ಅಸೆಂಬ್ಲಿಯೊಳಕ್ಕೆ ದವಸ ಧಾನ್ಯ ತಂದು ಪೇಚಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ! ಸದನದ ಕದನ ಕುತೂಹಲ ಇಲ್ಲಿದೆ
ಈ ಅವಾಂತರಕ್ಕೆಲ್ಲಾ ಕಾರಣವಾಗಿದ್ದು ಸಿದ್ದರಾಮಯ್ಯ ಅವರು ಅಸೆಂಬ್ಲಿಯೊಳಕ್ಕೆ ದವಸ ಧಾನ್ಯ ತಂದಿದ್ದು. ಫ್ರೀಡಂಪಾರ್ಕ್ನಲ್ಲಿ PSI ಅಭ್ಯರ್ಥಿಗಳ ಪ್ರತಿಭಟನೆ ಮಾಡ್ತಿದ್ದಾರೆ. ಬೆಳಗ್ಗೆ ಫ್ರೀಡಂಪಾರ್ಕ್ ಬಳಿ ಹೋಗಿ ಸಮಸ್ಯೆ ಆಲಿಸಿದ್ದೆ. ಪ್ರತಿಭಟನಾನಿರತ ಅಭ್ಯರ್ಥಿಗಳು ನಾವು ಲಂಚ ಕೊಡಲು ಆಗಲ್ಲ. ತಮ್ಮ ಜಮೀನಿನಲ್ಲಿ ಬೆಳೆದ ಧಾನ್ಯವನ್ನು ಕೊಡಿ ಎಂದು ಹೇಳಿದ್ದರಂತೆ.
ಬೆಂಗಳೂರು: ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನ ಮುಂದುವರಿದಿದೆ. ವಿಧಾನಸಭೆಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ ಕುರಿತಂತೆ ನಿಯಮ 69 ರಡಿ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ. ಅದರಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಚರ್ಚೆ ಆರಂಭಿಸಿದ್ದಾರೆ.
ಆದರೆ ಸದನದಲ್ಲಿ ಪಿಎಸ್ ಐ ನೇಮಕಾತಿ ಅಕ್ರಮ ಚರ್ಚೆಯ ಆರಂಭದಲ್ಲೇ ಸದನ ಗದ್ದಲಕ್ಕೆ ತಿರುಗಿದೆ. ಸದನದಲ್ಲಿ ತೀವ್ರ ಕೋಲಾಹಲವೇ ಏರ್ಪಟ್ಟಿದೆ. ಸದನ ತಹಬದಿಗೆ ತರಲು ಸ್ಪೀಕರ್ ಹರಸಾಹಸಪಟ್ಟಿದ್ದಾರೆ. ಈ ಮಧ್ಯೆ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ ಚರ್ಚೆಗೆ ನಾವು ಸಿದ್ಧ ಇದ್ದೇವೆ, ಸಮರ್ಥವಾದ ಉತ್ತರ ನಮ್ಮ ಬಳಿ ಇದೆ. ಸಿದ್ದರಾಮಯ್ಯ ಭಾಷಣಕ್ಕೆ ಅಡ್ಡಿಪಡಿಸಬೇಕೆಂಬ ಉದ್ದೇಶ ನಮಗಿಲ್ಲ ಎಂದು ಹೇಳಿದ್ದಾರೆ. ಆ ವೇಳೆ ಸಿದ್ದರಾಮಯ್ಯ ಅವರು ನನಗೆ ಮಾತಾಡಲು ಅವಕಾಶ ಕೊಡ್ತೀರಾ ಎಂದು ಸ್ಪಷ್ಟವಾಗಿ ಸ್ಪೀಕರ್ ಗೆ ಕೇಳಿದ್ದಾರೆ.
ಈ ಅವಾಂತರಕ್ಕೆಲ್ಲಾ ಕಾರಣವಾಗಿದ್ದು ಸಿದ್ದರಾಮಯ್ಯ ಅವರು ಅಸೆಂಬ್ಲಿಯೊಳಕ್ಕೆ ದವಸ ಧಾನ್ಯ ತಂದಿದ್ದು. ಫ್ರೀಡಂಪಾರ್ಕ್ನಲ್ಲಿ PSI ಅಭ್ಯರ್ಥಿಗಳ ಪ್ರತಿಭಟನೆ ಮಾಡ್ತಿದ್ದಾರೆ. ಬೆಳಗ್ಗೆ ಫ್ರೀಡಂಪಾರ್ಕ್ ಬಳಿ ಹೋಗಿ ಸಮಸ್ಯೆ ಆಲಿಸಿದ್ದೆ. ಪ್ರತಿಭಟನಾನಿರತ ಅಭ್ಯರ್ಥಿಗಳು ನಾವು ಲಂಚ ಕೊಡಲು ಆಗಲ್ಲ. ತಮ್ಮ ಜಮೀನಿನಲ್ಲಿ ಬೆಳೆದ ಧಾನ್ಯವನ್ನು ಕೊಡಿ ಎಂದು ಹೇಳಿದ್ದರು. ಲಂಚದ ಭಾಗವಾಗಿ ಈ ಧಾನ್ಯಗಳನ್ನೇ ಕೊಡಿ ಎಂದು ಹೇಳಿದ್ದರು. ಇಲ್ಲಿ ಆ ಧಾನ್ಯವನ್ನ ಇಟ್ಟಿದ್ದೆ, ಆದ್ರೆ ಕಾಣ್ತಿಲ್ಲ ಎಂದು ಫ್ರೀಡಂಪಾರ್ಕ್ ನಿಂದ ತಂದಿದ್ದ ಧಾನ್ಯದ ಬಗ್ಗೆ ಸಿದ್ದರಾಮಯ್ಯ ವಿವರಣೆ ಕೊಟ್ಟರು. ಅದಕ್ಕೆ ಸ್ಪೀಕರ್ ಕಾಗೇರಿ ಅವರು ಯಾವುದೇ ವಸ್ತುವನ್ನ ಅಸೆಂಬ್ಲಿಯೊಳಕ್ಕೆ ತರುವಂತಿಲ್ಲ ಎಂದು ಎಚ್ಚರಿಸಿದರು.
ಇನ್ನು, ಸದನಕ್ಕೆ ದವಸ ಧಾನ್ಯ ತಂದಿದ್ದಕ್ಕೆ ಸಚಿವ ಮಾಧುಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನಾನು ಬೆಳಗ್ಗೆ ಫ್ರೀಡಂ ಪಾರ್ಕ್ ಗೆ ಹೋದಾಗ ಅಲ್ಲಿ ಪ್ರತಿಭಟನೆ ಮಾಡುತ್ತಿದ್ದವರು ದವಸ ಧಾನ್ಯ ಕೊಟ್ಟಿದ್ದರು. ಅದನ್ನು ನಿಮಗೆ ಕೊಡೋಣ ಅಂತಾ ತಂದಿದ್ದೆ ಎಂದರು. ನೀವು ಅಲ್ಲಿ ಕೊಟ್ಟಿದ್ದೆಲ್ಲಾ ಇಲ್ಲಿ ತರೋದಾ ಅಂತಾ ಸ್ಪೀಕರ್ ಛೇಡಿಸುತ್ತಾ, ತರಾಟೆಗೆ ತೆಗೆದುಕೊಂಡರು. ನಾನು ತರೋಕೆ ಹೋಗಿರಲಿಲ್ಲ, ಅಲ್ಲಿ ಕೊಟ್ಟರು ಎಂದು ಸಿದ್ದರಾಮಯ್ಯ ಸಮಜಾಯಿಷಿ ಕೊಟ್ಟರಾದರೂ ಸಿ ಎಂ ಬೊಮ್ಮಾಯಿ ಸೇರಿದಂತೆ ಆಡಳಿತಾರೂಢ ಶಾಸಕರು ಇದಕ್ಕೆ ಸಮ್ಮತಿ ಸೂಚಿಸಲಿಲ್ಲ.
ಆದರೂ ಸಿದ್ದರಾಮಯ್ಯ ಸ್ಪೀಕರ್ ಗೆ ದವಸ ಧಾನ್ಯ ತಲುಪಿಸಿದರು. ಅದನ್ನು ಕಂಡ ಸಿಎಂ ಬೊಮ್ಮಾಯಿ ಅವರು ಈವೆಂಟ್ ಮ್ಯಾನೇಜ್ಮೆಂಟ್ ಚೆನ್ನಾಗಿ ಆಗಿದೆ ಎಂದು ಸಿದ್ದರಾಮಯ್ಯ ನಡವಳಿಕೆ ಬಗ್ಗೆ ಹೇಳಿದರು.
ಅದಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸುತ್ತಾ ನೀವು ಉತ್ತಮ ಈವೆಂಟ್ ಮ್ಯಾನೇಜರ್. ನಾನೇ ನಿಮ್ಮ ಟಾರ್ಗೆಟ್ ಅಂತಾ ಗೊತ್ತಿದೆ. ನೀವು ದೊಡ್ಡಬಳ್ಳಾಪುರದಲ್ಲಿ ಏನು ಮಾಡಿದಿರಿ ಅಂತಾ ಗೊತ್ತಿದೆ. ನೀವು ಟಾರ್ಗೆಟ್ ಮಾಡಿದಷ್ಟೂ ನನಗೆ ಲಾಭ. ನೀವು ಏನು ಮಾಡಿದರೂ ನನ್ನ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಗುಡುಗಿದರು. ಜನ ತೀರ್ಮಾನ ಮಾಡ್ತಾರೆ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಂತೆ ಬನ್ನಿ ಈಗಲೇ ಚುನಾವಣೆಗೆ ಹೋಗೋಣ ಎಂದು ಸಿಎಂ ಬೊಮ್ಮಾಯಿ ಸವಾಲು ಎಸೆದರು.
ಸಿದ್ದರಾಮಯ್ಯ: 1983 ರಲ್ಲಿ ಸಭೆಗೆ ಬಂದವನು ಹೆಗಡೆ, ಬೊಮ್ಮಾಯಿ, ದೇವೆಗೌಡ, ಧರ್ಮಸಿಂಗ್ ಈ ಎಲ್ಲಾ ಮುಖ್ಯಮಂತ್ರಿಗಳನ್ನೂ ನೋಡಿದ್ದೇನೆ. ಅವರೆಲ್ಲರ ಜೊತೆ ಕೆಲಸ ಮಾಡಿದ್ದೇನೆ, ನಾನೂ ಸಿಎಂ ಆಗಿ ಕೆಲಸ ಮಾಡಿದ್ದೇನೆ. ಬೊಮ್ಮಾಯಿ ನೀವು ಇನ್ನೂ ರಾಜಕೀಯ ಮಾಡಬೇಕಾದರು. ವಿಪಕ್ಷಗಳು ಮಾತಾಡಬೇಕಾದರೆ ಸುಮ್ನೆ ಕೇಳಿಸಿಕೊಳ್ಳಬೇಕು.
ಸಿಎಂ ಬೊಮ್ಮಾಯಿ: ಇದು ನನ್ನ ಕೊನೆ ಚುನಾವಣೆ ಎಂದವರು ನೀವೇ ಅಲ್ಲವೇ ಎಂದು ಸಿದ್ದರಾಮಯ್ಯಗೆ ಸಿ ಎಂ ಬೊಮ್ಮಾಯಿ ಪ್ರಶ್ನಿಸಿದರು.
ಸಿದ್ದರಾಮಯ್ಯ: ಬಹಳ ಜನ ಎಲ್ಲಿರಬೇಕೋ ಅಲ್ಲೇ ಇದ್ದಾರೆ, ಕೆಲವರು ಎಲ್ಲೆಲ್ಲೋ ಹೋಗಿದ್ದಾರೆ ಪಾಪ.
ಸಿಎಂ ಬೊಮ್ಮಾಯಿ: ಬಹಳ ಜನರನ್ನು ಕಳಿಸಿದ್ದೀರಿ.
ಸಿದ್ದರಾಮಯ್ಯ: ಹೆಗಡೆ, ಎಸ್.ಆರ್. ಬೊಮ್ಮಾಯಿಯನ್ನು ನಾನು ಕಳಿಸಿದ್ನಾ? ಬಿಜೆಪಿಗೆ ಡೆಮಾಕ್ರಸಿ ಮೇಲೆ ನಂಬಿಕೆ ಇಲ್ಲ. ನಾನು 1983 ರಿಂದ ಇಲ್ಲಿ ಇದ್ದೇನೆ, ನೀವೆಲ್ಲಾ ಎದ್ದು ಮಾತಾಡೋದು ನೋಡಿದ್ರೆ ನನಗೆ ಮಾತಾಡೋಕೆ ಬರೋದಿಲ್ಲವೇನೋ ಅನಿಸುತ್ತದೆ.
ಸಿದ್ದರಾಮಯ್ಯ ಅವಧಿಯ ಹಗರಣ ಬಗ್ಗೆ ಸಿಎಂ ಬೊಮ್ಮಾಯಿ ಪ್ರಸ್ತಾಪ ಮಾಡಿದರು.
ಸಿದ್ದರಾಮಯ್ಯ: 3 ವರ್ಷದಿಂದ ಏನು ಮಾಡ್ತಿದ್ರಿ? ನಾವು ಅಧಿಕಾರದಲ್ಲಿ ಇದ್ದಾಗ ಅಕ್ರಮ ಆಗಿದೆ ಎಂದು ಹೇಳ್ತೀರಿ. ಆಗ ಯಾಕೆ ನೀವು ಪ್ರಶ್ನೆ ಮಾಡಿಲ್ಲ?
ಸಿಎಂ ಬೊಮ್ಮಾಯಿ: ನಿಮ್ಮ ಅವಧಿಯಲ್ಲಿ ಏನೂ ಆಗೇ ಇಲ್ವಾ? ನಿಮ್ಮ ಕಾಲದಲ್ಲಿ ಪಿಎಸ್ಐ ಹಗರಣ ತನಿಖೆ ಕೊಟ್ಟಿಲ್ವಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ಪ್ರಶ್ನೆ ಹಾಕಿದರು. ಜೊತೆಗೆ, ಪ್ರಕರಣ ಮುಚ್ಚಿಹಾಕಿದ್ದು ನೀವು ಎಂದು ಜರಿದರು.
ಸಿದ್ದರಾಮಯ್ಯ: ಹೌದು ಕೇಸ್ ಮುಚ್ಚಿ ಹಾಕಿದ್ದೆವು, ನೀವು ಏನು ಮಾಡ್ತಿದ್ರಿ? ಒಂದು ವೇಳೆ ಅಕ್ರಮ ಮಾಡಿದ್ರೆ ಕೂಡಲೇ ತನಿಖೆ ಮಾಡಿಸಿ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
Published On - 4:57 pm, Tue, 20 September 22