ಮಂಗಳೂರು: ಕೊಮುಗಲಭೆ ಬಿಜೆಪಿ, ಬಜರಂಗದಳದವರೇ ಮಾಡುತ್ತಿದ್ದಾರೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಆರೋಪಕ್ಕೆ ಸಚಿವ ಕೆಎಸ್ ಈಶ್ವರಪ್ಪ (KS Eshwarappa) ಪ್ರತಿಕ್ರಿಯೆ ನೀಡಿದ್ದಾರೆ. ರಾಹುಲ್ ಗಾಂಧಿ ಮೆಚ್ಚಿಸಲು ಮಾಡುತ್ತಿರುವ ಆರೋಪಗಳಿವು. ಸೋನಿಯಾ ಗಾಂಧಿ ತಲುಪಲಿ ಎಂದು ಹಾಗೆ ಮಾಡುತ್ತಿದ್ದಾರೆ. ಮೊದಲಿಂದಲೂ ಮುಸ್ಲಿಮರನ್ನ ಮೆಚ್ಚಿಸುವ ಕೆಲಸ ಮಾಡ್ತಿದ್ದಾರೆ. ಸ್ವಾತಂತ್ರ್ಯ ಬಂದಾಗಿನಿಂದಲೂ ಇದನ್ನೇ ಮಾಡುತ್ತ ಬಂದಿದ್ದಾರೆ. ಹಿಜಾಬ್ ವಿವಾದ ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದರು. ವಿವಾದಗಳನ್ನ ಅವರೇ ಹುಟ್ಟುಹಾಕಿ ನಮ್ಮ ಮೇಲೆ ಆರೋಪ ಮಾಡುತ್ತಾರೆ ಅಂತ ಈಶ್ವರಪ್ಪ ಹೇಳಿದರು.
ಮತ್ತೆ ಮುಸ್ಲಿಂ ಗೂಂಡಾಗಳು ಎಂದು ಪುನರುಚ್ಚರಿಸಿದ ಈಶ್ವರಪ್ಪ, ಹರ್ಷ ಕೊಲೆ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡುವ ವೇಳೆ ವಾಗ್ದಾಳಿ ನಡೆಸಿದ್ದಾರೆ. ಕೊಲೆಗಡುಕರನ್ನ ಮುಸ್ಲಿಂ ಗೂಂಡಾಗಳು ಅನ್ನದೇ ಏನನ್ನಬೇಕು? ಆ ಕೊಲೆಗಡುಕರನ್ನ ಸಿದ್ದರಾಮಯ್ಯ, ಡಿಕೆಶಿ ಏನಂತ ಕರೀತಾರೆ| ರಾಜ್ಯದಲ್ಲಿ ಶಾಂತಿ ಕಾಪಾಡಬೇಕೆಂಬ ಉದ್ದೇಶ ಬಿಜೆಪಿಗೆ ಇದೆ ಎಂದರು. ಮುಸಲ್ಮಾನರು ಸಂತೃಪ್ತಿ ಪಡುವ ಹೇಳಿಕೆಗಳನ್ನು ಕೊಡುತ್ತಾರೆ. ಹಿಂದೂ-ಮುಸ್ಲಿಮರು 2 ಕಣ್ಣುಗಳಿದ್ದಂತೆ ಎಂದು ನೋಡಬೇಕು. ಹಾಗೆ ನೋಡಿದ್ದರೆ ಇಂದು ಇಂತಹ ಪರಿಸ್ಥಿತಿ ಬರುತ್ತಿರಲಿಲ್ಲ. ಶಿವಮೊಗ್ಗದಲ್ಲಿ ಹರ್ಷನನ್ನ ಹತ್ಯೆಗೈದ್ದಿವರನ್ನ 10 ದಿನದಲ್ಲಿ ಬಂಧನವಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆರೋಪಿಗಳ ಪತ್ತೆಗೆ ಎಷ್ಟು ದಿನಬೇಕಾಯ್ತು. ಹಿಂದುಗಳ ಹತ್ಯೆ ಆದಾಗ ಆರೋಪಿಗಳ ಸೆರೆಗೆ ಎಷ್ಟು ದಿನ ಬೇಕಾಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಪರಿಹಾರದಲ್ಲಿ ತಾರತಮ್ಯ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಅವರು ಸಿಎಂ ಆಗಿದ್ದಾಗ ಯಾಱರಿಗೆ ಎಷ್ಟು ಪರಿಹಾರ ಕೊಟ್ಟಿದ್ದಾರೆ. ನೀವು ಮುಖ್ಯಮಂತ್ರಿ ಆಗಿದ್ದಾಗ 25 ಲಕ್ಷ ಪರಿಹಾರ ಕೊಟ್ಟಿದ್ದೀರಾ? ಅವರಿಗೆ ಪರಿಹಾರದ ಬಗ್ಗೆ ಹೇಳುವ ಅಧಿಕಾರವಿಲ್ಲ ಎಂದು ವಾಗ್ದಾಳಿ ನಡೆಸಿದ ಈಶ್ವರಪ್ಪ, ಮೇಲ್ನೋಟಕ್ಕೆ ಚೆನ್ನಾಗಿದ್ದೇವೆಂದು ತೋರಿಸಿಕೊಳ್ಳಲು ಮಾಡಿದ್ದಾರೆ. ಸಿದ್ದರಾಮಯ್ಯ ಶ್ರೀಗಳ ಬಗ್ಗೆ ಮಾತಾಡಿದಾಗ ಸಮರ್ಥಿಸಿಕೊಂಡಿಲ್ಲ. ಸಿದ್ದರಾಮಯ್ಯರನ್ನ ಕಾಂಗ್ರೆಸ್ನ ಯಾರೂ ಸಮರ್ಥಿಸಿಕೊಳ್ಳಲಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹ ಸಮರ್ಥಿಸಿಕೊಳ್ಳಲಿಲ್ಲ. ಇದರಲ್ಲಿಯೇ ಗೊತ್ತಾಗಲ್ವಾ ಅವರಲ್ಲಿ ಎರಡು ಬಣ ಇದೆ ಎಂದರು.
ಮುಸಲ್ಮಾನರು ಹಲಾಲ್ ಕಟ್ ಮಾಂಸವನ್ನಾದರೂ ತಿನ್ನಲಿ. ಹಿಂದೂಗಳು ಜಟ್ಕಾ ಕಟ್ ಮಾಂಸವನ್ನಾದರೂ ತಿನ್ನಲಿ. ಇದರಿಂದ ಕಾಂಗ್ರೆಸ್ ಪಕ್ಷದವರಿಗೆ ಏನು ತೊಂದರೆ? ಎಂದು ಪ್ರಶ್ನಿಸಿದ ಸಚಿವರು, ಹಲಾಲ್ ಬಗ್ಗೆ ಕಾಂಗ್ರೆಸ್ ಯಾಕೆ ಬೊಂಬ್ಡಾ ಹೊಡೆಯುತ್ತಿದೆ. ಹಿಂದೂ-ಮುಸ್ಲಿಮರು ಚೆನ್ನಾಗಿರಬಾರದೆಂದು ಹೀಗೆ ಮಾಡುತ್ತಿದ್ದಾರೆ. ಹಿಂದಿನಿಂದಲೂ ಇದೇ ಕಿತಾಪತಿ ಮಾಡಿಕೊಂಡು ಬಂದಿದ್ದಾರೆ ಎಂದು ಹೇಳಿದರು.
ಬಿಜೆಪಿ ಬಗ್ಗೆ ಟೀಕಿಸಲು ಕುಮಾರಸ್ವಾಮಿಗೆ ಶಕ್ತಿ, ಅಧಿಕಾರ ಎರಡೂ ಇಲ್ಲ. ಬಿಜೆಪಿ ಬಗ್ಗೆ ಟೀಕೆ ಮಾಡಿದವರೆಲ್ಲರೂ ನೆಗೆದು ಬಿದ್ದು ಹೋದರು. ಹೆಚ್ಡಿ ಕುಮಾರಸ್ವಾಮಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡುತ್ತಿಲ್ಲ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಸ್ಪರ್ಧೆಗಿಳಿದಿದ್ದಾರೆ. ಮುಸ್ಲಿಮರ ಓಲೈಕೆಗಾಗಿ ಈ ರೀತಿಯ ಸ್ಪರ್ಧೆಗೆ ಇಳಿದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ನೆನೆಸಿದ ಕಡಲೆಕಾಯಿಯನ್ನು ತಿನ್ನುವುದರಿಂದ ಆಗುವ ಅದ್ಭುತ ಪ್ರಯೋಜನಗಳು..!
Published On - 4:30 pm, Sun, 3 April 22