ಬೆಂಗಳೂರು, ಏಪ್ರಿಲ್ 21: ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ (Siddaramaiah Government) ಕನ್ನಡಿಗರ ಬದುಕಿಗೆ ಗ್ಯಾರಂಟಿ ಇಲ್ಲ. ರಾಜ್ಯದಲ್ಲಿ ಕೊಲೆ, ಹಲ್ಲೆ, ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದೊಂದು ಕ್ರೂರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಕಿಡಿಕಾರಿದರು. ಬೆಂಗಳೂರಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ (Neha Hiremath) ಕೊಲೆ ನಡೆದಿದೆ. ಸಿದ್ದರಾಮಯ್ಯ ಅವರು ತಮ್ಮದೇ ಪಕ್ಷದ ಕಾರ್ಯಕರ್ತನಿಗೆ ನ್ಯಾಯ ಕೊಡಿಸಿಲ್ಲ ಎಂದು ವಾಗ್ದಾಳಿ ಮಾಡಿದರು.
ಭಾರತದ ಭವಿಷ್ಯಕ್ಕೆ ಮತ ಕೇಳುತ್ತಿದ್ದ ಬಿಜೆಪಿ ಕಾರ್ಯಕರ್ತರಿಗೆ ಕಾರು ಹಾಯಿಸಿದ್ದಾರೆ. ಕಲಾವಿದರಾದ ಹರ್ಷಿಕಾ ಪೂಣಚ್ಚ ಮೇಲೆ ಹಲ್ಲೆ ಮಾಡಿದ್ದಾರೆ. ವಂಟಮೂರಿಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿ ಅಮಾನುಷವಾಗಿ ನಡೆದುಕೊಂಡರೂ ಕ್ರಮ ಕೈಗೊಂಡಿಲ್ಲ. ಕೋಲಾರ ಮತ್ತು ಶಿವಮೊಗ್ಗದಲ್ಲಿ ಔರಂಗಜೇಬ್ ಕಟೌಟ್ ಹಾಕಿದ್ದರು. ಮಂಡ್ಯದಲ್ಲಿ ಪೊಲೀಸ್ ಅಧಿಕಾರಿಗಳ ಮೂಲಕ ಹನುಮ ಧ್ವಜ ಇಳಿಸಿದ್ದಾರೆ. ಇದೊಂದು ಕ್ರೂರ ಸರ್ಕಾರ. ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ಮಾಡಿದರು.
ಜನರು ಸರ್ಕಾರದ ಗ್ಯಾರಂಟಿ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ. ಜನರಿಗೆ ನೀರು, ವಿದ್ಯುತ್ ಗ್ಯಾರಂಟಿ ಇಲ್ಲ. ತೆರಿಗೆ ಹೆಚ್ಚಳವಾಗಿದೆ. ಸಿದ್ದರಾಮಯ್ಯ ಸರ್ಕಾರ ಮತಾಂಧ ಶಕ್ತಿಯನ್ನು ತಮ್ಮ ಆಡಳಿತದ ಭಾಗವಾಗಿ ಮಾಡಿಕೊಂಡಿದೆ. ಸರ್ಕಾರ ಬಂದು ಒಂದೇ ವರ್ಷದಲ್ಲಿ ಮತಾಂಧರು ರಾಜ್ಯವನ್ನು ಯುದ್ಧಭೂಮಿ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ರಾಜ್ಯದ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಕಾಣಲಿದ್ದಾರೆ: ಬಿಎಸ್ ಯಡಿಯೂರಪ್ಪ
ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ನೀಡುತ್ತಿದ್ದ ಹಣ ನಿಲ್ಲಿಸಿದ್ದಾರೆ. ಇದೊಂದು ಕಲ್ಲು ಬಂಡೆ ಸರ್ಕಾರ. ಸರ್ಕಾರ ದಿವಾಳಿಯಾಗಿದೆ. ಸರ್ಕಾರದ ಖಜಾನೆಯಲ್ಲಿ ಹಣ ಇಲ್ಲ. ನೀರಾವರಿ ವ್ಯವಸ್ಥೆ ನೆಲ ಕಚ್ಚಿದೆ. ಕನಿಷ್ಠ ಒಂದು ಕಿಮೀನಷ್ಟೂ ರಸ್ತೆ ಮಾಡಿಲ್ಲ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಾಹೀರಾತು ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಕಾರ್ಯಕ್ರಮಗಳಲ್ಲಿ ಜನ ಸೇರುತ್ತಿಲ್ಲ. ಅದಕ್ಕೆ ಜಾಹೀರಾತು ನೀಡುತ್ತಿದ್ದಾರೆ. ಪೊಳ್ಳು ಭರವಸೆ ನೀಡುವ ಜಾಹೀರಾತು ಯಾರು ನಂಬಲ್ಲ. ಚುನಾವಣೆ ಬಳಿಕ ನಾವೆಲ್ಲ ಸೇರೋಣ. ಆಗ ವಾತಾವರಣ ಸ್ಪಷ್ಟವಾಗಿ ತಿಳಿಯುತ್ತೆ. ಜನ ಮೋದಿ ಮೋದಿ ಅಂತಿದ್ದಾರೆ. ಕಾಂಗ್ರೆಸ್ನವರು ಹತಾಶರಾಗಿದ್ದಾರೆ. ಕಾಂಗ್ರೆಸ್ನವರು ಗೆಲ್ಲುವ ನಾಲ್ಕೈದು ಕ್ಷೇತ್ರ ಯಾವುದು ಅಂತ ತಿಳಿಸಲಿ ಎಂದರು.
ಇಡೀ ದೇಶದಲ್ಲಿ ಮೋದಿ ವಾತಾವರಣವಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಒಂದೂ ಕ್ಷೇತ್ರ ಕೂಡ ಗೆಲ್ಲಲ್ಲ. ಇಂದಿನಿಂದ ನಾನು ಮತ್ತೆ ಪ್ರವಾಸ ಮಾಡುತ್ತಿದ್ದೇನೆ. ನಮ್ಮ ಕಾರ್ಯಕ್ರಮಗಳಲ್ಲಿ ಜನರು ನಿರೀಕ್ಷೆಗೆ ಮೀರಿ ಸೇರುತ್ತಿದ್ದಾರೆ. ಜನರು ನಮ್ಮ ಪರವಾಗಿ ಇದ್ದಾರೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Sun, 21 April 24