ದಿಲ್ಲೀಲಿ ತಡರಾತ್ರಿವರೆಗಿನ ಸಿಎಂ-ಡಿಸಿಎಂ ಸಭೆ ಸಕ್ಸಸ್: ನಿಗಮ-ಮಂಡಳಿ ಪಟ್ಟಿ ಫೈನಲ್‌

ದೆಹಲಿಯಲ್ಲಿ ಬೀಡುಬಿಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಕೊನೆಗೂ ನಿಗಮ ಮಂಡಳಿ ನೇಮಕ ಪ್ರಕ್ರಿಯೆ ಅಂತಿಮಗೊಳಿಸಿದ್ದಾರೆ. ಸುದೀರ್ಘ ಮಾತುಕತೆ ಮೂಲಕ ನಿಗಮ ಮಂಡಳಿ ಪಟ್ಟಿ ಫೈನಲ್ ಮಾಡಿದ್ದು, ಹೈಕಮಾಂಡ್​ ಒಪ್ಪಿಗೆಯೊಂದೇ ಬಾಕಿ ಇದೆ.

ದಿಲ್ಲೀಲಿ ತಡರಾತ್ರಿವರೆಗಿನ ಸಿಎಂ-ಡಿಸಿಎಂ ಸಭೆ ಸಕ್ಸಸ್: ನಿಗಮ-ಮಂಡಳಿ ಪಟ್ಟಿ ಫೈನಲ್‌
Follow us
| Updated By: ರಮೇಶ್ ಬಿ. ಜವಳಗೇರಾ

Updated on: Dec 20, 2023 | 5:57 PM

ನವದೆಹಲಿ, (ಡಿಸೆಂಬರ್ 20): ನಿಗಮ, ಮಂಡಳಿ ಅಧ್ಯಕ್ಷರ ನೇಮಕ (Karnataka corporation board list) ಪ್ರಕ್ರಿಯೆ ಕ್ಲೈಮ್ಯಾಕ್ಸ್ ಹಂತ ತಲುಪಿದೆ. ಹೌದು..ನವದೆಹಲಿಯಲ್ಲಿ ಬೀಡುಬಿಟ್ಟಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಳೆದು ತೂಗಿ ನಿಗಮ ಮಂಡಳಿ ಪಟ್ಟಿ ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ ಶಾಸಕರಿಗೆ ನಿಗಮ ಮಂಡಳಿ ಸ್ಥಾನ ನೀಡಲು ನಿರ್ಧರಿಸಿದ್ದಾರೆ. ಅದರಂತೆ 32 ಶಾಸಕರ ಹೆಸರು ಫೈನಲ್ ಮಾಡಿದ್ದು, ಅಂತಿಮ ಪಟ್ಟಿಗೆ ಹೈಕಮಾಂಡ್​ನಿಂದ ಒಪ್ಪಿಗೆಗೆ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಇಬ್ಬರೇ 4 ತಾಸು ಪ್ರತ್ಯೇಕವಾಗಿ ಸಭೆ ನಡೆಸಿದ್ದು, ಪಟ್ಟಿ ಬಗ್ಗೆ ಮೂಡಿದ್ದ ಗೊಂದಲ ಬಗೆಹರಿಸಿಕೊಂಡಿದ್ದಾರೆ. ಮೂರು ಬಾರಿ ಹಾಗೂ ಮೂರು ಬಾರಿಗೂ ಹೆಚ್ಚು ಗೆದ್ದಿರುವ ಶಾಸಕರಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಸಿದ್ಧಪಡಿಸಿರುವ ಪಟ್ಟಿಯನ್ನು ಹೈಕಮಾಂಡ್ ಗೆ ರವಾನಿಸಿ ಒಪ್ಪಿಗೆ ಪಡೆಯುವುದೊಂದೇ ಬಾಕಿ ಇದೆ ಎನ್ನಲಾಗಿದೆ. ಮತ್ತೊಂದೆಡೆ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದು ಗೊತ್ತಾಗುತ್ತಿದ್ದಂತೆಯೇ ಕೆಲ ಶಾಸಕರು, ಪ್ರಮುಖ ನಿಗಮ ಮಂಡಳಿ ಹುದ್ದೆಗೆ ದುಂಬಾಲು ಬಿದ್ದಿದ್ದಾರೆ.

ಇದನ್ನೂ ಓದಿ: ನಾನು ಒಂದು ಬಾರಿ ಕೃಷಿ ಮಂತ್ರಿ ಆಗಬೇಕು: ಮತ್ತೆ ಸಚಿವ ಸ್ಥಾನದ ಆಕಾಂಕ್ಷೆ ಬಿಚ್ಚಿಟ್ಟ ಶಾಸಕ ಕೋನರೆಡ್ಡಿ

ಅಲ್ಲದೇ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತಗೊಂಡಿರುವ ನಾಯಕರು ಹಾಗೂ ಟಿಕೆಟ್ ವಂಚಿತರಿಂದಲೂ ನಿಗಮ ಮಂಡಳಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ಆದ್ರೆ, ಮೊದಲ ಹಂತದಲ್ಲಿ ಕೇವಲ ಶಾಸಕರಿಗೆ ನಿಗಮ-ಮಂಡಳಿ ಸ್ಥಾನದ ಅವಕಾಶ ನೀಡಬೇಕೆನ್ನುವುದು ಸಿಎಂ ಸಿದ್ದರಾಮಯ್ಯನವರ ಉದ್ದೇಶವಾಗಿದೆ. ಇದರಿಂದ ನಿಗಮ ಮಂಡಳಿ ಸ್ಥಾನದ ಆಕಾಂಕ್ಷಿಗಳು ಬೇಸರಗೊಂಡಿದ್ದಾರೆ.

ಖರ್ಗೆ ಭೇಟಿಯಾಗಲಿರುವ ಸಿಎಂ

ಡಿಕೆ ಶಿವಕುಮಾರ್ ಜೊತೆ ಸಭೆ ಮಾಡಿ ನಿಗಮ ಮಂಡಳಿ ಪಟ್ಟಿ ಫೈನಲ್ ಮಾಡಿರುವ ಸಿದ್ದರಾಮಯ್ಯ, ಅಂತಿಮ ಪಟ್ಟಿಯೊಂದಿಗೆ ಇಂದು (ಡಿಸೆಂಬರ್ 20) ಸಂಜೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒಪ್ಪಿಗೆ ಪಡೆದುಕೊಳ್ಳಲಿದ್ದಾರೆ. ಬಳಿಕ ಸಿದ್ದರಾಮಯ್ಯ ಇಂದು ರಾತ್ರಿ 8.30ಕ್ಕೆ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಹಾಗೂ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಬಳಿಕ ನಿಗಮ ಮಂಡಳಿಯ ಫೈನಲ್​ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣೆ ದೃಷ್ಟಿಯಿಂದ ನಿಗಮ ಮಂಡಳಿ ನೇಮಕಾತಿ ಮಾಡಿದ್ದು, ಇದು ಯಾವ ರೀತಿ ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ. ಇನ್ನು ನಿಗಮ ಮಂಡಳಿ ಯಾರಿಗೆ ಸಿಗುತ್ತೆ? ವಂಚಿತ ಶಾಸಕರು ಹಾಗೂ ಮುಖಂಡರು ಏನು ಹೇಳುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ