ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಕುಮಾರಸ್ವಾಮಿಯನ್ನ ಭೇಟಿಯಾದ ವಿಜಯೇಂದ್ರ
ಮಿತ್ರ ಪಕ್ಷ ಜೆಡಿಎಸ್ನ ವರಿಷ್ಠೆರಾದ ಹೆಚ್ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಬಿಡದಿಯ ತೋಟದ ಮನೆಯಲ್ಲಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
ರಾಮನಗರ, (ನವೆಂಬರ್ 26): ಬಿವೈ ವಿಜಯೇಂದ್ರ (BY VIjayendra) ಅವರು ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಪಕ್ಷದ ಹಿರಿಯ ನಾಯಕರು ಹಾಗೂ ವಿವಿಧ ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಳ್ಳುತ್ತಿದ್ದಾರೆ. ಅದರಂತೆ ಇದೀಗ ಮೈತ್ರಿ ಪಕ್ಷದ ನಾಯಕ ಮಾಜಿ ಮಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಭೇಟಿ ಮಾಡಿದರು. ಬಿಡದಿಯ ಕೇತಗಾನಹಳ್ಳಿಯಲ್ಲಿರುವ ತೋಟದ ಮನೆಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಮುಂಬರುವ ಲೋಕಸಭಾ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಉಭಯ ನಾಯಕರ ಭೇಟಿ ರಾಜ್ಯ ರಾಜಕಾರಣದಲ್ಲಿ ಮಹತ್ವ ಪಡೆದುಕೊಂಡಿದೆ.
ಇನ್ನು ಕುಮಾರಸ್ವಾಮಿ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಪ್ರಧಾನಿ ಮೋದಿ, ಜೆಪಿ ನಡ್ಡಾ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿಯವರು ದೆಹಲಿಯಲ್ಲಿ ಸಭೆ ಮಾಡಿದ ಬಳಿಕ ನಾನು ಇಂದು ಭೇಟಿಯಾಗಿದ್ದೇನೆ. ಒಗ್ಗಟ್ಟಾಗಿ ಚುನಾವಣೆ ಎದುರಿಸುವ ನಿಟ್ಟಿನಲ್ಲಿ ಮೈತ್ರಿ ಬಗ್ಗೆ ಮಾತನಾಡಿದ್ದೇವೆ. ಏನ್ ಸ್ಟಾಟರ್ಜಿ ಇದೆ ಅಂತ ನಾಲ್ಕು ಗೋಡೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ 28 ಕ್ಷೇತ್ರದಲ್ಲಿ ಬಿಜೆಪಿಯ ವಿಜಯ ಪತಾಕೆ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಜವಾಬ್ದಾರಿ ತೆಗದುಕೊಂಡ ನಂತರ ಮಾಜಿ ದೇವೇಗೌಡ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ. ಇಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ್ದು, ಮುಂಬರುವ ಲೋಕಸಭೆ ಚುನಾವಣೆ ಕುರಿತು ಚರ್ಚಿಸಿದ್ದೇನೆ. ದೇಶದ ಭವಿಷ್ಯ ರೂಪಿಸುವ ಲೋಕಸಭೆ ಚುನಾವಣೆ. ಹೀಗಾಗಿ 28 ಕ್ಷೇತ್ರಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ , ಜೆಡಿಎಸ್ ಗೆಲ್ಲುವುದಕ್ಕೆ ಹೊರಟಿದೆ ಎಂದರು.
ಈ ಮೈತ್ರಿಯನ್ನು ಲೋಕಸಭೆ ಮಾತ್ರವಲ್ಲದೇ ಈ ರಾಜ್ಯ ಸರ್ಕಾರದ ವಿರುದ್ಧವೂ ಮುಂದವರಿಸಲಿದ್ದೇವೆ. ರೈತ ವಿರೋಧಿ, ಬಡವರ ವಿರೋಧ, ದಲಿತರ ವಿರೋಧಿ ಸರ್ಕಾರವನ್ನು ಪ್ರಶ್ನೆ ಮಾಡಲಿದ್ದೇವೆ. ಕೆಟ್ಟ ಸರಕಾರಕ್ಕೆ ಅದಕ್ಕೆ ತಕ್ಕ ಪಾಠ ಕಲಿಸಲು, ಒಟ್ಟಾಗಿ ಸಾಗಬೇಕು. ಮುಂದಿನ ಅಧಿವೇಶನದಲ್ಲಿ ಒಟ್ಟಾಗಿ ಹೋರಾಟ ಮಾಡಬೇಕು. ಆ ನಿಟ್ಟಿನಲ್ಲಿ ಮಾತುಕತೆ ಮಾಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ- ಜೆಡಿಎಸ್ ಲೋಕಸಭಾ ಸೀಟು ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಸದ್ಯಕ್ಕೆ ಸೀಟು ಹಂಚಿಕೆ ಇನ್ನೂ ಆಗಿಲ್ಲ. ಈ ಬಗ್ಗೆ ವರಿಷ್ಠರು ಚರ್ಚೆ ಮಾಡುತ್ತಾರೆ ಎಂದು ಹೇಳಿರುವ ಅವರು, ಪಕ್ಷದಲ್ಲಿ ಸಣ್ಣ-ಪುಟ್ಟ ಗೊಂದಲಗಳಿವೆ. ಎಲ್ಲವನ್ನೂ ಸರಿಪಡಿಸುವ ಕೆಲಸ ನಾನು ಮಾಡುತ್ತೇನೆ ಎಂದು ಹೇಳಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ