ಮಹದಾಯಿಗೆ 1,000 ಕೋಟಿ, ಸಿಎಂ ಬೊಮ್ಮಾಯಿಯಿಂದ ಮತ್ತೊಂದು ಸುಳ್ಳು: ರಣದೀಪ್ ಸಿಂಗ್ ಸುರ್ಜೇವಾಲ
ಬಜೆಟ್ನಲ್ಲಿ ಮಹದಾಯಿ ಯೋಜನೆಗೆ ಬಜೆಟ್ನಲ್ಲಿ 1,000 ಕೋಟಿ ಅನುದಾನ ಮೀಸಲು ಬಗ್ಗೆ ಪ್ರತಿಕ್ರಿಯೆ ನೀಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಒಂದು ತಿಂಗಳಲ್ಲಿ ಈ ಅನುದಾನ ಹೇಗೆ ಬಿಡುಗಡೆ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿ: ಬಜೆಟ್ನಲ್ಲಿ ಮಹದಾಯಿ ಯೋಜನೆಗೆ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಾಡಿಸುವುದಾಗಿ ಘೋಷಿಸಲಾಗಿದೆ. ಆದರೆ ಒಂದು ತಿಂಗಳಲ್ಲಿ ಈ ಅನುದಾನ ಹೇಗೆ ಬಿಡುಗಡೆ ಮಾಡುತ್ತೀರಿ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಮತ್ತೊಂದು ಸುಳ್ಳು ಹೇಳಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬಜೆಟ್ ಮಂಡಿಸಲಿದೆ. ಮಹದಾಯಿ ಯೋಜನೆಯನ್ನ ನಾವೇ ಪೂರ್ಣಗೊಳಿಸುತ್ತೇವೆ ಎಂದರು.
ನಮ್ಮ ಗೃಹ ಲಕ್ಷ್ಮಿ, ಗೃಹ ಜ್ಯೋತಿ ಯೋಜನೆಗಳನ್ನ ಕಾಪಿ ಮಾಡಲಾಗಿದೆ. ನಮ್ಮನ್ನು ಕಾಪಿ ಮಾಡಲು ಯತ್ನಿಸಿ ಅಲ್ಲಿಯೂ ವಿಫಲವಾಗಿದ್ದಾರೆ. ಕಾಪಿ ಮಾಡಲೂ ಜಾಣ್ಮೆ ಬೇಕು ಎಂ ಸುರ್ಜೇವಾಲ ಅವರು ವ್ಯಂಗ್ಯವಾಡಿದರು. ಇನ್ನು ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯರನ್ನ ಮುಗಿಸಬೇಕೆಂಬ ಹೇಳಿಕೆ ವಿಚಾರವಾಗಿ ಸಚಿವ ಅಶ್ವತ್ಥನಾರಾಯಣ ವಿರುದ್ಧ ಹರಿಹಾಯ್ದ ಸುರ್ಜೆವಾಲ, ಬಿಜೆಪಿಯದ್ದು ಏನಿದ್ದರೂ ಗೋಡ್ಸೆ ಸಂಸ್ಕೃತಿ. ಗಾಂಧಿ ಕೊಂದ ಸಂಸ್ಕೃತಿ ಗೋಡ್ಸೆದು. ಅದೇ ಸಂಸ್ಕೃತಿ ಇಂದಿರಾಗಾಂಧಿ, ರಾಜೀವ್ ಗಾಂಧಿಯನ್ನೂ ಕೊಂದಿತ್ತು. ಪಂಜಾಬಿನ ಸರ್ದಾರ್ ಬೇನ್ ಸಿಂಗ್ ಅವರನ್ನೂ ಕೊಂದಿತು ಎಂದರು.
ನೂರಾರು ಕಾರ್ಯಕರ್ತರು ಭಾರತ ಉಳಿವಿಗೆ ಜೀವ ತ್ಯಾಗ ಮಾಡಿದ್ದಾರೆ. ನಾವು ಮತ್ತೆ ಮತ್ತೆ ಜೀವ ತ್ಯಾಗಕ್ಕೆ ಸಿದ್ಧ. ನಾವು ವಿಧ್ವಂಸಕ್ಕೆ ಪ್ರೋತ್ಸಾಹ ಮಾಡಲ್ಲ, ಪ್ರೀತಿಯ ಸಂದೇಶ ಸಾರುವವರು ನಾವು. ಅಶ್ವತ್ಥನಾರಾಯಣರನ್ನ ಕೂಡಲೇ ಬಂಧಿಸಬೇಕು. ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು. ಆದರೆ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ ಸುರ್ಜೇವಾಲ, ಚುನಾವಣೆಯಲ್ಲಿ ಸೋಲುತ್ತೇವೆ ಅಂತ ಈ ರೀತಿ ಹೇಳಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: Karnataka Budget 2023: ಬೊಮ್ಮಾಯಿ ಬಜೆಟ್ನಲ್ಲಿ ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ತು? ಇಲ್ಲಿ ಸಂಪೂರ್ಣ ಮಾಹಿತಿ
ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದ್ದು ಅಶ್ವತ್ಥನಾರಾಯಣ. ಆದರೆ ಅವರ ಹಿಂದೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಇದ್ದಾರೆ. ಚುನಾವಣೆ ಸೋಲಿನಿಂದ ಬಚಾವಾಗಲು ಗಲಭೆಗೆ ಪ್ರಚೋದನೆ ನೀಡಲಾಗುತ್ತಿದೆ ಎಂದರು.
ನಾನೂ ಸೇರಿ ಹತ್ತು ಜನ ಮುಖ್ಯಮಂತ್ರಿ ಸ್ಪರ್ಧೆಯಲ್ಲಿದ್ದಾರೆ ಎಂಬ ಮಾಜಿ ಗೃಹಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಸ್ಪರ್ಧೆ ಇಲ್ಲ. ಅವರು ಯಾವಾಗ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ನಮ್ಮಲ್ಲಿ ಜನರ ಸೇವೆ ಮಾಡಲು ಸ್ಪರ್ಧೆ ನಡೆದಿದೆ. ಜನರ ಕಲ್ಯಾಣಕ್ಕಾಗಿ ಶ್ರಮಿಸುವ ಸ್ಪರ್ಧೆ ನಡೆದಿದೆ. ಬಿಜೆಪಿ ಕಿತ್ತೊಗೆದು ಕಾಂಗ್ರೆಸ್ ಸರ್ಕಾರ ತರಲು ಸ್ಪರ್ಧೆ ನಡೆದಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ