾಡಿಲ್ಲ. ಯಾರೂ ನನ್ನ ಸಂಪರ್ಕ ಮಾಡಿಲ್ಲ. ವರಿಷ್ಠರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ಬದ್ಧರಾಗಿರುತ್ತೇವೆ. ಪಕ್ಷ ಯಾರನ್ನೇ ಅಭ್ಯರ್ಥಿ ಮಾಡಿದರೂ ಒಪ್ಪಿಕೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇನ್ನು ಇದೇ ವೇಳೆ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಈಶ್ವರಪ್ಪ ಭೇಟಿ ಮಾಡಿ ಹಾವೇರಿ ಟಿಕೆಟ್​ ಬೇಡಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅಮಿತ್ ಶಾರನ್ನು ಯಾರಾದರೂ ಭೇಟಿ ಮಾಡಬಹುದು. ಕೆ.ಎಸ್​.ಈಶ್ವರಪ್ಪ ಭೇಟಿ ಮಾಡಿರುವುದರಲ್ಲಿ ತಪ್ಪೇನಿದೆ? ಪುತ್ರನಿಗೆ ಟಿಕೆಟ್ ಕೊಡಿಸಲು ಯತ್ನಿಸುತ್ತಿದ್ದಾರೆ ತಪ್ಪೇನಿದೆ? ಈಶ್ವರಪ್ಪ ತಮ್ಮ ಪುತ್ರನಿಗೆ ಟಿಕೆಟ್ ಕೇಳಲಿ ತಪ್ಪಿಲ್ಲ ಎಂದರು.

ಒಟ್ಟಿನಲ್ಲಿ ಈಶ್ವರಪ್ಪ ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ಇದೀಗ ಪುತ್ರ ಕಾಂತೇಶ್​ನನ್ನು ಅಖಾಡಕ್ಕಿಳಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಹೈಕಮಾಂಡ್​ ಈಶ್ವರಪ್ಪ ಮನವಿಗೆ ಸ್ಪಂದಿಸುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:52 pm, Thu, 11 January 24