ಬೆಂಗಳೂರು, (ಮಾರ್ಚ್ 28): ಕರ್ನಾಟಕ ಕಾಂಗ್ರೆಸ್ ಪಾಳೆಯದಲ್ಲಿ ಕೋಲಾರ ಕಾಳಗದ (Kolar Congress Ticket Fight) ಕೋಲಾಹಲ ಎದ್ದಿದೆ. ಟಿಕೆಟ್ ಘೋಷಣೆ ಆಗ್ಬೇಕಿರೋ ಕೋಲಾರ ಲೋಕಸಭಾ(Kolar Loksabha Ticket) ಕ್ಷೇತ್ರದಲ್ಲಿ ಸಚಿವ ಮುನಿಯಪ್ಪ ಮತ್ತು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣಗಳ ನಡುವಿನ ಗುದ್ದಾಟ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು(ಮಾರ್ಚ್ 28) ಮುಖ್ಯಮಂತ್ರಿ ಅವರ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಸಭೆ ಬಳಿಕ ಸಿಎಂ ನಿವಾಸ ಕಾವೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಂ.ಸಿ.ಸುಧಾಕರ್, ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸರಿಪಡಿಸುವುದಾಗಿ ತಿಳಿಸಿದ್ದಾರೆ. ಸಿಎಂ, ಡಿಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ. ನಮ್ಮಿಂದ ಪಕ್ಷಕ್ಕೆ ಹಾನಿಯಾಗಲು ಅವಕಾಶ ನೀಡುವುದಿಲ್ಲ. ಪಕ್ಷದ ಆದೇಶಕ್ಕೆ ಗೌರವ ಕೊಟ್ಟು ಅವರು ಹೇಳಿದಂತೆ ನಡೆದುಕೊಳ್ಳುತ್ತೇವೆ. ನಿನ್ನೆ(ಮಾರ್ಚ್ 28) ಆದಂತ ಸಮಸ್ಯೆ ಬಗ್ಗೆ ಸಿಎಂ, ಡಿಸಿಎಂ ಬಳಿ ಹೇಳಿಕೊಂಡಿದ್ದೇವೆ. ರಾಜೀನಾಮೆ ನೀಡಲು ಮುಂದಾಗಿದ್ದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಹೇಳಿದರು.
ಕೊನೆಯ ಹಂತದಲ್ಲಿ ಈ ಗೊಂದಲಗಳು ಆಗಬಾರದಿತ್ತು. ನಾಯಕರ ಸೂಚನೆಗೆ ನಾವು ಬದ್ದ. ಇದು ಎಡಗೈ, ಬಲಗೈ ಸಂಘರ್ಷ ಅಲ್ಲ. ಕೆಲವರ ಅಭಿಪ್ರಾಯ ಸಂಖ್ಯೆ ಜಾಸ್ತಿ ಇದೆ ಕೊಡಿ ಅಂತ ಇತ್ತು. ಅದೊಂದು ಕೆಟ್ಟ ಘಳಿಗೆ. ಅಂತಿಮವಾಗಿ ಪಕ್ಷದ ಅಭ್ಯರ್ಥಿ ಗೆಲ್ಲಬೇಕು. ಈ ಘಟನೆಗೆ ವಿಶಾದ ವ್ಯಕ್ತಪಡಿಸುತ್ತೇವೆ. ಇದರಿಂದ ಪಕ್ಷಕ್ಕೆ ಮುಜುಗರ ಆಗಿದೆ. ನಾವು ಕ್ಷಮೆ ಕೇಳಿದ್ದೇವೆ, ಯಾವುದೇ ಅಭ್ಯರ್ಥಿ ಬಗ್ಗೆ ಚರ್ಚೆ ಆಗಿಲ್ಲ. ಆದ್ರೆ ಯಾರಿಗೆ ಟಿಕೆಟ್ ಕೊಟ್ರೂ ಒಂದಾಗಿ ಕೆಲಸ ಮಾಡ್ತೀವಿ. ನಮ್ಮ ಜಗಳ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಗೆ ಲಾಭ ಆಗಲ್ಲ. ನಮ್ಮ ಪಕ್ಷದ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕೋಲಾರದಲ್ಲಿ ಕಾಂಗ್ರೆಸ್ ಶಾಸಕರ ರಾಜೀನಾಮೆ ನಿರ್ಧಾರಕ್ಕೆ ಖರ್ಗೆ ‘ಮಲತಾಯಿ ಧೋರಣೆ’ ಕಾರಣವಾಯ್ತಾ?
ಇನ್ನು ಇದೇ ವೇಳೆ ಮಾತನಾಡಿರುವ ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್, ಸಿಎಂ ಹಾಗೂ ಡಿಸಿಎಂ ಸಭೆ ಕರೆದ ಸಭೆಯಲ್ಲಿ ಕೋಲಾರ ಜಿಲ್ಲೆಯ ಪಕ್ಷದ ಎಲ್ಲಾ ಶಾಸಕರೂ ಭಾಗವಹಿಸಿದ್ದು, ಸಂಧಾನ ಸಭೆ ಯಶಸ್ವಿಯಾಗಿದೆ. ಹೈಕಮಾಂಡ್ ಆದೇಶಕ್ಕೆ ಬದ್ದ ಎಂದು ಶಾಸಕರು ಹೇಳಿದ್ದಾರೆ. ನಮ್ಮ ಶಾಸಕರಿಗೆ ಕನ್ಪೂಜನ್ ಇತ್ತು. ಈಗ ಸಿಎಂ ಡಿಸಿಎಂ ಆದೇಶಕ್ಕೆ ಬದ್ದ ಎಂದು ಹೇಳಿದ್ದಾರೆ. ಟಿಕೆಟ್ ವಿಚಾರದಲ್ಲಿ ಯಾವುದೇ ವ್ಯಕ್ತಿಯ ಹೆಸರು ಚರ್ಚೆ ಆಗಿಲ್ಲ, ಶಾಸಕರ ವಯಕ್ತಿಕ ಅಭಿಪ್ರಾಯವನ್ನು ಸಿಎಂ, ಡಿಸಿಎಂ ಹೇಳಿದ್ದಾರೆ. ಹೈಕಮಾಂಡ್ ಹೇಳಿದ್ದೆ ಪೈನಲ್ ಎಂದು ಶಾಸಕರು ಹೇಳಿದ್ದಾರೆ. ಅಲ್ಲದೇ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಶಾಸಕರುಗಳಿಗೆ ಸಿಎಂ, ಡಿಸಿಎಂ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಸಚಿವ ಕೆಎಚ್ ಮುನಿಯಪ್ಪ ಅಳಿಯನಿಗೆ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಖಚಿತವಾಗುತ್ತಿದ್ದಂತೆಯೇ ರಮೇಶ್ ಕುಮಾರ್ ಬಣದ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕೆಲ ಶಾಸಕ, ವಿಧಾನಪರಿಷತ್ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಹಂತಕ್ಕೆ ಹೋಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರು ಕೋಲಾರ ನಾಯಕರ ಜೊತೆ ಸಂಧಾನ ಸಭೆ ಮಾಡಿದ್ದು, ಸಭೆ ಫಲಪ್ರದವಾಗಿದೆ. ಸಿಎಂ, ಡಿಸಿಎಂ ಮತ್ತು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ರಮೇಶ್ ಕುಮಾರ್ ಬಣದ ನಾಯಕರು ಹೇಳುತ್ತಿದ್ದಾರೆ. ಆದ್ರೆ, ಕೋಲಾರ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ ಉಳಿದಿದೆ.
ಮುನಿಯಪ್ಪ ಅಳಿಯನಿಗೆ ಟಿಕೆಟ್ ಎನ್ನುವ ಸುದ್ದಿ ಹರಿದಾಡಿದ ಬೆನ್ನಲ್ಲೇ ಇಷ್ಟೆಲ್ಲಾ ಕೋಲಾಹಲ ನಡೆದಿದೆ. ಹೀಗಾಗಿ ಹೈಕಮಾಂಡ್, ಬೇರೆಯವರಿಗೆ ಟಿಕೆಟ್ ನೀಡುತ್ತೋ ಅಥವಾ ಅದೇ ಮುನಿಯಪ್ಪನವರ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಮಣೆ ಹಾಕುತ್ತೋ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ. ಒಂದು ವೇಳೆ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಿದರೆ, ರಮೇಶ್ ಕುಮಾರ್ ಬಣದ ನಾಯಕರು ಸುಮ್ಮನೆ ಇರುತ್ತಾರಾ ಅಥವಾ ಚುನಾವಣೆಯಲ್ಲಿ ಸೈಲೆಂಟ್ ಆಗುತ್ತಾರಾ ಎನ್ನುವುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:24 pm, Thu, 28 March 24