Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಿತ್ ಶಾ ಭೇಟಿಯಾದ ವಿ ಸೋಮಣ್ಣ: ಏನೇನು ನಡೆಯಿತು ಚರ್ಚೆ?

ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡವಂತೆ ಅಮಿತ್ ಶಾ ಬಳಿ ಸೋಮಣ್ಣ ಮನವಿ ಮಾಡಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ. ಯಾವುದಕ್ಕೂ ತುಮಕೂರು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡುವೆ ಎಂದು ಸೋಮಣ್ಣ ಹೇಳಿದ್ದಾರೆ ಎನ್ನಲಾಗಿದೆ.

Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on:Jan 13, 2024 | 2:37 PM

ನವದೆಹಲಿ, ಜನವರಿ 13: ನಾಲ್ಕು ದಿನಗಳ ಕಾಲ ಕಾದು ಕೊನೆಗೂ ಮಾಜಿ ಸಚಿವ, ಬಿಜೆಪಿ ಹಿರಿಯ ನಾಯಕ ವಿ ಸೋಮಣ್ಣ (V Somanna) ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಶನಿವಾರ ದೆಹಲಿಯಲ್ಲಿ ಭೇಟಿ ಮಾಡಿದರು. ಉಭಯ ನಾಯಕರು ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದು, ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿಗಾದ ಸೋಲು ಮತ್ತು ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಸ್ತಾಪವಾಗಿದೆ.

ಇದೇ ವೇಳೆ, ವಿಧಾನಸಭಾ ಚುನಾವಣೆಯ ಸೋಲಿನ ಬಗ್ಗೆ ಅಮಿತ್ ಶಾ ಅವರಿಗೆ ವಿವರಿಸಿದ ಸೋಮಣ್ಣ, ರಾಜ್ಯ ನಾಯಕರ ವಿರುದ್ಧ ದೂರು ನೀಡಿದ್ದಾರೆ.

ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡವಂತೆ ಅಮಿತ್ ಶಾ ಬಳಿ ಸೋಮಣ್ಣ ಮನವಿ ಮಾಡಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಅಮಿತ್ ಶಾ ಮನವಿ ಮಾಡಿದ್ದಾರೆ. ಯಾವುದಕ್ಕೂ ತುಮಕೂರು ಸೀಟು ಹಂಚಿಕೆ ಬಳಿಕ ನಿರ್ಧಾರ ಮಾಡುವೆ ಎಂದು ಸೋಮಣ್ಣ ಹೇಳಿದ್ದಾರೆ ಎನ್ನಲಾಗಿದೆ.

ಮೂರು ಲೋಕಸಭಾ ಸ್ಥಾನ ಗೆಲ್ಲಿಸಿಕೊಡುವೆ: ಸೋಮಣ್ಣ

ಬಿಜೆಪಿ ಹೈಕಮಾಂಡ್ ಜತೆ ಮಾತುಕತೆ ಬಳಿಕ ಆ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಸೋಮಣ್ಣ, ಪಕ್ಷದ ಮುಖ್ಯವಾಹಿನಿಯಲ್ಲಿ ಇರುವಂತೆ ಹೈಕಮಾಂಡ್ ನಾಯಕರು ಸೂಚಿಸಿದ್ದಾರೆ. ಅಮಿತ್ ಶಾ, ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ರಾಜ್ಯಸಭಾ ಸ್ಥಾನಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ. ರಾಜ್ಯದಲ್ಲಿ 3 ಲೋಕಸಭಾ ಕ್ಷೇತ್ರ ಗೆಲ್ಲಿಸಿಕೊಡುವುದಾಗಿ ಹೇಳಿದ್ದೇನೆ ಎಂದರು.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಯತೀಂದ್ರ ಎದುರಾಳಿಯಾದರೆ ಒಳ್ಳೆಯದು: ಪ್ರತಾಪ್ ಸಿಂಹ

ಕೆಲವೊಂದು ಪ್ರಮುಖ ವಿಚಾರಗಳನ್ನು ನಾನು ಚರ್ಚೆ ಮಾಡಿದ್ದೇನೆ. ಮಾತುಕತೆಯ ಎಲ್ಲಾ ವಿವರಗಳನ್ನು ಈಗ ಬಹಿರಂಗವಾಗಿ ಹೇಳಲಾಗದು. ಶಾ ಭೇಟಿ ಬಹಳ ಸಮಾಧಾನ ತಂದಿದೆ. ನಿಮ್ಮ ಸೇವೆಯನ್ನು ಬಳಸಿಕೊಳ್ಳುವುದಾಗಿ ಅವರು ಹೇಳಿದ್ದಾರೆ ಎಂದು ಸೋಮಣ್ಣ ಹೇಳಿದರು.

ವಿಧಾನಸಭೆ ಚುನಾವಣೆ ಬಳಿಕ ಸಿಡಿದೆದ್ದಿ ಸೋಮಣ್ಣ

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನಿವಾರ್ಯವಾಗಿ ಒಪ್ಪಿಕೊಂಡು ಸೋತ ನಂತರ ಸೋಮಣ್ಣ ಪಕ್ಷದ ರಾಜ್ಯ ನಾಯಕರ ವಿರುದ್ಧ ಸಿಡಿದೆದ್ದಿದ್ದರು. ಹಲವು ನಾಯಕರ ವಿರುದ್ಧ ಬಹಿರಂಗ ಟೀಕೆಗಳನ್ನೂ ಮಾಡಿದ್ದರು. ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ ಎಂಬ ವದಂತಿಗಳೂ ಹಬ್ಬಿದ್ದವು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಅವರು ಇದೀಗ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:29 pm, Sat, 13 January 24