ಜಾತಿಗಣತಿ ವರದಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡ ಸಚಿವ ಸಂಪುಟ
ಬೆಂಗಳೂರು, ಜನವರಿ 16: ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದ್ದು, ಈ ಸಭೆಯಲ್ಲಿ ಬಹುನಿರೀಕ್ಷಿತ ಜಾತಿ ಗಣತಿ ವರದಿ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜಾತಿಗಣತಿ ವರದಿ ಮುಚ್ಚಿದ ಲಕೋಟೆಯಲ್ಲಿರುವುದನ್ನು ತೆರೆಯಲು ತೀರ್ಮಾನಸಲಾಗಿದೆ. ಮುಂದಿನ ಸಚಿವ ಸಂಪುಟದ ಸಭೆಯಲ್ಲಿ ಮುಂದಿಡಲು ನಿರ್ಧರಿಸಲಾಗಿದೆ. ಆ ಮೂಲಕ ಕರ್ನಾಟಕವೇ ಎದುರು ನೋಡುತ್ತಿದ್ದ ಜಾತಿಗಣತಿ ವರದಿ ಬಗ್ಗೆ ಸಿದ್ದರಾಮಯ್ಯ ಸರ್ಕಾರದ ಮಹತ್ವದ ಹೆಜ್ಜೆ ಇಟ್ಟಿದೆ.
ಇಂದಿನ ಸಚಿವ ಸಂಪುಟದಲ್ಲೇ ಜಾರಿಗಣತಿ ವರದಿ ಮಂಡನೆಯಾಗಲಿದೆ ಎನ್ನುವ ಚರ್ಚೆಗಳು ನಡೆದಿದ್ದವು. ಆದ್ರೆ, ಈ ಸಚಿವ ಸಂಪುಟದಲ್ಲಿ ಜಾತಿ ಗಣತಿ ವರದಿ ಬಗ್ಗೆ ಚರ್ಚೆ ಮಾಡುವುದಿಲ್ಲ. ಬದಲಾಗಿ ಮುಂದಿನ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದರು. ಅದರಂತೆ ಇಂದಿನ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಂಡಿದೆ.
ಮಂಡ್ಯದಲ್ಲಿ ಕೃಷಿ ತೋಟಗಾರಿಕೆ ಇಂಟಿಗ್ರೇಟೆಡ್ ವಿವಿ ಸ್ಥಾಪನೆ, ಕೃಷಿ ತೋಟಗಾರಿಕೆ ಇಂಟಿಗ್ರೇಟೆಡ್ ವಿವಿ ಸ್ಥಾಪನೆ, 5ನೇ ರಾಜ್ಯ ಹಣಕಾಸು ಆಯೋಗದ ಅವಧಿ ವಿಸ್ತರಣೆ ಸೇರಿದಂತೆ 35 ವಿಷಯಗಳನ್ನು ಚರ್ಚೆ ಮಾಡಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಸಚಿವ ಸಂಪುಟ ಸಭೆಯ ಪ್ರಮುಖ ಅಂಶಗಳು ಹೀಗಿವೆ
- ಜಾತಿಗಣತಿ ವರದಿ ಮುಚ್ಚಿದ ಲಕೋಟೆಯಲ್ಲಿರುವುದನ್ನು ತೆರೆಯಲು ಮುಂದಿನ ಕ್ಯಾಬಿನೆಟ್‌ಗೆ ತರಲು ನಿರ್ಧಾರ. ರಾಜಕೀಯ ಕಾರಣ ಏನೆಂಬುದು ಇಲ್ಲ. ಮುಂದೆ ಹಾಕುವುದು ಸೂಕ್ತ ಎನಿಸಿದ್ದರಿಂದ ಮುಂದಿನ ಕ್ಯಾಬಿನೆಟ್‌ಗೆ ತರುತ್ತೇವೆ. ಟ್ರೆಷರಿಯಲ್ಲಿ ಇರುವ ಈ ವರದಿಯನ್ನು ಕ್ಯಾಬಿನೆಟ್‌ಗೆ ಮುಂಚಿತವಾಗಿ ತೆರೆಯಬೇಕು.
- ರೇಷನ್ ಕಾರ್ಡ್ ಇರುವವರಿಗೆ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಎಂಆರ್ಐ ಸ್ಕ್ಯಾನ್, ಸಿಟಿ ಸ್ಕ್ಯಾನ್
- ಬ್ರ್ಯಾಂಡ್ ಬೆಂಗಳೂರು ಯೋಜನೆಯಡಿ BBMP ವ್ಯಾಪ್ತಿಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರಿಸಲು ಅಸ್ತು. 413 ಕೋಟಿ ರೂ. ಅನುಮೋದಿಸಲಾಗಿದೆ. ಮಹಾನಗರ ಪಾಲಿಕೆಯ ಒಟ್ಟು 13 ಹೆರಿಗೆ ಆಸ್ಪತ್ರೆಗಳು ಮೇಲ್ದರ್ಜೆಗೆ ಏರಿಸುವುದು.
- 10 ಮಹಾನಗರ ಪಾಲಿಕೆ, 24 ನಗರಪಾಲಿಕೆಗಳಲ್ಲಿ ಒಂದು ಚಿತಾಗಾರಕ್ಕೆ 4 ಕೋಟಿ ರೂ. ವೆಚ್ಚದಂತೆ 126 ಕೋಟಿ ರೂ ವೆಚ್ಚದಲ್ಲಿ ಚಿತಾಗಾರ ನಿರ್ಮಾಣಕ್ಕೆ ನಿರ್ಧಾರ.
ಇದನ್ನೂ ಓದಿ: ಅಹಿಂದ ನಾಯಕರು ಪ್ರಶ್ನೆ ಮಾಡುತ್ತಿರುವುದು ನನ್ನನ್ನಲ್ಲ ಖರ್ಗೆಯನ್ನೇ: ಹೊಸ ದಾಳ ಉರುಳಿಸಿದ ಡಿಕೆ ಶಿವಕುಮಾರ್
- 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ
- ಡಿಜಿ ಕಂದಾಯ ಯೋಜನೆಯ ಅನುದಾನದಿಂದ ಡಿಜಿ ಸೇವೆಯನ್ನು ನೀಡಲು ಕ್ರೋಮ್ ಬುಕ್ ಅಥವಾ ಲ್ಯಾಪ ಟಾಪ್ ಖರೀದಿಗೆ 20 ಕೋಟಿ ರೂ ಅನುಮೋದನೆ.
- ಆರ್ಥಿಕ ಇಲಾಖೆ ಅಧಿಕಾರಿಗಳು, ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲು ಅನುಮೋದನೆ.
- 13.30 ಕೋಟಿ ರೂ. ವೆಚ್ಚದಲ್ಲಿ ಆಶಾಕಿರಣ ಯೋಜನೆ ಜಾರಿಗೆ ಅಸ್ತು. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ಗೆ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಕಕ್ಕೆ ನಿರ್ಧಾರ.
- ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆವರಣದಲ್ಲಿ ಇರುವ 450 ಬೆಡ್ ಉಳ್ಳ ಆಸ್ಪತ್ರೆಗೆ ಅನುಮೋದನೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್
- ಅಸ್ತಿತ್ವದಲ್ಲಿರುವ ಅಂಗ ಕಸಿ ಜೀವ ಸಾರ್ಥಕತೆ ಯೋಜನೆಗೆ ಶ್ವಾಸಕೋಶ ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನು ಸೇರಿಸಿ ಯೋಜನೆ ವಿಸ್ತರಣೆಗೆ ಅನುಮೋದನೆ.
- ಎಚ್ಎಂಟಿ ಅಧೀನದಲ್ಲಿ ಇರುವ ಅರಣ್ಯ ಭೂಮಿ ಹಿಂಪಡೆಯುವ ಬಗ್ಗೆ ಚರ್ಚೆ. ಸುಪ್ರಿಂ ಕೋರ್ಟ್ ನಲ್ಲಿರುವ ಮಧ್ಯಂತರ ಅರ್ಜಿ ಹಿಂಪಡೆಯಬೇಕು ಎಂದು ಕ್ಯಾಬಿನೆಟ್ನಲ್ಲಿ ನಿರ್ಣಯಿಸಲಾಗಿದೆ.
- ಮನ್ರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ 8 ಕೋಟಿ ರೂ. ವೆಚ್ಚದಲ್ಲಿ ಮೆಡಿಕಲ್ ಇನ್ಶೂರೆನ್ಸ್ ಒದಗಿಸಲು ಅನುಮೋದನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.