ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು

ದಾವಣಗೆರೆ ಉಪಚುನಾವಣೆ ಬಳಿಕ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮ ಮುಂದುವರಿದಿದೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಮಾನತುಗೊಳಿಸಿದ್ದಾರೆ. ಇದು ಸಿಎಂ ಸಿದ್ಧರಾಮಯ್ಯ ಬಣಕ್ಕೆ ಪೆಟ್ಟು ನೀಡಿದಂತಿದೆ ಹಾಗೂ ಪಕ್ಷದಲ್ಲಿನ ಬಂಡಾಯಕ್ಕೆ ಬಿಸಿ ಮುಟ್ಟಿಸಿದೆ.

ಸಿದ್ದರಾಮಯ್ಯ ಬಣಕ್ಕೆ ಮತ್ತೊಂದು ಪೆಟ್ಟು ನೀಡಿದ ಡಿಕೆ ಶಿವಕುಮಾರ್: ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಜಬ್ಬಾರ್ ಅಮಾನತು
ಡಿ.ಕೆ. ಶಿವಕುಮಾರ್ ಮತ್ತು ಜಬ್ಬಾರ್
Edited By:

Updated on: Apr 15, 2026 | 1:54 PM

ಬೆಂಗಳೂರು, ಏ.15: ದಾವಣಗೆರೆ ದಂಗಲ್ ಮುಗಿಯುವಂತೆ ಕಾಣುತ್ತಿಲ್ಲ, ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಅಸಮಾಧನಕ್ಕೆ ಕಾರಣರಾದ ಹಾಗೂ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಕಾಂಗ್ರೆಸ್​​​​​​ ಮೂವರು ಮುಸ್ಲಿಂ ನಾಯಕರಲ್ಲಿ ಇಬ್ಬರ ತಲೆದಂಡವಾಗಿದೆ. ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್​​ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಲಾಗಿತ್ತು. ನಂತರ ನಸೀರ್ ಅಹ್ಮದ್ ಅವರನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಇದರ ಜತೆಗೆ ಸಚಿವ ಜಮೀರ್​​ಗೂ ಸಿಎಂ ಮನೆಗೆ ಕರೆಸಿ ತರಾಟೆ ತೆಗೆದುಕೊಂಡಿದ್ದು ಆಯಿತು. ಇದೀಗ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಮತ್ತು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ವಿಧಾನಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರಿಗೆ ಕೆಪಿಸಿಸಿ ಮತ್ತೊಂದು ಶಾಕ್​​ ನೀಡಿದೆ. ಇದೀಗ ಜಬ್ಬಾರ್​​ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಿಸಿದ್ದಾರೆ. ಈ ಮೂಲಕ ಸಿಎಂ ಸಿದ್ದರಾಮಯ್ಯ ಬಣಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಕಾಂಗ್ರೆಸ್​​ ಪಕ್ಷಕ್ಕೆ ಮುಸ್ಲಿಂ ನಾಯಕರೇ ಬಲ, ಮುಸ್ಲಿಂರಿಗೂ ಕಾಂಗ್ರೆಸ್​​​​ ಬೇಕು, ಅದರೂ ಇಂತಹ ಚಟುವಟಿಕೆ ನಡೆದಿರುವುದು ರಾಜಕೀಯ ಪಾಲಯದಲ್ಲಿ ದೊಡ್ಡ ಅಚ್ಚರಿಯನ್ನೇ ಮೂಡಿಸಿದೆ.

ಇನ್ನು ವಿಧಾನಪರಿಷತ್ ಸದಸ್ಯ (MLC) ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶವನ್ನು ಡಿ.ಕೆ. ಶಿವಕುಮಾರ್ ಅವರೇ ಸ್ವತಃ ನೀಡಿದ್ದಾರೆ. ಅವರು ಪಕ್ಷದ ಶಿಸ್ತನ್ನು ಉಲ್ಲಂಘಿಸಿ ಬಂಡಾಯಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಸಂದರ್ಭದಲ್ಲಿ ಜಬ್ಬಾರ್ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಬಗ್ಗೆ ಕೆಪಿಸಿಸಿಗೆ ಭದ್ರವಾದ ದಾಖಲೆಗಳು ಲಭ್ಯವಾಗಿವೆ ಎನ್ನಲಾಗಿದೆ.

ಇದನ್ನೂ ಓದಿ: ಸಚಿವ ಜಮೀರ್ ಅಚ್ಚರಿಯ ನಡೆ: ನಸೀರ್ ಅಹ್ಮದ್ ನಿವಾಸಕ್ಕೆ ಭೇಟಿ ನೀಡಿದ ಜಮೀರ್, ಕುತೂಹಲ ಮೂಡಿಸಿದ ಚರ್ಚೆ!

ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಆದೇಶ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಯಾವುದೇ ಮುಲಾಜಿಲ್ಲದೆ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ವಜಾಗೊಳಿಸುವ ಮೂಲಕ ಡಿ.ಕೆ. ಶಿವಕುಮಾರ್ ಬಂಡಾಯ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ.ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರವಾಗಿ ಆರಂಭವಾದ ಅಸಮಾಧಾನವು ಈಗ ನಸೀರ್ ಅಹ್ಮದ್ ಮತ್ತು ಅಬ್ದುಲ್ ಜಬ್ಬಾರ್ ಅಂತಹ ಹಿರಿಯ ನಾಯಕರ ರಾಜಕೀಯ ಭವಿಷ್ಯಕ್ಕೆ ಸಂಕಷ್ಟ ತಂದೊಡ್ಡಿದೆ. ಡಿಕೆ ಶಿವಕುಮಾರ್​ ಅವರ ಈ ನಡೆಯಿಂದ ಸಚಿವ ಜಮೀರ್​​​​ಗೂ ಕೂಡ ನಡುಕ ಶುರುವಾಗಿದೆ. ಡಿಕೆ ಶಿವಕುಮಾರ್​​​​ ಜಮೀರ್​​ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ.

ಅಮಾನತು ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಗೆ ಅಬ್ದುಲ್ ಜಬ್ಬಾರ್ ಓಪನ್ ಚಾಲೆಂಜ್!

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಕಾಂಗ್ರೆಸ್‌ನಿಂದ ಅಮಾನತುಗೊಂಡಿರುವ ಎಂಎಲ್‌ಸಿ ಅಬ್ದುಲ್ ಜಬ್ಬಾರ್ ಅವರು ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. “ನನ್ನ ವಿರುದ್ಧ ದಾಖಲೆಗಳಿದ್ದರೆ ಬಹಿರಂಗಪಡಿಸಲಿ” ಎಂದು ಅವರು ಪಕ್ಷದ ನಾಯಕರಿಗೆ ಸವಾಲು ಹಾಕಿದ್ದಾರೆ. “ಪಕ್ಷದಿಂದ ನನ್ನನ್ನು ಅಮಾನತು ಮಾಡಿರುವ ಬಗ್ಗೆ ನನಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಮಾಧ್ಯಮಗಳ ಮೂಲಕವಷ್ಟೇ ಈ ವಿಷಯ ತಿಳಿಯುತ್ತಿದೆ. ಅಧಿಕೃತ ನೋಟಿಸ್ ಬಂದ ಬಳಿಕವಷ್ಟೇ ನಾನು ಸೂಕ್ತ ಉತ್ತರ ನೀಡುತ್ತೇನೆ” ಎಂದು ಜಬ್ಬಾರ್ ತಿಳಿಸಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೇನೆ ಎಂಬ ಆರೋಪಕ್ಕೆ ಕಿಡಿಕಾರಿದ ಅವರು, “ನನ್ನ ವಿರುದ್ಧ ಯಾವುದೇ ಆಡಿಯೋ ಅಥವಾ ವಿಡಿಯೋ ದಾಖಲೆಗಳಿದ್ದರೆ ತೋರಿಸಲಿ. ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.

“ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಾನೇ ಖುದ್ದಾಗಿ ರಾಜೀನಾಮೆ ನೀಡಿದ್ದೇನೆ. ಇದರಲ್ಲಿ ಯಾರ ಒತ್ತಡವೂ ಇರಲಿಲ್ಲ. ಕ್ಷೇತ್ರದಲ್ಲಿ ಅಭ್ಯರ್ಥಿಯಾಗಲಿ ಅಥವಾ ಮುಖಂಡರಾಗಲಿ ಬಂದು ನನ್ನನ್ನು ಮಾತನಾಡಿಸದ ಕಾರಣ ನಾನೇ ನಿರ್ಧಾರ ಕೈಗೊಂಡಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ. “ಕಾಂಗ್ರೆಸ್‌ನಲ್ಲಿ ಒಬ್ಬರಿಗೊಂದು, ಇನ್ನೊಬ್ಬರಿಗೊಂದು ನ್ಯಾಯ ಮಾಡಲಾಗುತ್ತಿದೆ. ಹಿಂದೆ ನಡೆದ ಘಟನೆಗಳನ್ನೆಲ್ಲಾ ಈಗ ಮುನ್ನಲೆಗೆ ತರಲಾಗುತ್ತಿದೆ” ಎಂದು ಹೇಳುವ ಮೂಲಕ ಪಕ್ಷದ ತಾರತಮ್ಯ ನೀತಿಯ ವಿರುದ್ಧ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 1:41 pm, Wed, 15 April 26

Follow Us