ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಎಂಬ ಇತಿಹಾಸ ಸೃಷ್ಟಿಸಿದ ಬಿಜೆಪಿ: ಕುಮಾರಸ್ವಾಮಿ
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸುವ ಮಾರ್ಗದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ ಎಂದು ಕಟೌಟ್ ಹಾಕಲಾಗಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಒಂದೆಡೆ ಕಾಂಗ್ರೆಸ್ ಟೀಕಿಸುತ್ತಿದ್ದರೆ, ಇನ್ನೊಂದೆಡೆ ಜೆಡಿಎಸ್ ಕೂಡ ಬಿಜೆಪಿಗೆ ತಿರುಗೇಟು ನೀಡುತ್ತಿದೆ.
ಹಾಸನ: ಪ್ರಧಾನಿ ನರೇಂದ್ರ ಮೋದಿ (Narendra Modi) ರೋಡ್ ಶೋ ನಡೆಸುವ ಮಾರ್ಗದಲ್ಲಿ ಉರಿಗೌಡ ಮತ್ತು ದೊಡ್ಡ ನಂಜೇಗೌಡ (Uri Gowda And Dodda Nanjegowda) ಮಹಾದ್ವಾರ ಎಂದು ಕಟೌಟ್ ಹಾಕಲಾಗಿತ್ತು. ಇದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಒಂದೆಡೆ ಕಾಂಗ್ರೆಸ್ ಟೀಕಿಸುತ್ತಿದ್ದರೆ, ಇನ್ನೊಂದೆಡೆ ಜೆಡಿಎಸ್ ಕೂಡ ಬಿಜೆಪಿಗೆ ತಿರುಗೇಟು ನೀಡುತ್ತಿದೆ. ಇದೀಗ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ (HD Kumaraswamy), ಟಿಪ್ಪು ಕೊಂದವರು ಉರಿಗೌಡ ನಂಜೇಗೌಡ ಎಂದು ಪ್ರಚಾರ ಮಾಡುವ ಮೂಲಕ ಬಿಜೆಪಿಯವರು ಈ ಸಮಾಜದ ಗೌರವ ಹಾಳು ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬುದಕ್ಕೆ ಇತಿಹಾಸದಲ್ಲಿ ಯಾವುದೇ ರೀತಿಯ ದಾಖಲೆಗಳಿಲ್ಲ. ಕುತಂತ್ರದಿಂದ ಕೊಂದಿದ್ದಾರೆ ಎನ್ನುವುದಕ್ಕೆ ಇತಿಹಾಸ ಇದೆ. ಉರಿಗೌಡ ಮತ್ತು ನಂಜೇಗೌಡ ಅವರೇ ಟಿಪ್ಪುವನ್ನು ಕೊಂದಿದ್ದಾರೆ ಎಂಬ ಇತಿಹಾಸವನ್ನು ನಿರ್ಮಿಸಿದವರು ಬಿಜೆಪಿಯವರು. ಈ ಇತಿಹಾಸ ಸೃಷ್ಟಿ ಮಾಡಿ ಅದಕ್ಕೆ ನಮ್ಮ ಸಮುದಾಯದ ಇಬ್ಬರ ಹೆಸರು ಇಟ್ಟಿದ್ದಾರೆ. ಆ ಮೂಲಕ ಒಕ್ಕಲಿಗರ ಸಮುದಾಯಕ್ಕೆ ಇವರು ಅಗೌರವ ತೋರಿದ್ದಾರೆ. ಹೀಗಾಗಿ ಒಕ್ಕಲಿಗರು ಇದರ ವಿರುದ್ಧ ಹೋರಾಟ ಮಾಡಿ ದಿಕ್ಕರಿಸಬೇಕು. ಬಿಜೆಪಿ ಪಕ್ಷದವರನ್ನ ಎಚ್ಚರಿಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು.
ಇದನ್ನೂ ಓದಿ: ಗೆಲ್ಲುವುದು 20 ಅಂತೆ ಹೇಳಿಕೊಳ್ಳುವುದು 120 ಅಂತೆ: ಜೆಡಿಎಸ್ ಟಾರ್ಗೆಟ್ ಬಗ್ಗೆ ಸಚಿವ ಅಶೋಕ್ ವ್ಯಂಗ್ಯ
ಇದಕ್ಕೂ ಮುನ್ನ ಸರಣಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, ‘ಕಪೋಲಕಲ್ಪಿತ ಪಾತ್ರ ಸೃಷ್ಟಿಸಿ, ಕೋಮುದ್ವೇಷದ ವಿಷಬೀಜ ಬಿತ್ತಿ, ಅದು ಬೆಳೆಯಲು ತನು ಮನ ಧನವನ್ನೆಲ್ಲ ಅರ್ಪಿಸುವುದೇ ಬಿಜೆಪಿ ಎಂದು ಹೇಳಿದ್ದರು. ಈಗ ಒಕ್ಕಲಿಗರ ಹೆಗಲ ಮೇಲೆ ಕೋವಿ ಇಟ್ಟು ಸುಳ್ಳಿನ ಕಥೆ ಸೃಷ್ಟಿಸಿ, ಅಸಲಿ ಇತಿಹಾಸವನ್ನು ಕೊಲ್ಲುವ ಹುನ್ನಾರವನ್ನು ಬಿಜೆಪಿ ನಡೆಸಿದೆ. ಟಿಪ್ಪುವನ್ನು ಕೊಂದವರೆಂದು ಉರಿಗೌಡ, ನಂಜೇಗೌಡ ಹೆಸರು ಸೃಷ್ಟಿ ಮಾಡಲಾಗಿದೆ. ಒಕ್ಕಲಿಗ ಕಾಲ್ಪನಿಕ ಹೆಸರು ಸೃಷ್ಟಿಸಿ ಮಹಾದ್ವಾರಕ್ಕೆ ಇಟ್ಟಿದ್ದು ಅಪಮಾನ, ಅದರಲ್ಲೂ ಸಮಸ್ತ ಒಕ್ಕಲಿಗರ ಕುಲಕ್ಕೆ ಮಾಡಿದ ಘೋರ ಅಪಮಾನ ಎಂದಿದ್ದರು.
ಮಹಾದ್ವಾರದಲ್ಲಿ ಇದ್ದ ಬಾಲಗಂಗಾಧರನಾಥಶ್ರೀ ಹೆಸರು ಮುಚ್ಚಿಟ್ಟು. ಆ ಜಾಗದಲ್ಲಿ ಕಾಲ್ಪನಿಕ ಪಾತ್ರಗಳ ಹೆಸರು ಹಾಕಿದ ದುರುದ್ದೇಶವೇನು? ಇದು ಬಾಲಗಂಗಾಧರನಾಥ ಸ್ವಾಮೀಜಿಗೆ ಮಾಡಿದ ಅಪಮಾನ. ದ್ವೇಷದ ನಡೆಯಿಂದ ಒಕ್ಕಲಿಗರ ಮನ ಗೆಲ್ಲಬಹುದೆಂಬ ಭ್ರಮೆಯಲ್ಲಿದೆ. ಇಂತಹ ಲಜ್ಜಗೇಡಿ ನಡೆ ಬಿಜೆಪಿ ಸರ್ಕಾರದ ನೀಚ ರಾಜಕಾರಣಕ್ಕೆ ಸಾಕ್ಷಿ. ಮೋದಿ ಮೆಚ್ಚಿಸಲು ಉರಿಗೌಡ, ನಂಜೇಗೌಡ ಹೆಸರು ಸೃಷ್ಟಿಸಲಾಯ್ತಾ? ಆ ಷಡ್ಯಂತ್ರಕ್ಕೆ ರಾಜ್ಯ ಸರ್ಕಾರದ ಒಪ್ಪಿಗೆಯೂ ಇತ್ತಾ? ಇಲ್ಲವೇ? ಇಂಥ ಹೊಣೆಗೇಡಿ ಕೃತ್ಯದ ಬಗ್ಗೆ ಪ್ರಧಾನಿ ಕಚೇರಿಗೂ ಮಾಹಿತಿ ಇತ್ತಾ? ಸುಳ್ಳಿಗೆ ಆಯಸ್ಸು ಕಡಿಮೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:35 pm, Tue, 14 March 23