ಅಸಮಾಧಾನಿತ ಶಾಸಕ ಸೋಮಶೇಖರ್ ಮನತಣಿಸಲು ಬಿಜೆಪಿ ಸರ್ಕಸ್, ಬೆಂಬಲಿಗರಿಗೆ ‘ಸಮಸ್ಯೆ’ ಕೊಡ್ತಿದ್ದ ಇಬ್ಬರಿಗೆ ಪಕ್ಷದಿಂದ ಗೇಟ್‌ಪಾಸ್!
ಯಶವಂತಪುರ ಕ್ಷೇತ್ರದಲ್ಲಿ ಕೆಲ ಮೂಲ ಬಿಜೆಪಿಗರು ನಡೆಯಿಂದ ಬೇಸತ್ತು ಅಸಮಾಧಾನಗೊಂಡಿದ್ದ ಶಾಸಕ ಎಸ್ಟಿ ಸೋಮಶೇಖರ್ ದೂರಿಗೆ ಕೊನೆಗೂ ರಾಜ್ಯ ಬಿಜೆಪಿ ಸ್ಪಂದಿಸಿದ್ದು, ಸೋಮಶೇಖರ್ ವಿರುದ್ಧ ಕೆಲಸ ಮಾಡಿದ್ದ ಮೂಲ ಬಿಜೆಪಿ ನಾಯಕರಿಗೆ ಪಕ್ಷದಿಂದ ಗೇಟ್ ಪಾಸ್ ನೀಡಲಾಗಿದೆ.
ಬೆಂಗಳೂರು, (ಆಗಸ್ಟ್ 20): ಆಪರೇಷನ್ ಹಸ್ತ (Operation Hasta) ಕಳೆದ ಎರಡು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಭಾರಿ ಸದ್ದು ಮಾಡುತ್ತಿದೆ, ಒಂದ್ಕಡೆ ಕಾಂಗ್ರೆಸ್ (Congress) ಹೇಗಾದ್ರೂ ಮಾಡಿ ಬಿಜೆಪಿ ಸೇರಿದ ಬಾಂಬೆ ಫ್ರೆಂಡ್ಸ್ಗಳನ್ನ ವಾಪಸ್ ಕರೆತರುವ ಪ್ಲ್ಯಾನ್ ಮಾಡುತ್ತಿದ್ದರೆ, ಅತ್ತ ಬಿಜೆಪಿ(BJP)ಯಾರೂ ಬಿಟ್ಟು ಹೋಗದಂತೆ ಬೇಲಿ ಹಾಕುವುದಕ್ಕೆ ಮುಂದಾಗಿದೆ. ಹೀಗಾಗಿ ಕಾಂಗ್ರೆಸ್ ನಾಯಕರ ಗಾಳದಲ್ಲಿರುವ ಬಿಜೆಪಿ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಬಿಜೆಪಿ ನಾಯಕರು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಹಾಗೇ ಅಸಮಾಧಾನಿತರ ಬೇಡಿಕೆಗಳನ್ನು ಈಡೇರಿಸಲು ಸರಣಿ ಸಭೆ ನಡೆಸಿದ್ದು, ಇದೀಗ ಎಸ್ಟಿ ಸೋಮಶೇಖರ್ ಅವರನ್ನು ಉಳಿಸಿಕೊಳ್ಳಲು ಮೂಲ ಬಿಜೆಪಿ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ.
ಯಶವಂತಪುರ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಮಾರೇಗೌಡ, ಯಶವಂತಪುರ ನಗರ ಮಂಡಲದ ಉಪಾಧ್ಯಕ್ಷ ಧನಂಜಯ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಲಾಗಿದೆ. ಪಕ್ಷವಿರೋಧಿ ಚಟುವಟಿಕೆ ಆರೋಪ ಹಿನ್ನೆಲೆ ಮಾರೇಗೌಡ, ಧನಂಜಯ ಅವರನ್ನು 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಬಿ.ನಾರಾಯಣ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ಆಪರೇಷನ್ ಹಸ್ತ; ಬಿಜೆಪಿ ಫುಲ್ ಅಲರ್ಟ್, ಶಾಸಕರ ಮುನಿಸು ಶಮನಕ್ಕೆ ಕೇಸರಿ ಕಲಿಗಳ ಶತಪ್ರಯತ್ನ
ಮಾರೇಗೌಡ, ಧನಂಜಯ ವಿರುದ್ಧ ಎಸ್ಟಿ ಸೋಮಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ರಾಜ್ಯ ಬಿಜೆಪಿ ಘಟಕದ ನಾಯಕರಿಗೂ ದೂರು ನೀಡಿದ್ದರು. ಅಲ್ಲದೇ ಈ ನಾಯಕರು ನನ್ನ ಬಿಜೆಪಿಯಿಂದ ಹೊರ ನೂಕುತ್ತಿದ್ದಾರೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್ ವಿರುದ್ಧ ಕೆಲಸ ಮಾಡುತ್ತಿರುವವರನ್ನು ಉಚ್ಚಾಟನೆ ಮಾಡಿದೆ. ಈ ಮೂಲಕ ಬಿಜೆಪಿ, ಸೋಮಶೇಖರ್ ಅವರನ್ನು ಅಸಮಾಧಾನವನ್ನು ಶಮನ ಮಾಡುವ ಪ್ರಯತ್ನಿಸಿದೆ.
ಇತ್ತೀಚೆಗೆ ಸೋಮಶೇಖರ್ ಭಾವಚಿತ್ರ ಹಾಕಿಕೊಂಡು ಹುಟ್ಟುಹಬ್ಬ ಆಚರಣೆ ಮಾಡಿದ್ದರು. ಬರ್ತ್ಡೇ ಆಚರಣೆಗೆ ಸೋಮಶೇಖರ್ ಬಹಿರಂಗ ವಿರೋಧ ವ್ಯಕ್ತಪಡಿಸಿದ್ದರು. ಹಾಗೇ ಈ ಇಬ್ಬರು ನಾಯಕರು ಮೇಲೆ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಆರೋಪ ಕೇಳಿಬಂದಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಸೋಮಶೇಖರ್ ಅಸಮಾಧಾನಗೊಂಡಿದ್ದರು. ಇದರಿಂದ ಈಗ ಸೋಮಶೇಖರ್ ಸಮಾಧಾನಪಡಿಸಲು ಮಾರೇಗೌಡ ಮತ್ತು ಧನಂಜಯ ಅವರನ್ನು ಉಚ್ಚಾಟಿಸಲಾಗಿದೆ.
ಉಚ್ಚಾಟನೆಗೆ ಸ್ಪಷ್ಟನೆ
ಇನ್ನು ಈ ಆದೇಶ ಹೊರಡಿಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ಉತ್ತರ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ನಾರಾಯಣ್ಮ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆಂದು ಎಸ್.ಟಿ. ಸೋಮಶೇಖರ್ ಅವರು ಮಾರೇಗೌಡ ಹಾಗೂ ಧನಂಜಯ ವಿರುದ್ಧ ಆರೋಪ ಮಾಡಿದ್ದರು. ಆರೋಪವನ್ನು ಶಿಸ್ತು ಸಮಿತಿಗೆ ಕಳುಹಿಸಿಕೊಟ್ಟಿದ್ದೆವು. ಚರ್ಚೆಗಳ ನಂತರ ರಾಜ್ಯದ ಶಿಸ್ತು ಸಮಿತಿ ಸೂಚನೆ ಮೇರೆಗೆ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಶಾಸಕರ ಅಸಮಾಧಾನ ಶಮನ ಎಂದು ಬರಲ್ಲ. ಈ ತರಹ ಚುನಾವಣೆ ನಡೆದಾಗ ಆರೋಪಗಳು ಬರುತ್ತವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದಾಗ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದು ಪಕ್ಷದ ಪದ್ದತಿ. ಅದರಂತೆ ಕ್ರಮ ಕೈಗೊಂಡಿದ್ದಾರೆ ಎಂದರು.
ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಮನವೊಲಿಸಲು ಬಿಜೆಪಿಯಲ್ಲಿ ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಪಕ್ಷದ ಹಿರಿಯರು, ಶಾಸಕರು, ಉಪಾಧ್ಯಕ್ಷದ ಹಾದಿಯಾಗಿ ಎಲ್ಲರೂ ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಮಾಜಿ ಶಾಸಕ ಸಿ.ಟಿ.ರವಿ ಸೋಮಶೇಖರ್ ಜೊತೆ ಮಾತುಕತೆ ನಡೆಸಿದ್ದರು. ಈಗ ಎಸ್ಟಿಎಸ್ಗೆ ಬಿಜೆಪಿ ಉಪಾಧ್ಯಕ್ಷರೇ ಫೋನ್ ಮಾಡಿ ಆಫರ್ ಕೊಟ್ಟಿದ್ದಾರಂತೆ. ಕ್ಷೇತ್ರದಲ್ಲಿ ಬಿಜೆಪಿ ಮುಖಂಡರನ್ನ ಪಕ್ಷದಿಂದ ಅಮಾನತು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು, ಆದ್ರೆ ಸೋಮಶೇಖರ್ ಇದಕ್ಕೆ ಒಪ್ಪಿಲ್ಲವಂತೆ. ಅಮಾನತು ನನ್ನ ಗುರಿ ಅಲ್ಲ. ಪಕ್ಷದಿಂದ ಕ್ಷೇತ್ರಕ್ಕೆ ವೀಕ್ಷಕರನ್ನು ಕಳಿಸಿ. ಎರಡೂ ಕಡೆಯವರನ್ನು ಕೂರಿಸಿ ಮಾತುಕತೆ ನಡೆಸಿ ಎಂದು ಹೇಳಿದ್ದಾರಂತೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 3:23 pm, Sun, 20 August 23