AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆಗ್ರಹಿಸಲಾಗಿದೆ ಎಂಬ ವರದಿಗಳನ್ನು ತಳ್ಳಿಹಾಕಿರುವ ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್​ ತೆಗೆದುಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರನ್ನು ಬದಲಿಸಬೇಕೆಂದು ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಪಕ್ಷದ ಸಂಘಟನೆ ಸುಧಾರಣೆಗೆ ಸಲಹೆ ನೀಡಿದ್ದೇನಷ್ಟೆ, ಆದರೆ, ಅದನ್ನು ತಪ್ಪಾಗಿ ಬಿಂಬಿಸಲಾಗಿದೆ ಎಂದಿದ್ದಾರೆ.

ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ: ಸತೀಶ್ ಜಾರಕಿಹೊಳಿ ದಿಢೀರ್ ಯೂಟರ್ನ್
ಸತೀಶ್ ಜಾರಕಿಹೊಳಿ
Ganapathi Sharma
|

Updated on: Jan 16, 2025 | 10:16 AM

Share

ಬೆಂಗಳೂರು, ಜನವರಿ 16: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಹೊಸ ಅಧ್ಯಕ್ಷರ ನೇಮಕವಾಗಬೇಕು ಎಂದು ಬುಧವಾರ ಬೆಳಗ್ಗೆ ಆಗ್ರಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಹೈಕಮಾಂಡ್​​ನಿಂದ ಖಡಕ್ ಸಂದೇಶ ಬರುತ್ತಿದ್ದಂತೆಯೇ ಯೂಟರ್ನ್ ತೆಗೆದುಕೊಂಡಿದ್ದಾರೆ. ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮ ಫೇಸ್​ಬುಕ್ ಮೂಲಕ ಸ್ಪಷ್ಟೀಕರಣ ನೀಡಿದ ಅವರು, ತಮ್ಮ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗಿದೆ. ಡಿಕೆ ಶಿವಕುಮಾರ್ ಬದಲಾವಣೆಗೆ ಆಗ್ರಹಿಸಿಲ್ಲ ಎಂದು ಹೇಳಿದ್ದಾರೆ.

ಮಾಧ್ಯಮ ವರದಿಗಳ ಬಗ್ಗೆ ಗಮನಿಸಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು, ಡಿಕೆ ಶಿವಕುಮಾರ್ ವಿರುದ್ಧ ಸಾಹುಕಾರ್ ಸಮರ ಎಂದೆಲ್ಲ ವರದಿಗಳಾಗಿವೆ. ಹೀಗಾಗಿ ಆ ಬಗ್ಗೆ ಸ್ಪಷ್ಟೀಕರಣ ಕೊಡಬೇಕಾಗಿ ಬಂದಿದೆ ಎಂದು ಸತೀಶ್ ಜಾರಕಿಹೊಳಿ ಫೇಸ್​ಬುಕ್ ಸಂದೇಶದಲ್ಲಿ ತಿಳಿಸಿದ್ದಾರೆ.

ಸತೀಶ್ ಜಾರಕಿಹೊಳಿ ಹೇಳಿದ್ದೇನು?

ನಾನು ಹೇಳಿದ್ದರಲ್ಲಿ ಕೆಲವು ಸತ್ಯಾಂಶಗಳಿವೆ. ಕೆಲವು ಇಲ್ಲದ ವಿಚಾರಗಳನ್ನು ವೈಭವೀಕರಿಸಲಾಗಿದೆ. ಡಿಕೆ ಶಿವಕುಮಾರ್ ಬದಲಾವಣೆ ಮಾಡಿ ಎಂದು ನಾನು ಹೇಳಿಲ್ಲ. ಪಕ್ಷದಲ್ಲಿ ಮುಂದಿನ ಸಂಘಟನೆಯ ದೃಷ್ಟಿಯಿಂದ ಕೆಲವೊಂದು ಬದಲಾವಣೆಗಳನ್ನು ಮಾಡಬೇಕೆಂದು ಸಲಹೆ ನೀಡಿದ್ದೇನಷ್ಟೆ. ಹಾಗೆಂದು ಡಿಕೆ ಶಿವಕುಮಾರ್ ಅವರನ್ನು ಬದಲಾವಣೆ ಮಾಡಿ ಎಂದು ಹೇಳಿಲ್ಲ, ಇಂದೂ ಹೇಳುತ್ತಿಲ್ಲ, ಮುಂದೆಯೂ ಹೇಳುವುದಿಲ್ಲ. ಆದರೆ, ಇವತ್ತಿನ ವೇಗದ ಸ್ಥಿತಿಯಲ್ಲಿ ನಾ ಹೇಳಿರುವುದನ್ನು ಜನ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ. ಹೈಕಮಾಂಡ್ ನಿರ್ಧಾರ ಮಾಡಬೇಕು ಎಂದಿರುವುದನ್ನು ಹೈಲೈಟ್ ಮಾಡಬೇಕಿತ್ತು ಎಂದು ಅವರು ಹೇಳಿದರು.

ಹೈಕಮಾಂಡ್ ಮನೊವೊಲಿಸಲು ನಾನು ಮುಂದಿನ ವಾರ ದೆಹಲಿಗೆ ಹೋಗುತ್ತೇನೆ ಎಂದಿರುವುದಾಗಿ ವರದಿಯಾಗಿದೆ. ಆದರೆ ನಾನು ಹೇಳಿದ್ದು ಹಾಗಲ್ಲ. ಕರ್ನಾಟಕ ಭವನದ ಹೊಸ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ, ವೀಕ್ಷಣೆಗೆ ಹೋಗುತ್ತೇನೆ ಎಂದಿದ್ದೆ. ಅದು ತಪ್ಪಾಗಿ ವರದಿಯಾಗಿದೆ. ಇದು ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಪಕ್ಷದಲ್ಲಿಯೂ ಸಹಜವಾಗಿಯೇ ಕೆಲವು ಗೊಂದಲಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.

ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಹಿಂದಿನಷ್ಟು ಸಂಘಟನೆ ಈಗಿಲ್ಲ ಎಂದಿದ್ದು ನಿಜ: ಸತೀಶ್ ಜಾರಕಿಹೊಳಿ

ನಮ್ಮ ಪಕ್ಷದಲ್ಲಿ ಹಿಂದಿನಷ್ಟು ಸಂಘಟನೆ ಈಗಿಲ್ಲ ಎಂದು ನಾನು ಹೇಳಿದ್ದು ನಿಜ. ಯಾಕೆಂದರೆ 2023ರಲ್ಲಿ ನಮ್ಮಲ್ಲಿ ಒಳ್ಳೆಯ ಸಂಘಟನೆ ಇತ್ತು. ಈಗ ಹಾಗೆ ಇಲ್ಲ. ಇದಕ್ಕೆ ಎಲ್ಲರೂ ಕಾರಣ. ನಾನೂ ಸಹ ಕಾರಣ ಎಂದು ಹೇಳಿದ್ದೇನೆಯೇ ವಿನಹ ಯಾರೊಬ್ಬರನ್ನೂ ಗುರಿಯಾಗಿಸಿ ಹೇಳಿಕೆ ನೀಡಿಲ್ಲ. ಆದರೆ, ನಾನು ಹೇಳಿದ್ದು ಒಂದು ವರದಿಯಾಗಿದ್ದು ಮತ್ತೊಂದಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಇದನ್ನೂ ಓದಿ: ಎಚ್ಚರಿಕೆ ನಡುವೆಯೂ ಬಹಿರಂಗ ಹೇಳಿಕೆ: ಕಾಂಗ್ರೆಸ್ ಹೈಕಮಾಂಡ್​ನಿಂದ ಬಂತು ಖಡಕ್ ಸಂದೇಶ, ಸಚಿವರ ವರದಿ ಸಲ್ಲಿಸಲು ಸೂಚನೆ

ಬುಧವಾರ ಬೆಳಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ್ದ ಸತೀಶ್ ಜಾರಕಿಹೊಳಿ ಆದಷ್ಟು ಬೇಗ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕ ಆಗಬೇಕು. ನಮಗೆ ಪೂರ್ಣಪ್ರಮಾಣದ ಅಧ್ಯಕ್ಷರು ಬೇಕು. ವೋಟು ತರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ. ಪಾಪ್ಯುಲರ್ ಇರುವವರನ್ನು ಅಧ್ಯಕ್ಷ ಮಾಡಿ ಎಂದು ಹೇಳಿದ್ದೇನೆ ಎಂದು ತಿಳಿಸಿದ್ದರು. ಈ ವಿಚಾರ ಕಾಂಗ್ರೆಸ್ ಆಂತರಿಕ ಬೇಗುದಿಯ ಬೆಂಕಿಗೆ ತುಪ್ಪ ಸುರಿದಿತ್ತು. ಇದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ