ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಸಿಎಂ ವೀರಪ್ಪ ಮೊಯ್ಲಿ!
Veerappa Moily Retirement: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ ಅವರು ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ಈ ಬಾರಿ ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ವೀರಪ್ಪ ಮೊಯ್ಲಿ ಅವರು ಇನ್ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧೆ ಮಾಡದಿರಲು ತೀರ್ಮಾನಿಸಿದ್ದಾರೆ.
ಚಿಕ್ಕಬಳ್ಳಾಪುರ, (ಏಪ್ರಿಲ್, 08): ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಹಿರಿಯ ನಾಯಕ ಎಂ ವೀರಪ್ಪ ಮೊಯ್ಲಿ(Veerappa Moily) ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದ್ರೆ, ಹೈಕಮಾಂಡ್ ಕೊನೆ ಕ್ಷಣದಲ್ಲಿ ಯುವ ನಾಯಕರ ರಕ್ಷಾ ರಾಮಯ್ಯ ಅವರಿಗೆ ನೀಡಿದೆ. ಇದರಿಂದ ವೀರಪ್ಪ ಮೊಯ್ಲಿ ಕೊಂಚ ನಿರಾಸೆಯಲ್ಲಿದ್ದರು. ಇದೀಗ ಅಂತಿಮವಾಗಿ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲ ಘೋಷಣೆ ಮಾಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ವೀರಪ್ಪ ಮೊಯ್ಲಿ, ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಟಿಕೆಟ್ ಟಿಕೆಟ್ ನೀಡಬೇಕೆಂದು ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದರು. ಆದ್ರೆ, ಹೈಕಮಾಂಡ್ ಸ್ಪರ್ಧೆಯಿಂದ ಹಿಂದೆ ಸರಿಯಲು ಮಾನವಿ ಮಾಡಿತ್ತು. ಹೈಕಮಾಂಡ್ಗೆ ಗೌರವ ಕೊಟ್ಟು ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ. ನನ್ನ ಬೆಂಬಲಿಗರು ನಮ್ಮ ಅಭ್ಯರ್ಥಿ ರಕ್ಷಾ ರಾಮಯ್ಯ ಅವರಿಗೆ ಬೆಂಬಲಿಸಬೇಕೆಂದು ಕರೆ ನೀಡಿದರು. ಈ ಮೂಲಕ ಟಿಕೆಟ್ ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ವೀರಪ್ಪ ಮೊಯ್ಲಿ ಅಂತಿಮವಾಗಿ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯಗೆ ಬೆಂಬಲ ಘೋಷಿಸಿದರು.
ವೀರಪ್ಪ ಮೊಯ್ಲಿ ರಾಜಕೀಯ ಹಾದಿ ಹೇಗಿತ್ತು?
- 2012: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ.
- 2011–2012: ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಕ್ಯಾಬಿನೆಟ್ ಮಂತ್ರಿ
- 2009–2011: ಕಾನೂನು ಮತ್ತು ನ್ಯಾಯದ ಕ್ಯಾಬಿನೆಟ್ ಮಂತ್ರಿ
- 2006–2009: ಕೇಂದ್ರ ಶಿಕ್ಷಣ ಸಂಸ್ಥೆಗಳಲ್ಲಿ OBC ಗಳಿಗೆ 27 ಪ್ರತಿಶತ ಮೀಸಲಾತಿಯ ಅನುಷ್ಠಾನಕ್ಕಾಗಿ ಉಸ್ತುವಾರಿ ಸಮಿತಿಯ ಅಧ್ಯಕ್ಷ.
- 2002–2004: ಕಂದಾಯ ಸುಧಾರಣಾ ಆಯೋಗದ ಅಧ್ಯಕ್ಷರು
- 2005–2009:2ನೇ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು
- 2000–2002: ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರು
- 1992–1994: ಕರ್ನಾಟಕದ ಮುಖ್ಯಮಂತ್ರಿ
- 1989–1992: ಕಾನೂನು, ಯುವಜನ ಸೇವೆ, ಸಂಸ್ಕೃತಿ, ಮಾಹಿತಿ, ಸಂಸದೀಯ ವ್ಯವಹಾರಗಳು ಮತ್ತು ಶಿಕ್ಷಣ ಸಚಿವ
- 1983–1985: ಕರ್ನಾಟಕ ವಿಧಾನಸಭೆ ವಿರೋಧ ಪಕ್ಷದ ನಾಯಕ.
- 1980–1982: ಕರ್ನಾಟಕ ಹಣಕಾಸು ಮತ್ತು ಯೋಜನಾ ಸಚಿವ.
- 1974–1977: ಕರ್ನಾಟಕ ಸಣ್ಣ ಪ್ರಮಾಣದ ಕೈಗಾರಿಕೆಗಳ ಸಚಿವ.
ವೀರಪ್ಪ ಮೊಯ್ಲಿ ರಾಜಕಾರಣದ ಜತೆಗೆ ಸಾಹಿತಿ
ವೀರಪ್ಪ ಮೊಯ್ಲಿಯವರು ಕೇವಲ ರಾಜಕಾರಣಿ ಅಲ್ಲ ಸಾಹಿತಿ ಸಹ ಆಗಿದ್ದಾರೆ. ಅವರ ಹೆಂಡತಿ ಮಾಲತಿ ಮೊಯ್ಲಿ ಸಹ ಲೇಖಕಿಯಾಗಿದ್ದಾರೆ. ಇನ್ನು ಮೊಯ್ಲಿಯವರ ಕೃತಿಗಳು ಯಾವುವು ಎನ್ನುವುದನ್ನು ನೋಡುವುದಾದರೆ.
ಕಾದಂಬರಿ: ಸುಳಿಗಾಳಿ, ಸಾಗರದೀಪ. ಕೊಟ್ಟ. ತೆಂಬರೆ ನಾಟಕಗಳು: ಮಿಲನ, ಪ್ರೇಮವೆಂದರೆ, ಪರಾಜಿತ. ಕವನ ಸಂಕಲನ: ಹಾಲು ಜೇನು, ಮತ್ತೆ ನಡೆಯಲಿ ಸಮರ, ಯಕ್ಷಪ್ರಶ್ನೆ ಜೊತೆಯಾಗಿ ನಡೆಯೋಣ ( ಮಾಲತಿ ಮೊಯಿಲಿಯವರ ಜೊತೆಯಲ್ಲಿ) ಮಹಾಕಾವ್ಯ: ಶ್ರೀರಾಮಾಯಣ ಮಹಾನ್ವೇಷಣಂ, ಶ್ರೀಬಾಹುಬಲಿ ಅಹಿಂಸಾದಿಗ್ವಿಜಯಂ
ಪುರಸ್ಕಾರ
- 2000ರಲ್ಲಿ ಮೊಯಿಲಿಯವರಿಗೆ ಅಲ್-ಅಮೀನ್ ಸದ್ಭಾವನಾ ಪ್ರಶಸ್ತಿ ಲಭಿಸಿದೆ.
- 2001ರಲ್ಲಿ ಹಿಂದುಳಿದ ಹಾಗು ಅಲ್ಪಸಂಖ್ಯಾತ ವರ್ಗದವರ ಸುಧಾರಣೆಗಾಗಿ ಕೊಡಮಾಡುವ ದೇವರಾಜ ಅರಸ ಪ್ರಶಸ್ತಿ ಸಿಕ್ಕಿದೆ.
- 2001ರ ಆರ್ಯಭಟ ಪುರಸ್ಕಾರ.
- 2002ರಲ್ಲಿ ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪುರಸ್ಕಾರ ಲಭಿಸಿದೆ.
- 2020 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯ ಮಹಾಕಾವ್ಯಕ್ಕೆ)
Published On - 2:51 pm, Mon, 8 April 24