ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡಬೇಡಿ, ಶಾಂತಿ ಕಾಪಾಡಿ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಡಿಕೆಶಿ

ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡಬೇಡಿ, ಶಾಂತಿ ಕಾಪಾಡಿ: ಬಿಜೆಪಿ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ, ಡಿಕೆಶಿ
ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್

ಬೆಲೆ ಏರಿಕೆ ಸೇರಿದಂತೆ ಯುವಜನರನ್ನು ಕಾಡುತ್ತಿರುವ ಅಂಶಗಳ ಬಗ್ಗೆ ಮಾತನಾಡದೆ ಅನಗತ್ಯವಾಗಿ ಕೆಲ ವಿಚಾರಗಳನ್ನು ವಿವಾದವಾಗಿ ಬೆಳೆಸಲಾಗುತ್ತಿದೆ ಎಂದು ದೂರಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Apr 03, 2022 | 1:32 PM


ಬೆಂಗಳೂರು: ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ಚಾಲ್ತಿಗೆ ಬಂದಿರುವ ಹಲಾಲ್ ಕಟ್ ಮತ್ತು ಜಟ್ಕಾ ಕಟ್ ವಿವಾದದ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭಾನುವಾರ ಪ್ರತಿಕ್ರಿಯಿಸಿದರು. ಬೆಲೆ ಏರಿಕೆ ಸೇರಿದಂತೆ ಯುವಜನರನ್ನು ಕಾಡುತ್ತಿರುವ ಅಂಶಗಳ ಬಗ್ಗೆ ಮಾತನಾಡದೆ ಅನಗತ್ಯವಾಗಿ ಕೆಲ ವಿಚಾರಗಳನ್ನು ವಿವಾದವಾಗಿ ಬೆಳೆಸಲಾಗುತ್ತಿದೆ ಎಂದು ದೂರಿದರು. ಹಲಾಲ್ ಕಟ್ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸಾವಿರಾರು ವರ್ಷಗಳಿಂದ ಹಲಾಲ್ ನಡೆದುಕೊಂಡು ಬಂದಿದೆ. ಅವರ ಪದ್ಧತಿ ಅವರದ್ದು, ನಮ್ಮ ಪದ್ಧತಿ ನಮ್ಮದು. ರಕ್ತದಿಂದ ಕೂಡಿರುವ ಮಾಂಸ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ಅವರ ನಂಬಿಕೆ. ಅವರ ನಂಬಿಕೆಯಂತೆ ಅವರು ಬದುಕಲು ಬಿಡಿ. ನಾವೂ ಕೂಡ ಹಲಾಲ್ ಕಟ್ ಮಾಂಸ ಖರೀದಿಸಿ ತಿಂದಿಲ್ವಾ? ನಾವು ಜಾತ್ರೆಗಳಲ್ಲಿ ಮರಿ ಕಡಿಯುವುದಿಲ್ಲವಾ? ಅನಗತ್ಯ ವಿಚಾರಕ್ಕೆ ಶಾಂತಿ ಹಾಳು ಮಾಡುವ ಕೆಲಸ ಮಾಡಬೇಡಿ. ಜನಗರಿಗೆ ಅಗತ್ಯವಿರುವ ವಿಚಾರಗಳ ಬಗ್ಗೆ ಚರ್ಚೆ ಮಾಡಿ. ಮನುಷ್ಯನ ಬದುಕಿಗೆ ಸಂಬಂಧವಿಲ್ಲದ ವಿಷಯಗಳನ್ನು ಪ್ರಸ್ತಾಪಿಸಿ, ಸಮಾಜದಲ್ಲಿ ಅಶಾಂತಿ ಸೃಷ್ಟಿ ಮಾಡುವುದು ಎಂದು ಹೇಳಿದರು.

ಕಾನೂನು ಸುವ್ಯವಸ್ಥೆ ಮತ್ತು ಅಭಿವೃದ್ಧಿಯ ನಡುವೆ ಪರಸ್ಪರ ಸಂಬಂಧವಿದೆ. ಅದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಜನಪರ ಹೋರಾಟ ರೂಪಿಸುತ್ತಿದೆ. ಕಾನೂನು ಸುವ್ಯವಸ್ಥೆ ಸುಗಮವಾಗಿದ್ದರೆ ಮಾತ್ರ ರಾಜ್ಯದಲ್ಲಿ ಉದ್ಯಮಿಗಳು ಹೂಡಿಕೆ ಮಾಡುತ್ತಾರೆ. ಹೂಡಿಕೆಯಿದ್ದರೆ ಮಾತ್ರ ಉದ್ಯೋಗ ಸಿಗಲು ಸಾಧ್ಯ. ಆಗ ಮಾತ್ರ ರಾಜ್ಯ ಮತ್ತು ದೇಶದ ಆರ್ಥಿಕಾಭಿವೃದ್ಧಿ ಸಾಧ್ಯವಾಗುತ್ತದೆ. ಅದು ಬಿಟ್ಟು ಒಂದರ ನಂತರ ಮತ್ತೊಂದು ವಿವಾದಗಳನ್ನು ಮುಂದುವರಿಸಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದರು.

ಜನರು ಈಗ ಬೆಲೆಏರಿಕೆಯಿಂದ ಕಂಗಾಲಾಗಿದ್ದಾರೆ. ಅದನ್ನು ಮುಚ್ಚಿಹಾಕಲು ಸರ್ಕಾರಗಳು ಕೋಮು ಗಲಭೆಗೆ ಪ್ರಚೋದಿಸುತ್ತಿವೆ. ಹಿಜಾಬ್ ಪದ್ಧತಿ ಮತ್ತು ಹಿಂದೂ ಧಾರ್ಮಿಕ ಕೇಂದ್ರಗಳ ಸಮೀಪ ಹಿಂದೂಯೇತರರ ವ್ಯಾಪಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ಹಲವೆಡೆ ಉಚಿತವಾಗಿ ಪ್ರದರ್ಶಿಸಲಾಗುತ್ತಿದೆ. ಸಮಾಜದ ಸಾಮರಸ್ಯವನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ಮನುಷ್ಯತ್ವ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಮಾತಿಗೆ ಮೊದಲು 4 ರಾಜ್ಯ ಗೆದ್ದಿದ್ದೇವೆ ಎಂದು ಹೇಳುತ್ತಾರೆ. ಭಾವನಾತ್ಮಕ ವಿಚಾರ ಮುಂದಿಟ್ಟು ಚುನಾವಣೆ ಗೆದ್ದಿದ್ದಾರೆ. ಭಾವನಾತ್ಮಕ ವಿಚಾರವಾಗಿ ಯುವಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಗಳು (ಎಪಿಎಂಸಿ) ಮುಳುಗುತ್ತಿವೆ. ಕೇಂದ್ರ ಸರ್ಕಾರ ಕೃಷಿ ತಿದ್ದುಪಡಿ ಕಾಯ್ದೆ ರದ್ದುಪಡಿಸಿದೆ. ಆದರೆ ರಾಜ್ಯದಲ್ಲಿ ಯಾಕೆ ಹಿಂಪಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಹಿಂದೆ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಯುಪಿಎ ಸರ್ಕಾರವು ಸಾಮಾನ್ಯರ ಜನರ ಕಷ್ಟಕ್ಕೆ ಸ್ಪಂದಿಸುತ್ತಿತ್ತು. ಆದರೆ ಈಗಿನ ಸರ್ಕಾರ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿದೆಯೇ? ನಾನು ಅಂಕಿಅಂಶ ಮುಂದಿಟ್ಟುಕೊಂಡು ಮಾತನಾಡುತ್ತಿದ್ದೇನೆ. ಪೆಟ್ರೋಲ್-ಡೀಸೆಲ್ ಮೇಲೆ ವಿಪರೀತ ತೆರಿಗೆ ಇದೆ. ಕೇಂದ್ರ, ರಾಜ್ಯ ಸರ್ಕಾರಗಳು ತೆರಿಗೆ ಹೆಚ್ಚಿಸಿ ಲೂಟಿ ಮಾಡುತ್ತಿವೆ. ಆದರೆ ಬೆಲೆ ಏರಿಕೆಗೆ ಕಚ್ಚಾ ತೈಲಗಳ ಬೆಲೆ ಹೆಚ್ಚಳ ಕಾರಣ ಎಂದು ದೂರುತ್ತಿದ್ದಾರೆ. ಬೆಲೆ ಏರಿಕೆಯನ್ನು ಕಾಂಗ್ರೆಸ್ ಪಕ್ಷ ಗಂಭೀರವಾಗಿ ಪರಿಗಣಿಸಿದೆ. ದೇಶದ ಜನರ ಪರವಾಗಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಯುಗಾದಿಗೆ ಕೇವಲ ಕಹಿ ನೀಡಿದೆ. ಸಿಹಿ ಕೊಡಲೇ ಇಲ್ಲ. 50 ಕೆಜಿ ಡಿಎಪಿ ರಸಗೊಬ್ಬರದ ಮೂಟೆ ₹ 1,350 ಆಗಿದೆ. ಡಿಎಪಿ ರಸಗೊಬ್ಬರ ಒಂದು ಕೆಜಿ ಮೇಲೆ ₹ 3 ಹೆಚ್ಚಳವಾಗಿದೆ. ದೇಶದಲ್ಲಿ 1 ಕೋಟಿ 20 ಲಕ್ಷ ಟನ್ ಡಿಎಪಿ ಬಳಸುತ್ತಾರೆ. ₹ 3,600 ಕೋಟಿ ರೈತರಿಂದ ಸುಲಿಗೆ ಮಾಡುತ್ತಿದ್ದಾರೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿದ್ದ ಮೋದಿ, ರೈತರ ರಕ್ತ ಹೀರುತ್ತಿದ್ದಾರೆ. ತೈಲ ಕಂಪನಿಗಳು ನಮ್ಮ ಅಧೀನದಲ್ಲಿಲ್ಲ ಎನ್ನುತ್ತಾರೆ. ಆದರೆ ಚುನಾವಣೆ ಸಮಯದಲ್ಲಿ ತೈಲ ಬೆಲೆ ಏರಿಕೆಯಾಗದೆ ಚುನಾವಣೆ ಮುಗಿಯುತ್ತಿದ್ದಂತೆ ಬೆಲೆ ಹೆಚ್ಚಾಗುತ್ತದೆ ಎಂದು ದೂರಿದರು.

ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಅಬಕಾರಿ ಸುಂಕದಿಂದ ₹26 ಲಕ್ಷ ಕೋಟಿ ಆದಾಯ ಬಂದಿದೆ. ಡೀಸೆಲ್ ಮೇಲಿನ ಸುಂಕ ಶೇ 531, ಪೆಟ್ರೋಲ್ ಮೇಲೆ ಸುಂಕ ಶೇ 203ರಷ್ಟು ಹೆಚ್ಚಾಗಿದೆ. ಆದರೆ ಕಾರ್ಪೊರೇಟ್ ಟ್ಯಾಕ್ಸ್ ಶೇ 35ರಿಂದ 23ಕ್ಕೆ ಇಳಿಕೆಯಾಗಿದೆ/ ಹಿಂದಿನ ಸರ್ಕಾರ ಸಾಲ ಮಾಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ. ದೇಶದ ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಸಬ್ಸಿಡಿಯನ್ನು ನಿಲ್ಲಿಸಿಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್ ಬೆಲೆ ₹ 50 ಹೆಚ್ಚಾಗಿದೆ. ಎಲ್ಲರಿಗೂ ಒಂದು ಸಾವಿರ ರೂಪಾಯಿ ಕೊಟ್ಟು ಸಿಲಿಂಡರ್ ಖರೀದಿಸಲು ಆಗುತ್ತದೆಯೇ? ಜನೌಷಧ ಅಂಗಡಿಗಳಲ್ಲಿ ದೊರೆಯುವ ಔಷಧಗಳ ಬೆಲೆಯನ್ನೂ ಶೇ 10ರಷ್ಟು ಹೆಚ್ಚಿಸಿದ್ದಾರೆ. ಅಡುಗೆ ಎಣ್ಣೆ ಸೇರಿದಂತೆ ಎಲ್ಲಾ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಹಣದುಬ್ಬರ ಹೆಚ್ಚಾಗುತ್ತದೆ. ಸಾಮಾನ್ಯ ಜನರ ಜೀವನ ದುಸ್ತರವಾಗುತ್ತದೆ ಎಂದು ಕಿಡಿ ಕಾರಿದರು.

ಬಡವರ ಮೇಲೆ ಗದಾಪ್ರಹಾರ: ಡಿಕೆಶಿ
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೇಂದ್ರ ಸರ್ಕಾರವು ಬೆಲೆ ಏರಿಕೆ ಎಂಬ ಗದಾಪ್ರಹಾರವನ್ನು ಬಡವರ ವಿರುದ್ಧ ನಡೆಸುತ್ತಿದೆ. ಅಚ್ಛೇ ದಿನ್ ಕೊಡುತ್ತೇವೆಂದು ಹೇಳಿ ನರಕ ತೋರಿಸುತ್ತಿದ್ದಾರೆ. ಕೃಷಿ ಯಂತ್ರೋಪಕರಣಗಳ ಬೆಲೆಯೂ ಹೆಚ್ಚಳವಾಗಿದೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ಮಾಡುತ್ತೇವೆ. ಬೆಲೆ ಇಳಿಕೆಯಾಗುವವರೆಗೆ ಹೋರಾಟ ಮುಂದುವರಿಸುತ್ತೇವೆ ಎಂದು ಘೋಷಿಸಿದರು. ಜನರ ಆದಾಯ ಪಾತಾಳಕ್ಕೆ ಕುಸಿದಿದ್ದರೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಾರೆ; ಕೊಪ್ಪಳದಲ್ಲಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

ಇದನ್ನೂ ಓದಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಕೃಷಿ ಸಚಿವ ಬಿ ಸಿ ಪಾಟೀಲರನ್ನು ಸದನದಲ್ಲಿ ಫಜೀತಿಗೊಳಪಡಿಸಿದ ಪ್ರಸಂಗ

Follow us on

Related Stories

Most Read Stories

Click on your DTH Provider to Add TV9 Kannada