ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಇಂದಿನ ಸಭೆಯಲ್ಲಿ ಯಡಿಯೂರಪ್ಪ-ಬೊಮ್ಮಾಯಿ ಪಾಲ್ಗೊಳ್ಳುತ್ತಾರಾ?
ವಿಧಾನಸಭೆ ಚುನಾವಣೋತ್ತರ ಬೆಳವಣಿಗೆಗಳು ಬಿಜೆಪಿಯಲ್ಲಿ ನಾನಾ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಮಹತ್ವದ ಸಭೆ ಕರೆದಿದೆ.
ಬೆಂಗಳೂರು: ಕರ್ನಾಟಕ ವಿಧಾಮಸಭಾ ಚುನಾವಣೆ (Karnataka Assembly Elections 2023) ಸೋಲು ವಿಪಕ್ಷ ಬಿಜೆಪಿಯನ್ನು (BJP) ಕಂಗೆಡಿಸಿದೆ. ನಾಯಕರು ದಿನಕ್ಕೊಬ್ಬರಂತೆ ಬಹಿರಂಗವಾಗಿ ಮಾತನಾಡುತ್ತಿದ್ದು ಶೋಕಾಸ್ ನೋಟೀಸ್ ಕೊಡುವ ಹಂತಕ್ಕೆ ತಲುಪಿದೆ. ಈ ಮಧ್ಯೆ ಇಂದು ( ಜೂನ್ 30) ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ (Nalin Kumar Kateel) ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯ್ದ ಪದಾಧಿಕಾರಿಗಳ ಮತ್ತು ಕೆಲವು ಪ್ರಮುಖರ ಸಭೆ ನಡೆಯಲಿದೆ. ಈ ಬ್ರೇಕ್ ಫಾಸ್ಟ್ ಸಭೆಯಲ್ಲಿ ಚುನಾವಣೆ ಬಳಿಕದ ನಾಯಕರ ಹೇಳಿಕೆಗಳ ಕುರಿತು ಚರ್ಚೆ ನಡೆಯಲಿದೆ. ಅಲ್ಲದೇ ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಪಕ್ಷದಲ್ಲಾಗುತ್ತಿರುವ ಆಂತರಿಕ ಕಚ್ಚಾಟ ಹಾಗೂ ವಿರೋಧ ಪಕ್ಷದ ನಾಯಕನ ಬಗ್ಗೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದುಬಂದಿದೆ.
ವಿಧಾನಸಭೆ ಚುನಾವಣೋತ್ತರ ಬೆಳವಣಿಗೆಗಳು ಬಿಜೆಪಿಯಲ್ಲಿ ನಾನಾ ಸ್ವರೂಪಗಳನ್ನು ಪಡೆದುಕೊಳ್ಳುತ್ತಿದೆ. ಅಂತರ್ಯುದ್ಧ ರೀತಿಯಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಪಕ್ಷ ಇನ್ನೂ ಖಡಕ್ ಪ್ರತಿಕ್ರಿಯೆ ಕೊಡದೇ ಇರುವುದು ಪದಾಧಿಕಾರಿಗಳನ್ನೂ ಕೊಂಚ ಸಿಟ್ಟಿಗೆಬ್ಬಿಸಿದೆ. ಚುನಾವಣೆಯಲ್ಲಿ ಗೆದ್ದ ಮತ್ತು ಸೋತ ನಾಯಕರು ಸ್ಫರ್ಧೆಗೆ ಬಿದ್ದವರಂತೆ ಬಹಿರಂಗವಾಗಿ ಹೇಳಿಕೆ ಕೊಡುತ್ತಿರುವುದನ್ನೂ ನೋಡಿಯೂ ಪಕ್ಷದ ನಾಯಕತ್ವ ಸುಮ್ಮನಿರುವುದಕ್ಕೆ ಪದಾಧಿಕಾರಿಗಳು ರಾಜ್ಯಾಧ್ಯಕ್ಷರನ್ನು ಪ್ರಶ್ನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇಂದು ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯ್ದ ಪದಾಧಿಕಾರಿಗಳ ಮತ್ತು ಕೆಲವು ಪ್ರಮುಖರ ಸಭೆ ಕರೆದಿದ್ದಾರೆ. ಬ್ರೇಕ್ ಫಾಸ್ಟ್ ಮೀಟಿಂಗ್ ನಲ್ಲಿ ಚುನಾವಣೆ ಬಳಿಕದ ನಾಯಕರ ಹೇಳಿಕೆಗಳ ಕುರಿತು ಚರ್ಚೆ ನಡೆಯಲಿದೆ.
ಈ ಮಧ್ಯೆ ಬಹಿರಂಗವಾಗಿ ಹೇಳಿಕೆ ನೀಡಿ ಅಂತರ್ಯುದ್ಧ ಹೆಚ್ಚಿಸಿದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಜೆಪಿ ರಾಜ್ಯ ಶಿಸ್ತು ಸಮಿತಿ ಶೋಕಾಸ್ ನೋಟೀಸ್ ನೀಡಿದೆ. ಒಂದು ವಾರದೊಳಗಾಗಿ ಕಾರಣ ಸಹಿತ ಉತ್ತರಿಸುವಂತೆ ಹೇಳಿರುವ ಶಿಸ್ತು ಸಮಿತಿ, ಬಹಿರಂಗ ಹೇಳಿಕೆಗೆ ಮುಂದಾಗದಂತೆ ಸೂಚಿಸಿದೆ.
ಇನ್ನು ಇಂದಿನ ಸಭೆಯ ರಾಜ್ಯಾಧ್ಯಕ್ಷರ ರಾಜೀನಾಮೆಗೆ ನೇರವಾಗಿ ಆಗ್ರಹಿಸಿದ್ದ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಕೆಲವು ಆಯ್ದ ಪ್ರಮುಖರಿಗೆ ಆಹ್ವಾನ ನೀಡಲಾಗಿದ್ದು, ಸಭೆಯಲ್ಲಿ ನಳೀನ್ ಕುಮಾರ್ ಕಟೀಲ್ ಚುನಾವಣಾ ಸೋಲಿನ ಕುರಿತ ಸ್ವಪಕ್ಷೀಯರ ಆರೋಪಗಳಿಗೆ ಉತ್ತರ ನೀಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಸಭೆಯಲ್ಲಿ ಮಾಜಿ ಸಿಎಂಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವಿಕೆ ಬಗ್ಗೆ ಇನ್ನೂ ಖಚಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ರಾಜ್ಯ ಬಿಜೆಪಿ ಸಭೆ ತೀವ್ರ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ