ಬ್ರೇಕ್​ಫಾಸ್ಟ್ ಸಭೆ ಬೆನ್ನಲ್ಲೇ ದೆಹಲಿಯಲ್ಲಿ ಗರಿಗೆದರಿದ ರಾಜಕಾರಣ: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಹತ್ವದ ಸಭೆ

ಕರ್ನಾಟಕ ಕಾಂಗ್ರೆಸ್​​ನಲ್ಲಿ ಅಧಿಕಾರ ಹಂಚಿಕೆಗೆ ಸದ್ಯ ಬ್ರೇಕ್‌ಫಾಸ್ಟ್ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಾಗಿ ಉಪಾಹಾರ ಸೇವಿಸಿ ಒಗ್ಗಟ್ಟು ಪ್ರದರ್ಶಿಸಿದರು. ಈ ವೇಳೆ ಅತ್ತ ದೆಹಲಿಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಸಭೆ ಮಾಡಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

ಬ್ರೇಕ್​ಫಾಸ್ಟ್ ಸಭೆ ಬೆನ್ನಲ್ಲೇ ದೆಹಲಿಯಲ್ಲಿ ಗರಿಗೆದರಿದ ರಾಜಕಾರಣ: ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮಹತ್ವದ ಸಭೆ
ರಾಹುಲ್​ ಗಾಂಧಿ, ಮಲ್ಲಿಕಾರ್ಜುನ ಖರ್ಗೆ
Updated By: ಗಂಗಾಧರ​ ಬ. ಸಾಬೋಜಿ

Updated on: Nov 29, 2025 | 7:27 PM

ಬೆಂಗಳೂರು, ನವೆಂಬರ್​ 29: ಕಾಂಗ್ರೆಸ್ (congress) ಬಣದಾಟಕ್ಕೆ ಬ್ರೇಕ್​ಫಾಸ್ಟ್ ಮೂಲಕ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಜೊತೆಗೆ ಕುಳಿತು ಉಪಾಹಾರ ಸೇವಿಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಈ ಬೆನ್ನಲ್ಲೇ ಅತ್ತ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿ ನಿವಾಸದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಕರ್ನಾಟಕದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಕುರ್ಚಿ ಸುತ್ತಲಿನ ಚರ್ಚೆ ತೀವ್ರ ಸ್ವರೂಪಕ್ಕೆ ತಿರುಗಿ 15 ದಿನ ಕಳೆದಿತ್ತು. ಆದರೆ ಹೈಕಮಾಂಡ್ ಅಷ್ಟಾಗಿ ರಾಜ್ಯದತ್ತ ಗಮನ ಹರಿಸಿದ ಬಗ್ಗೆ ಸ್ಪಷ್ಟತೆ ಕಾಣಿಸಲಿಲ್ಲ. ಯಾವಾಗ ದೆಹಲಿಗೆ ಹೋಗಿ ಲಾಬಿ ಶುರುವಾಗುತ್ತೆ ಅನ್ನೋ ಆತಂಕ ಎದುರಾಯ್ತೋ ವರಿಷ್ಠರ ಎಂಟ್ರಿಯಾಗಿತ್ತು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಜತೆ ಬ್ರೇಕ್​ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ

ರಾಜ್ಯ ಕಾಂಗ್ರೆಸ್​ ಪಡೆಯಲ್ಲಿ ಇತ್ತಿಚೆಗೆ ಚರ್ಚೆಯಾದ ವಿಚಾರಗಳು ಒಂದೆರಡಲ್ಲ. ನಾಯಕರು ತಮ್ಮ ತಮ್ಮ ದಾಳವನ್ನ ಕಂಡು ಕಾಣದ ರೀತಿ ಉರುಳಿಸುತ್ತಿದ್ದರು. ಇದಕ್ಕೆಲ್ಲಾ ಬ್ರೇಕ್ ಹಾಕಬೇಕು, ಇಲ್ಲದಿದ್ದರೆ ಆಕ್ಸಿಡೆಂಟ್ ಪಕ್ಕಾ ಎಂದರಿತ ಹೈಕಮಾಂಡ್, ತನ್ನ ಮೊದಲ ಆಟ ಶುರುಮಾಡಿತ್ತು. ಅದೇ ಇಂದು ನಡೆದ ನಾಯಕತ್ವ ಬದಲಾವಣೆಯ ಕೇಂದ್ರಬಿಂದುಗಳ ನಡುವಿನ ಬ್ರೇಕ್​ಫಾಸ್ಟ್ ಮೀಟಿಂಗ್.

ಮಲ್ಲಿಕಾರ್ಜುನ ಖರ್ಗೆ ಜತೆ ರಾಹುಲ್ ಗಾಂಧಿ ಮಹತ್ವದ ಸಭೆ

ರಾಜ್ಯದಲ್ಲಿ ಬ್ರೇಕ್​ಫಾಸ್ಟ್ ಮೀಟಿಂಗ್ ಮುಗಿಯುತ್ತಿದ್ದಂತೆ ದೆಹಲಿಯಲ್ಲಿಯೂ ರಾಜಕಾರಣ ಗರಿಗೆದರಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ರಾಹುಲ್ ಗಾಂಧಿ ಆಗಮಿಸಿದ್ದರು. ಒಂದು ಗಂಟೆಗಳ ಕಾಲ ಕರ್ನಾಟಕದ ವಿದ್ಯಮಾನಗಳ ಸುದೀರ್ಘ ಚರ್ಚೆ ನಡೆದಿದ್ದು, ಸಭೆಯಲ್ಲಿ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಭಾಗಿಯಾಗಿದ್ದರು.

ಇದನ್ನೂ ಓದಿ: ಕರ್ನಾಟಕ ಕಾಂಗ್ರೆಸ್ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಜತೆ ರಾಹುಲ್ ಗಾಂಧಿ ಮಹತ್ವದ ಸಭೆ

ಮೂಲಗಳ ಪ್ರಕಾರ, ಇನ್ನೆರಡು ದಿನದಲ್ಲಿ ರಾಜ್ಯ ರಾಜಕೀಯದ ಬಗ್ಗೆ ನಿರ್ಧಾರವಾಗುವ ಸಾಧ್ಯತೆಯಿದೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್​ ಇಬ್ಬರಿಗೂ ದೆಹಲಿಗೆ ಬುಲಾವ್ ಕೊಟ್ಟು, ಸರ್ಕಾರ ಮತ್ತು ಕೆಪಿಸಿಸಿ ಎರಡೂ ಸ್ಥಾನದ ಬಗ್ಗೆ ನಿರ್ಧಾರ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗ್ತಿದೆ. ನಾಳೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಸೋನಿಯಾ ಗಾಂಧಿ ಸಹ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:17 pm, Sat, 29 November 25