ಎಸ್ಸಿ ಎಸ್ಟಿ ಮತಬೇಟೆಗೆ ಇಳಿದ ಕಾಂಗ್ರೆಸ್, ಎರಡು ಎಕರೆ ಜಮೀನು ನೀಡಲು ಪ್ಲಾನ್
ಮೀಸಲಾತಿ ಹೆಚ್ಚಿಸುವ ಮೂಲಕ ಎಸ್ಸಿ, ಎಸ್ಟಿ ಮತ ಪಡೆಯಲು ಮುಂದಾದ ಬಿಜೆಪಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಸಜ್ಜಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜಮೀನು ರಹಿತ ಕುಟುಂಬಗಳಿಗೆ ಜಮೀನು ಹಂಚಿಕೆ ಮಾಡಲು ಪ್ಲಾನ್ ಹಾಕಿಕೊಳ್ಳಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Election 2023) ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕಾಂಗ್ರೆಸ್ (congress) ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ (Free electricity) ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಜೊತೆಗೆ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆಯನ್ನು ನೀಡುತ್ತೇವೆ ಅಂತಾನೂ ಹೇಳಿದ್ದಾರೆ. ಇದೀಗ ಮೀಸಲಾತಿ ಹೆಚ್ಚಳ ಮಾಡಿ ಪರಿಶಿಷ್ಟ ಜಾತಿ ಮತ್ತು ಪಂಗಡ (SC and ST Community) ಮತ ಪಡೆಯಲು ಮುಂದಾದ ಬಿಜೆಪಿಗೆ (BJP) ಟಕ್ಕರ್ ನೀಡಲು ಕೈ ಪಡೆ ಸಜ್ಜಾಗಿದೆ. ತನ್ನ ಸಾಂಪ್ರದಾಯಿಕ ಮತ ಕೈತಪ್ಪುವ ಭೀತಿ ಎದುರಿಸುತ್ತಿರುವ ಕಾಂಗ್ರೆಸ್, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಜಮೀನು ರಹಿತ ಕುಟುಂಬಗಳಿಗೆ ಜಮೀನು ಮತ್ತು ಗಂಗಾಕಲ್ಯಾಣ ಯೋಜನೆಯಡಿ ಬೋರ್ ಹಾಕಿಸಿಕೊಡುವ ಪ್ಲ್ಯಾನ್ ಹಾಕಿಕೊಂಡಿದೆ. ಆ ಮೂಲಕ ತಮ್ಮ ಸಾಂಪ್ರದಾಯಿಕ ಮತ ಬ್ಯಾಂಕ್ ಅನ್ನು ಭದ್ರಪಡಿಸಲು ಕಾಂಗ್ರೆಸ್ ಮುಂದಾಗಿದೆ.
ಮೀಸಲಾತಿ ಹೆಚ್ಚಿಸಿ ಲಾಭ ಪಡೆಯಲು ಮುಂದಾದ ಬಿಜೆಪಿಗೆ ಟಕ್ಕರ್ ನೀಡಲು ಮುಂದಾದ ಕಾಂಗ್ರೆಸ್ನ ಜಿ.ಪರಮೇಶ್ವರ್ ಮತ್ತು ಉಗ್ರಪ್ಪ ನೇತೃತ್ವದ ಟೀಮ್, ಜಮೀನು ರಹಿತ ಎಸ್ಸಿ ಎಸ್ಟಿ ಕುಟುಂಬಗಳಿಗೆ ಎರಡು ಎಕರೆ ಜಮೀನು ಹಂಚಿಕೆ ಮಾಡಿ ಗಂಗಾಕಲ್ಯಾಣ ಯೋಜನೆಯಡಿ ಒಂದು ಬೋರ್ ಹಾಕಿಸಿಕೊಡುವ ಪ್ಲ್ಯಾನ್ ಹಾಕಿಕೊಂಡಿದೆ. ಅಲ್ಲದೆ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಸಾವಿತ್ರಿಬಾಯಿ ಫುಲೆ ಯೋಜನೆಯಡಿ ಪ್ರೋತ್ಸಾಹಧನ ನೀಡಲು ಚಿಂತನೆ ನಡೆಸಲಾಗಿದೆ.
ಇದನ್ನೂ ಓದಿ: ಎಸ್ಸಿ, ಎಸ್ಟಿ ಜನರು ಬುದ್ಧಿವಂತರಾಗಿದ್ದಾರೆ: ಕಾಂಗ್ರೆಸ್ ಐಕ್ಯತಾ ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಟಾಂಗ್
1 ರಿಂದ 5ನೇ ತರಗತಿವರೆಗಿನ ಶಾಲಾ ವಿಧ್ಯಾರ್ಥಿಗಳಿಗೆ 150 ರೂಪಾಯಿ, 6-10ನೇ ತರಗತಿವರೆಗಿನ ಮಕ್ಕಳಿಗೆ 300 ರೂಪಾಯಿಗಳನ್ನು ತಾಯಿ ಹೆಸರಲ್ಲಿ ಬ್ಯಾಂಕ್ ಖಾತೆ ಮಾಡಿಸಿ ನೇರವಾಗಿ ಅದಕ್ಕೆ ಜಮೆ ಮಾಡಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ನಿಲ್ಲಿಸಿರುವ ವಿಧ್ಯಾರ್ಥಿ ವೇತನವನ್ನ ರಾಜ್ಯ ಸರ್ಕಾರದಿಂದಲೇ ಭರಿಸುವುದು, ವಸತಿ ರಹಿತ 5 ಲಕ್ಷ ಕುಟುಂಬಗಳಿಗೆ ವಸತಿ ಕಟ್ಟಿಕೊಡುವುದು, ಐರಾವತ ಯೋಜನೆ ಅಡಿಯಲ್ಲಿ 10,000 ಯುವಕರಿಗೆ ಉದ್ಯೋಗ, ಬೈಕ್, ಆಟೋ, ಕಾರು ಖರೀದಿಗೆ ಸಬ್ಸಿಡಿ ಮತ್ತು ಸಹಾಯ ಧನ ನೀಡಲು ನಿರ್ಧರಿಸಲಾಗಿದೆ.
ಈ ಎಲ್ಲಾ ಘೋಷಣೆಗಳನ್ನ ಬಸ್ ಯಾತ್ರೆ ವೇಳೆಯೂ ಪ್ರಸ್ತಾಪಿಸಿ ಪ್ರಣಾಳಿಕೆ ಘೋಷಿಸಲು ಪರಮೇಶ್ವರ್ ಮತ್ತು ಉಗ್ರಪ್ಪ ನೇತೃತ್ವದ ತಂಡ ಯೋಜನೆ ಹಾಕಿಕೊಂಡಿದೆ. ಆ ಮೂಲಕ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದ ಮತ ಬ್ಯಾಂಕ್ ಕಾಂಗ್ರೆಸ್ ಪರವಾಗಿ ಸೃಷ್ಟಿಸಲು ಕೈ ಪಡೆ ಯತ್ನಿಸುತ್ತಿದೆ.
ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:23 pm, Thu, 12 January 23