ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Apr 24, 2024 | 1:21 PM

ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು, ಆದರೆ ನೀಡಿಲ್ಲ. ಮೇಕೆದಾಟು ಯೋಜನೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಇದು ಕುಡಿಯುವ ನೀರಿನ ಯೋಜನೆ, ಯಾಕೆ ಅನುಮತಿ ನೀಡಿಲ್ಲ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು ಏಪ್ರಿಲ್​ 24: ರಾಜ್ಯದಿಂದ ಕೇಂದ್ರಕ್ಕೆ 4 ಲಕ್ಷ 30 ಸಾವಿರ ಕೋಟಿಗೂ ಹೆಚ್ಚು ತೆರಿಗೆ ನೀಡಿದ್ದೇವೆ. 55 ಸಾವಿರ ಕೋಟಿ ತೆರಿಗೆ ಹಣ ನಮಗೆ ನೀಡಿದ್ದಾರೆ. ಇದರಿಂದ ನಮಗೆ ಅನ್ಯಾಯ ಆಗಿದೆ. ಬರ ಪರಿಹಾರ ವಿಚಾರದಲ್ಲಿ ಬಿಜೆಪಿ ಮಲತಾಯಿ ಧೋರಣೆ ತೋರುತ್ತಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ನಮಗೆ ಅನುದಾನ ನೀಡಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ (Nirmala Sitharaman) ಬಹಿರಂಗ ಚರ್ಚೆಗೆ ಬರಲಿಲ್ಲ. ತೆಲಂಗಾಣ, ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಿಗೆ ಅನುದಾನ ನೀಡಬೇಕಿತ್ತು, ಆದರೆ ನಿರ್ಮಲಾ ಸೀತಾರಾಮನ್ ಅನುದಾನ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು.

ಟಿವಿ9ನ ​​ಸಂದರ್ಶನದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಭೀಕರ ಬರಗಾಲ ಇದೆ. ಬರ ಪರಿಹಾರ ನೀಡುವಂತೆ ನಾವು ಮನವಿ ಮಾಡಿ ಏಳು ತಿಂಗಳು ಆಗಿದೆ. ಇಷ್ಟಾದರೂ ನಮಗೆ ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ. ನಮ್ಮ ಪಾಲಿನ ತೆರಿಗೆ ಹಣ ನೀಡಲು ಏನು ಸಮಸ್ಯೆ ಎಂದು ಪ್ರಶ್ನಿಸಿದರು.

ಮಹದಾಯಿ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬೇಕು, ಆದರೆ ನೀಡಿಲ್ಲ. ಮೇಕೆದಾಟು ಯೋಜನೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ. ಇದು ಕುಡಿಯುವ ನೀರಿನ ಯೋಜನೆ, ಯಾಕೆ ಅನುಮತಿ ನೀಡಿಲ್ಲ? ಬಜೆಟ್​ನಲ್ಲೇ ಯೋಜನೆಗೆ ಹಣ ಘೋಷಣೆ ಮಾಡಲಾಗಿದೆ. ಆದರೆ ಇದ್ಯಾವುದನ್ನೂ ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿಲ್ಲ ಎಂದರು.

ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ತಡರಾತ್ರಿ ಕರಗ ಉತ್ಸವ ವೀಕ್ಷಿಸಲು ಬಂದಾಗಲೂ ಮೋದಿ ಮೋದಿ ಘೋಷಣೆಗಳು!

ನಾವು ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳಿಲ್ಲ, ಕೇಳುವುದೂ ಇಲ್ಲ. ನಾವು ಕೇಳುತ್ತಿರುವುದು ಬರಪರಿಹಾರದ ಹಣ. ಬರ ಪರಿಹಾರ ನೀಡಬೇಕು ಅನ್ನೋದು ನಮ್ಮ ಪ್ರಮುಖ ಬೇಡಿಕೆ. ಕಾಂಗ್ರೆಸ್​​ ಗ್ಯಾರಂಟಿ ಯೋಜನೆಗಳ ಮೇಲೆ ಚುನಾವಣೆಗೆ ಹೋಗಿದೆ ಎಂಬ ಟೀಕೆ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿ ಈಗ ಯಾವ ಆಧಾರದಲ್ಲಿ ಚುನಾವಣೆಗೆ ಹೋಗಿದೆ? ಸ್ವಾಮಿನಾಥನ್​ ವರದಿ ಜಾರಿ ಮಾಡುತ್ತೇವೆ ಅಂತ ಹೇಳಿದರು ಮಾಡಿದ್ರಾ? ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಜಾರಿ ಮಾಡಿದರು. ಕಪ್ಪು ಹಣ ತಂದು ಜನರ ಖಾತೆಗೆ ಹಾಕುತ್ತೇವೆ ಎಂದಿದ್ದರು ಹಾಕಿದ್ರಾ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್​ನಲ್ಲಿ ಒಕ್ಕಲಿಗರಿಗೆ ರಕ್ಷಣೆ ಇಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು, ಈ ಬಗ್ಗೆ ಬಿಜೆಪಿಯವರಿಗೆ ಮಾತಾಡುವ ನೈತಿಕತೆ ಇಲ್ಲ. ಕರ್ನಾಟಕಕ್ಕೆ ಕೇಂದ್ರ ಸರ್ಕಾರದವರು ಅನ್ಯಾಯ ಮಾಡಿದ್ದಾರೆ. ತೆರಿಗೆ ಹೆಚ್ಚಿಗೆಯಲ್ಲೂ ರಾಜ್ಯಕ್ಕೆ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಕೇಂದ್ರದವರು ಕೊಟ್ಟಿರೋದು ಖಾಲಿ ಚೊಂಬು. ಕೇಂದ್ರ ವೈಫಲ್ಯಗಳನ್ನ ಜನರಿಗೆ ತಿಳಿಸಲು ಚೊಂಬು ಜಾಹೀರಾತು ನೀಡಿದ್ದೇವೆ ಎಂದು ವಾಗ್ದಾಳಿ ಮಾಡಿದರು.

ದೇವೇಗೌಡರರದ್ದು ಅವಕಾಶವಾದಿ ರಾಜಕಾರಣ. ಅವರ ಮಗ 2006ರಲ್ಲಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದರು. ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುವುದಿದ್ದರೆ ನನ್ನ ಹೆಣದ ಮೇಲೆ ಮಾಡಿ ಅಂದರು. ಅದೇ ದೇವೇಗೌಡರು ಈಗ ಬಿಜೆಪಿ ಜೊತೆ ಹೋಗಿದ್ದಾರೆ. ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಿದ್ದಾರೆ. ಇದು ಆರ್​ಎಸ್​ಎಸ್​ ನೀತಿ ಅಲ್ಲವಾ?. ಮುಸ್ಲಿಮರಿಗೆ ಹಿಂದು ಆಸ್ತಿ ಹಂಚಿಕೆ ಮಾಡುತ್ತೇವೆ ಅನ್ನೋದು ಸುಳ್ಳು ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ