ಅಧಿವೇಶನ ಹತ್ತಿರವಾಗುತ್ತಿದ್ದರೂ ಆಯ್ಕೆಯಾಗದ ವಿಪಕ್ಷ ನಾಯಕ: ಬಿಜೆಪಿ ಶಾಸಕರಿಗೆ ಪ್ರಾಣಸಂಕಟ

ವಿಪಕ್ಷ ನಾಯಕರಿಲ್ಲದೇ ಅನುದಾನ ಕೇಳುವುದಕ್ಕೂ ಸಮಸ್ಯೆಯಾಗಿದೆ. ಅನುದಾನ ವಾಪಸ್ ಪಡೆದು ಕಾಂಗ್ರೆಸ್ ಶಾಸಕರಿಗೆ ಕೊಡುತ್ತಿದ್ದಾರೆ. ಹೀಗಾದರೆ ನಾವು ಮುಂದಿನ ಅಧಿವೇಶನಕ್ಕೆ ಬರುವುದು ಹೇಗೆ ಎಂದು ಬಿಜೆಪಿ ಶಾಸಕರು ಯಡಿಯೂರಪ್ಪ ಬಳಿ ಅಳಲು ತೋಡಿಕೊಂಡಿದ್ದಾರೆ.

ಅಧಿವೇಶನ ಹತ್ತಿರವಾಗುತ್ತಿದ್ದರೂ ಆಯ್ಕೆಯಾಗದ ವಿಪಕ್ಷ ನಾಯಕ: ಬಿಜೆಪಿ ಶಾಸಕರಿಗೆ ಪ್ರಾಣಸಂಕಟ
ಸಾಂದರ್ಭಿಕ ಚಿತ್ರ
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on: Nov 03, 2023 | 7:37 PM

ಬೆಂಗಳೂರು, ನವೆಂಬರ್ 3: ಹೊಸ ಸರ್ಕಾರ ರಚನೆಯಾದ ಬಳಿಕ ವಿಧಾನಸಭೆ ಎರಡನೇ ಅಧಿವೇಶನ (Karnataka Assembly Session) ಹತ್ತಿರವಾಗುತ್ತಿದ್ದರೂ ವಿಧಾನಸಭೆ ಮತ್ತು ವಿಧಾನ ಪರಿಷತ್ ವಿಪಕ್ಷ ನಾಯಕರ (Opposition Leader) ಸ್ಥಾನ ಭರ್ತಿಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಎರಡನೇ ಅಧಿವೇಶನ ಕೂಡಾ ವಿಪಕ್ಷ ನಾಯಕರಿಲ್ಲದೇ ಎದುರಿಸಬೇಕಾದ ಆತಂಕದಲ್ಲಿ ಬಿಜೆಪಿ (BJP) ಶಾಸಕರು ಇದ್ದಾರೆ.

ಇನ್ನೊಂದು ತಿಂಗಳಲ್ಲಿ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಉಭಯ ಸದನಗಳ ವಿಪಕ್ಷ ನಾಯಕರ ನೇಮಕಾತಿ ಬಗ್ಗೆ ಬಿಜೆಪಿ ಹೈಕಮಾಂಡ್ ಕಡೆಯಿಂದ ಇನ್ನೂ ಯಾವುದೇ ಸುಳಿವು ಕಾಣಿಸುತ್ತಿಲ್ಲ. ಹೀಗಾಗಿ ವಿಪಕ್ಷ ನಾಯಕರಿಗಾಗಿ ಕಾಯ್ದು ಕಾಯ್ದು, ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಬೇಸರಗೊಂಡಿರುವ ಬಿಜೆಪಿ ಶಾಸಕರು ಈಗ ವಿಪಕ್ಷ ನಾಯಕರ ನೇಮಕಾತಿಗಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮೊರೆ ಹೋಗಿದ್ದಾರೆ.

ಬಿಎಸ್ ಯಡಿಯೂರಪ್ಪಗೆ ಶಾಸಕರ ಮೊರೆ

ಶೀಘ್ರ ವಿಪಕ್ಷ ನಾಯಕರ ನೇಮಕಾತಿಗೆ ಹೈಕಮಾಂಡ್ ಜೊತೆ ಮಾತನಾಡಿ ಎಂದು ಯಡಿಯೂರಪ್ಪ ಅವರಿಗೆ ಬೆಂಗಳೂರಿನ ಬಿಜೆಪಿ ಶಾಸಕರು ಮೌಖಿಕ ಮನವಿ ಮಾಡಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ಬಗ್ಗೆ ವರಿಷ್ಠರ ಜೊತೆ ಮಾತನಾಡಿ. ನಮಗೆ ಹೋದಲ್ಲಿ ಬಂದಲ್ಲಿ ಉತ್ತರಿಸುವುದೇ ಕಷ್ಟವಾಗುತ್ತಿದೆ. ವಿಪಕ್ಷ ನಾಯಕರಿಲ್ಲದೇ ಅನುದಾನ ಕೇಳುವುದಕ್ಕೂ ಸಮಸ್ಯೆಯಾಗಿದೆ. ಅನುದಾನ ವಾಪಸ್ ಪಡೆದು ಕಾಂಗ್ರೆಸ್ ಶಾಸಕರಿಗೆ ಕೊಡುತ್ತಿದ್ದಾರೆ. ಹೀಗಾದರೆ ನಾವು ಮುಂದಿನ ಅಧಿವೇಶನಕ್ಕೆ ಬರುವುದು ಹೇಗೆ ಎಂದು ಬಿಜೆಪಿ ಶಾಸಕರು ಯಡಿಯೂರಪ್ಪ ಬಳಿ ಅಳಲು ತೋಡಿಕೊಂಡಿದ್ದಾರೆ.

ತಮ್ಮ ಬಳಿ ಅಲವತ್ತುಕೊಂಡಿರುವ ಬಿಜೆಪಿ ಶಾಸಕರಿಗೆ, ‘ಮಾತನಾಡೋಣ, ಸಮಸ್ಯೆ ಸರಿಯಾಗುತ್ತದೆ’ ಎಂದಷ್ಟೇ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಗುರುವಾರ ಮಾತನಾಡಿದ್ದ ಯಡಿಯೂರಪ್ಪ, ಯಾರನ್ನಾದರೂ ಮಾಡಲಿ, ಆದರೆ ಆದಷ್ಟು ಬೇಗ ಮಾಡಲಿ ಅಷ್ಟೆ ಎಂದು ತಮ್ಮ ಅಸಹಾಯಕತೆ ತೋರ್ಪಡಿಸಿದ್ದರು.

ಇದನ್ನೂ ಓದಿ: ಕರಾವಳಿ ಬಿಜೆಪಿ ಶಾಸಕರಿಗೆ ಸರ್ಕಾರ ಅನುದಾನವನ್ನೇ ನೀಡಿಲ್ಲ: ಶಾಸಕ ವೇದವ್ಯಾಸ ಕಾಮತ್ ಆರೋಪ

ಇನ್ನು ವಿಧಾನಸಭೆ ವಿಪಕ್ಷ ನಾಯಕರ ರೇಸ್​ನಲ್ಲಿ ಮೊದಲ ಸ್ಫರ್ಧಿಯಾಗಿದ್ದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅನಾರೋಗ್ಯದ ಕಾರಣ ವಿಶ್ರಾಂತಿಯಲ್ಲಿದ್ದಾರೆ. ಇದರ ಜೊತೆಗೆ ಜೆಡಿಎಸ್ ಈಗ ಬಿಜೆಪಿ ಮಿತ್ರ ಪಕ್ಷವಾಗಿರುವ ಕಾರಣ ಮತ ಬ್ಯಾಂಕ್ ಲೆಕ್ಕಾಚಾರದಲ್ಲಿ ವಿಪಕ್ಷ ನಾಯಕರ ನೇಮಕಾತಿಯ ಸಮೀಕರಣವೂ ಬದಲಾಗಿದೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿ. ಸುನೀಲ್ ಕುಮಾರ್ ಹೆಸರುಗಳು ಮತ್ತೆ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಆದರೆ ಬಿಜೆಪಿ ಶಾಸಕರ ನಿರೀಕ್ಷೆಗೆ ತಕ್ಕಂತೆ ಬಿಜೆಪಿ ಹೈಕಮಾಂಡ್ ಮಾತ್ರ ಪ್ರತಿಕ್ರಿಯಿಸದೇ ಅಂತರ ಕಾಯ್ದುಕೊಳ್ಳುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ