ಜಗದೀಶ್ ಶೆಟ್ಟರ್ ಹೋಗಿದ್ದೇ ಒಳ್ಳೆಯದು ಎನ್ನುತ್ತಿದ್ದಾರೆ ಕಾರ್ಯಕರ್ತರು: ಡಿಕೆ ಶಿವಕುಮಾರ್ ವಾಗ್ದಾಳಿ

ಮಾಜಿ ಸಿಎಂ ಎಂಬ ಘನತೆಗೆ ಗೌರವ ಕೊಟ್ಟು ಜಗದೀಶ್ ಶೆಟ್ಟರ್​ಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡಿದೆವು. ಸೋತರೂ ಕೂಡ ಅವರನ್ನು ನಂಬಿ ನಾವು ಅವರನ್ನು ಎಂಎಲ್ಸಿ ಮಾಡಿದೆವು. ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗದೀಶ್ ಶೆಟ್ಟರ್ ಹೋಗಿದ್ದೇ ಒಳ್ಳೆಯದು ಎನ್ನುತ್ತಿದ್ದಾರೆ ಕಾರ್ಯಕರ್ತರು: ಡಿಕೆ ಶಿವಕುಮಾರ್ ವಾಗ್ದಾಳಿ
ಡಿಕೆ ಶಿವಕುಮಾರ್
Follow us
TV9 Web
| Updated By: Ganapathi Sharma

Updated on:Jan 26, 2024 | 11:36 AM

ಬೆಂಗಳೂರು, ಜನವರಿ 26: ಕಾಂಗ್ರೆಸ್ (Congress) ಪಕ್ಷ ಸಮುದ್ರ ಇದ್ದಂತೆ. ನೂರಾರು ಜನ ಬರ್ತಾರೆ, ನೂರಾರು ಜನ ಹೋಗುತ್ತಾರೆ. ಜಗದೀಶ್ ಶೆಟ್ಟರ್ (Jagadish Shettar) ಅವರು ಇದನ್ನು ಗಮನದಲ್ಲಿಟ್ಟುಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಜಗದೀಶ್ ಶೆಟ್ಟರ್ ಮರಳಿ ಬಿಜೆಪಿ ಸೇರ್ಪಡೆಯಾದ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ತೀವ್ರ ವಾಗ್ದಾಳಿ ನಡೆಸಿದರು. ನೀತಿ, ಸಿದ್ಧಾಂತದಡಿ ರಾಜಕೀಯ ಮಾಡುವವರು ನಾವು. ಅಲ್ಪಸಂಖ್ಯಾತ ಸಮುದಾಯ ಶೆಟ್ಟರ್​ರನ್ನ ಒಪ್ಪಿರಲಿಲ್ಲ. ಇದರಿಂದ ನಮ್ಮ ಪಕ್ಷ ಸಂಘಟನೆಗೂ ಕಷ್ಟ ಆಗುತ್ತಿತ್ತು. ಶೆಟ್ಟರ್​​​ ಹೋಗಿದ್ದೇ ಒಳ್ಳೆಯದು ಎಂದು ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

ಶೆಟ್ಟರ್ ಅವರು ನಮ್ಮ ಪಕ್ಷ ಬಂದು ಸೇರಿದ್ದರು. ಚುನಾವಣೆ ಮುಂಚಿತವಾಗಿ ನಮಗೆ ಕಾಂಗ್ರೆಸ್​​ ಅಲ್ಲಿ ಗೆಲ್ಲುತ್ತದೆ ಎಂಬ ವಿಶ್ವಾಸ ಇತ್ತು. ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡಿ ಕಾಂಗ್ರೆಸ್ ಸೇರಿದ್ದರು. ನಮ್ಮ ಪಕ್ಷದ ಕಾರ್ಯಕರ್ತರ ಟಿಕೆಟ್ ಅವರಿಗಾಗಿ ನಾವು ತ್ಯಾಗ ಮಾಡಿದೆವು. ಮಾಜಿ ಸಿಎಂ ಎಂಬ ಘನತೆಗೆ ಗೌರವ ಕೊಟ್ಟು ಟಿಕೆಟ್ ನೀಡಿದೆವು.  ಸೋತರೂ ಕೂಡ ಅವರನ್ನು ನಂಬಿ ನಾವು ಅವರನ್ನು ಎಂಎಲ್ಸಿ ಮಾಡಿದೆವು. ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ವಿರುದ್ದ ಅವರು ಆರೋಪ ಮಾಡಿದ್ದಕ್ಕೆ ಅವರೇ ಉತ್ತರ ಕೊಡಬೇಕು. ಬಿಜೆಪಿ ದೂರ ಇಡಬೇಕು ಅಂತ ನಾವು ಜೆಡಿಎಸ್ ಜೊತೆಗೆ ಸರ್ಕಾರ ಮಾಡಿದ್ದೆವು. ಆಪರೇಷನ್ ಕಮಲ ಮಾಡಿ ಯಾರು ಸಮ್ಮಿಶ್ರ ಸರ್ಕಾರ ತೆಗೆದರೋ ಅವರ ಜೊತೆಗೇ ಈಗ ಜೆಡಿಎಸ್ ತಬ್ಬಿಕೊಳ್ತಿಲ್ವಾ? ಬಿಜೆಪಿಯ ವಕ್ತಾರರಾಗಿಲ್ವಾ ಹೆಚ್​ಡಿ ಕುಮಾರಸ್ವಾಮಿ? ಹಾಗೆ ರಾಜಕಾರಣದಲ್ಲಿ ಎಲ್ಲವೂ ಆಗುತ್ತದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಲಕ್ಷ್ಮಣ ಸವದಿ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ

‘ನಾನು ಕಾಂಗ್ರೆಸ್​​ಗೆ ವೈಯಕ್ತಿಕವಾಗಿ ಬಂದಿದ್ದೇನೆ. ಒಟ್ಟಿಗೆಯಾಗಿ ಕೆಲಸ ಮಾಡೋಣ’ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ. ಸವದಿ ದೊಡ್ಡ ಅಂತರದಲ್ಲಿ ಚುನಾವಣೆ ಗೆದ್ದಿದ್ದಾರೆ. ಅವರು ನಮ್ಮ ನಾಯಕರಾಗಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು. ಸವದಿಗೆ ಸಂಬಂಧಿಸಿದ ಆಪರೇಷನ್ ಕಮಲದ ಪ್ರಯತ್ನ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲರನ್ನೂ ಸೆಳೆಯಲು ಪ್ರಯತ್ನ ಮಾಡುತ್ತಾರೆ. ನಮಗೆ ಗೊತ್ತಿದೆ, ಆ ಬಗ್ಗೆ ನಾನು ಮಾತನಾಡಲ್ಲ. ನಾವು ಮುಂದಾದರೆ ಎಷ್ಟು ಮನೆಗಳು ಖಾಲಿಯಾಗಬಹುದು ಎಂದು ಅವರು ಯೋಚನೆ ಮಾಡಲಿ. ನಾವು ಕಾಂಗ್ರೆಸ್​​​ನವರು ಸುಮ್ಮನೆ ಇದ್ದೀವಿ. ನಮ್ಮಿಂದ ಹೋದವರಿಗೆ ಯಾವ ಸಿದ್ಧಾಂತ ಕೊಟ್ಟಿದ್ದಾರೆ ಬಿಜೆಪಿಯವರು? ಅವರೆಲ್ಲ ಬಿಜೆಪಿಯ ಸಿದ್ಧಾಂತ ಒಪ್ಪಿದ್ದಾರಾ ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದರು.

ಇದನ್ನೂ ಓದಿ: ಶೆಟ್ಟರ್​​ ಬಿಜೆಪಿಗೆ ಮರಳಿದ ಬೆನ್ನಲ್ಲೇ ಸವದಿ ಜತೆ ಮಾತುಕತೆ ನಡೆಸಿದ ಡಿಕೆಶಿ

ಕೆಎನ್​ ರಾಜಣ್ಣಗೆ ಎಚ್ಚರಿಕೆ

ಸಹಕಾರ ಸಚಿವ ಕೆ.ಎನ್​.ರಾಜಣ್ಣಗೆ ನೋಟಿಸ್ ನೀಡುವ ವಿಚಾರವಾಗಿ ಡಿಕೆ ಶಿವಕುಮಾರ್ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು. ಸಚಿವ ರಾಜಣ್ಣ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷರೇ ಗಮನಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಬಗ್ಗೆ ಗಮನಹರಿಸುತ್ತಾರೆ. ಸಚಿವ ಕೆ.ಎನ್​.ರಾಜಣ್ಣ ಎಐಸಿಸಿ ಅಡಿಯಲ್ಲಿ ಬರುವುದರಿಂದ ಅದು ಗೌರವಪೂರ್ವಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತದೆ ಎಂದು ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಶೆಟ್ಟರ್ ಪಕ್ಷ ತೊರೆದಿದ್ದಕ್ಕೆ ಡಿಕೆ ಶಿವಕುಮಾರ್​ಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

ಜಗದೀಶ್ ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಾಗಿರುವ ಬಗ್ಗೆ ಡಿಕೆ ಶಿವಕುಮಾರ್ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ನೀಡಿದ್ದರು. ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಹಿನ್ನೆಲೆ, ಸಿದ್ಧಾಂತ ಇತ್ಯಾದಿ ಗಮನಿಸಬೇಕು ಎಂದು ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಪತ್ರಿಕಾಗೋಷ್ಠಿ ನಡೆಸಿದ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Fri, 26 January 24