Siddaramaiah: ಮಾಜಿ ಸಿಎಂ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧೆ ಬಹುತೇಕ ಖಚಿತ
ಮಾಜಿ ಸಿಎಂ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದ ಶಾಸಕ ಯತೀಂದ್ರ, ಇನ್ನು 2-3 ದಿನಗಳಲ್ಲಿ ನಮ್ಮ ತಂದೆ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂದರು.
ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elction 2023) ಸಮೀಪಿಸುತ್ತಿದ್ದರೂ ಮಾಜಿ ಮುಖ್ಯಮಂತ್ರಿಯೂ ಆಗಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಸ್ಪರ್ಧಿಸುವ ಕ್ಷೇತ್ರದ ಘೋಷಣೆಯಾಗಿಲ್ಲ. ಆದರೆ ಪುತ್ರನ ಭವಿಷ್ಯಕ್ಕಾಗಿ ಬಿಟ್ಟುಕೊಟ್ಟಿದ್ದ ವರುಣಾ ಕ್ಷೇತ್ರದಿಂದಲೇ (Varuna Constituency) ಸಿದ್ದರಾಮಯ್ಯ ಅವರು ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಪರೋಕ್ಷವಾಗಿ ಖಚಿತಪಡಿಸಿದ ಶಾಸಕ ಯತೀಂದ್ರ (Dr. Yathindra Siddaramaiah), ವರುಣ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ವರಿಷ್ಠರು ಸಲಹೆ ನೀಡಿದ್ದಾರೆ. ಹೈಕಮಾಂಡ್ ನಾಯಕರು ಏಕೆ ಈ ನಿರ್ಧಾರ ತೆಗೆದುಕೊಂಡರೋ ಗೊತ್ತಿಲ್ಲ. ಈ ಬಗ್ಗೆ ತಂದೆಯೇ ಸ್ಪಷ್ಟನೆ ನೀಡಬೇಕು ಎಂದರು. ಮೈಸೂರಿನಲ್ಲಿ ಹೇಳಿಕೆ ನೀಡಿದ ಅವರು, ಕೋಲಾರದಲ್ಲಿ ನಾನು ಕೂಡ ಎರಡು ಬಾರಿ ಆಂತರಿಕ ಸರ್ವೆ ಮಾಡಿಸಿದ್ದೇನೆ. ಸಿದ್ದರಾಮಯ್ಯ ಪರವಾಗಿಯೇ ಆಂತರಿಕ ಸರ್ವೆ ಫಲಿತಾಂಶ ಬಂದಿದೆ. ಕೋಲಾರದಲ್ಲಿ ನಮ್ಮ ತಂದೆ ಗೆಲುವಿಗೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಎರಡು ಮೂರು ದಿನಗಳಲ್ಲಿ ತಮ್ಮ ನಿರ್ಧಾರ ತಿಳಿಸಲಿದ್ದಾರೆ ಎಂದರು.
ಸಿದ್ದರಾಮಯ್ಯ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಿಂತರೂ ಗೆಲ್ಲುತ್ತಾರೆ. ಒಂದು ವೇಳೆ ಸಿದ್ದರಾಮಯ್ಯ ಅವರು ವರುಣ ಕ್ಷೇತ್ರಕ್ಕೆ ಬಂದರೆ ನಾನು ಕ್ಷೇತ್ರ ಬಿಟ್ಟು ಕೊಡುತ್ತೇನೆ. ಆದರೆ ನಾನು ಬೇರೆ ಯಾವುದೇ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುವುದಿಲ್ಲ. ಬೇರೆ ಕ್ಷೇತ್ರದಲ್ಲಿ ಅಲ್ಲಿನ ಸ್ಥಳೀಯ ಅಭ್ಯರ್ಥಿಗಳೇ ಕೆಲಸ ಮಾಡುತ್ತಾರೆ ಎಂದು ಮೈಸೂರಿನ ಟಿ.ನರಸೀಪುರದಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು, ಮುಖಂಡರಿಂದ ಸಭೆ
ಕೋಲಾರದಲ್ಲಿ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸಲಹೆ ನೀಡಿದ್ದಾರೆ ಎಂಬ ವಿಚಾರವಾಗಿ ಕೋಲಾರದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಹಾಗೂ ಮುಖಂಡರು ಸಭೆ ನಡೆಯಿತು. ಕೋಲಾರ ನಗರದ ನಚಿಕೇತ ನಿವಾಸದ ಬಳಿ ನಡೆದ ಸಭೆಯಲ್ಲಿ ಕೋಲಾರ ಸ್ಪರ್ಧೆಯಿಂದ ಹಿಂದೆ ಸರಿದಿರುವುದಕ್ಕೆ ಬೇಸರ ವ್ಯಕ್ತಪಡಿಸಲಾಗಿದೆ. ಸಿದ್ದರಾಮಯ್ಯ ಅವರು ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಒತ್ತಡ ಹೇರಲು ನಿರ್ಧಾರ ಕೈಗೊಳ್ಳಲಾಗಿದ್ದು, ಅಗತ್ಯ ಬಿದ್ದರೆ ಸಿದ್ದರಾಮಯ್ಯ ನಿವಾಸದ ಬಳಿ ಧರಣಿ ಮಾಡಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ರಾಜಕೀಯ ನಿವೃತ್ತಿ; ಶ್ರೀನಿವಾಸಗೌಡ
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ಸಲಹೆ: ಸಿಎಂ ಬೊಮ್ಮಾಯಿ ರಿಯಾಕ್ಷನ್
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ಸಲಹೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದು ಅವರ ಆಂತರಿಕ ವಿಚಾರ ಎಂದರು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ಹೆಲಿಪ್ಯಾಡ್ನಲ್ಲಿ ಈ ಹೇಳಿಕೆ ನೀಡಿದರು. ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೇಲೆ ಆಜಾನ್ ಕೂಗಿದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ಈ ಪ್ರಕರಣದ ಕುರಿತು ಸ್ಥಳೀಯ ಆಡಳಿತ ನೋಡಿಕೊಳ್ಳುತ್ತದೆ ಎಂದರು. ಹನಿ ನೀರಾವರಿ ಯೋಜನೆಗೆ ಅಡಿಕೆ ಬೆಳೆ ಸೇರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಧರಣಿ ನಡೆಸಲು ಮುಂದಾದ ಸ್ಥಳೀಯ ಸಂಸ್ಥೆಗಳ ನೌಕರರು, ಇತರ ಸಂಘಟನೆಗಳ ಮುಖಂಡರನ್ನು ಕರೆದು ಮಾತನಾಡಿ ಪರಿಹಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್ ಪಕ್ಷಕ್ಕೆ ಇಂತಹ ಹೀನಾಯ ಸ್ಥಿತಿ ಬರಬಾರದಿತ್ತು: ನಳಿನ್ ಕುಮಾರ್ ಕಟೀಲ್
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸದಂತೆ ಸಿದ್ದರಾಮಯ್ಯಗೆ ಸಲಹೆ ನೀಡಿದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್ ಪಕ್ಷಕ್ಕೆ ಇಂತಹ ಹೀನಾಯ ಸ್ಥಿತಿ ಬರಬಾರದಿತ್ತು. ಒಬ್ಬ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದವರಿಗೆ ಇಂದು ಚುನಾವಣೆಗೆ ನಿಲ್ಲಲು ಕ್ಷೇತ್ರ ಇಲ್ಲ ಅಂತಾದರೆ ಅವರ ಆಡಳಿತ ಎಂತಹದ್ದು ಅಂತಾ ಗೊತ್ತಾಗುತ್ತದೆ. ಇದನ್ನು ರಾಜಕೀಯದ ಪಲಾಯನವಾದ ಎಂದು ಕರೆಯಬೇಕಾಗುತ್ತದೆ. ಬಹುಶಃ ಈ ಬಾರಿ ಸಿದ್ದರಾಮಯ್ಯಗೆ ಟಿಕೆಟ್ ಸಿಗುವುದಿಲ್ಲ ಅಂತಾ ಅನ್ನಿಸುತ್ತಿದೆ ಎಂದರು. ದಾವಣಗೆರೆ ಮತ್ತು ಬೆಂಗಳೂರಿನಲ್ಲಿ ಮೋದಿ ರೋಡ್ ಶೋ ನಡೆಯಲಿದೆ. ಉರಿಗೌಡ ನಂಜೇಗೌಡ ಸಿನಿಮಾದ ಬಗ್ಗೆ ಮುನಿರತ್ನ ಅವರನ್ನೇ ಕೇಳಿ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Sun, 19 March 23