ಕಾಂಗ್ರೆಸ್​​ ಪಾಳಯದಲ್ಲಿ ತೀವ್ರಗೊಂಡ ಸಚಿವಾಕಾಂಕ್ಷಿಗಳ ಲಾಬಿ: ಜಿಲ್ಲೆ ಜಿಲ್ಲೆಯಲ್ಲೂ ಭುಗಿಲೆದ್ದ ಬೆಂಬಲಿಗರ ಆಕ್ರೋಶದ ಜ್ವಾಲೆ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಇದೀಗ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ತೀವ್ರಗೊಂಡಿದೆ. ಜಮೀರ್ ಅಹ್ಮದ್ ಖಾನ್​​ ಸೇರಿದಂತೆ ಇತರೆ ನಾಯಕರ ಬೆಂಬಲಿಗರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಖಾತೆ ಹಂಚಿಕೆ ಕಗ್ಗಂಟು ಕ್ಲಿಯರ್ ಆದ ಬೆನ್ನಲ್ಲೇ ಇದೀಗ ಸಂಪುಟ ಕಿಚ್ಚು ಮತ್ತಷ್ಟು ಹೊತ್ತಿ ಉರಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ಕಾಂಗ್ರೆಸ್​​ ಪಾಳಯದಲ್ಲಿ ತೀವ್ರಗೊಂಡ ಸಚಿವಾಕಾಂಕ್ಷಿಗಳ ಲಾಬಿ: ಜಿಲ್ಲೆ ಜಿಲ್ಲೆಯಲ್ಲೂ ಭುಗಿಲೆದ್ದ ಬೆಂಬಲಿಗರ ಆಕ್ರೋಶದ ಜ್ವಾಲೆ
ಬೆಂಬಲಿಗರಿಂದ ಪ್ರತಿಭಟನೆಗಳು
Image Credit source: tv9 kannada

Updated on: Jun 07, 2026 | 7:15 AM

ಬೆಂಗಳೂರು, ಜೂನ್​​ 07: ಸಿಎಂ ಡಿಕೆ ಶಿವಕುಮಾರ್ (DK Shivakumar) ಸಂಪುಟದಲ್ಲಿ ಖಾತೆ ಗುದ್ದಾಟ ಜೋರಾಗಿದೆ. ಅದರಲ್ಲೂ  ಬೆಂಬಲಿಗರ ಹೈಡ್ರಾಮಾಗಳು ಒಂದಾ ಎರಡಾ. ಸಚಿವಾಕಾಂಕ್ಷಿಗಳ ಲಾಬಿ, ಒತ್ತಡ ತಂತ್ರಗಳು ತೀವ್ರಗೊಂಡಿವೆ. ತಮ್ಮ ನಾಯಕರ ಪರ ಜಿಲ್ಲೆ ಜಿಲ್ಲೆಯಲ್ಲೂ ಬೆಂಬಲಿಗರು ಆಕ್ರೋಶದ ಜ್ವಾಲೆ ಹೊರ ಹಾಕುತ್ತಿದ್ದಾರೆ. ಬೆಂಗಳೂರಿನಿಂದ ಹಿಡಿದು ಬಾಗಲಕೋಟೆ, ಗದಗದಿಂದ ಹಿಡಿದು ಕೊಪ್ಪಳದವರೆಗೆ ಈಗ ಕಾಂಗ್ರೆಸ್​​ ಪಾಳಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

ಮುಖ್ಯಾಂಶಗಳು

  • ತೀವ್ರಗೊಂಡ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ
  • ಜಿಲ್ಲೆ ಜಿಲ್ಲೆಗಳಲ್ಲಿ ಬೆಂಬಲಿಗರಿಂದ ಪ್ರತಿಭಟನೆ
  • ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳ ಕಸರತ್ತು

ಸಿಎಂ ಡಿ.ಕೆ.ಶಿವಕುಮಾರ್ ಸಂಪುಟದಲ್ಲಿ ಖಾತೆ ಹಂಚಿಕೆ ಬಳಿಕ ಅಸಮಾಧಾನ ಸ್ಫೋಟಗೊಂಡಿತ್ತು. ಒಂದೆಡೆ ಸಚಿವ ರಾಮಲಿಂಗಾರೆಡ್ಡಿ, ಮುನಿಯಪ್ಪ ಖಾತೆ ಕ್ಯಾತೆಯ ಮಧ್ಯೆ ಸಿಎಂ ಡಿಕೆ ಶಿವಕುಮಾರ್​ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಗುಪ್ತ್ ಮೀಟಿಂಗ್ ಮಾಡಿದ್ದಾರೆ. ಈ ವೇಳೆ ಇಬ್ಬರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಲಹೆ ನೀಡಿದ್ದರು. ಅದರಂತೆ ಈಗ ಇಬ್ಬರು ಸಚಿವರು ಕೂಲ್ ಆಗಿದ್ದಾರೆ. ಆದರೆ ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದ ಆಕಾಂಕ್ಷಿಗಳ ಆಕ್ರೋಶದ ಕಟ್ಟೆ ಹೊಡೆದಿದೆ.

ಜಮೀರ್​ಗೆ ಸಚಿವ ಸ್ಥಾನ ನೀಡುವಂತೆ ಪಟ್ಟು: ಬೆಂಬಲಿಗರ ಪ್ರತಿಭಟನೆ

ರಾಜ್ಯದಲ್ಲಿ ಅತೀ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಜಮೀರ್. ಜಿಲ್ಲೆ ಜಿಲ್ಲೆಯಲ್ಲೂ ಜಮೀರ್ ಬೆಂಬಲಿಗರು ಬೀದಿಗಿಳಿದಿದ್ದರು. ನಿನ್ನೆ ಕೂಡ ಬೆಂಗಳೂರು, ಚಿತ್ರದುರ್ಗ, ರಾಯಚೂರು, ರಾಮನಗರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಜಮೀರ್ ಬೆಂಬಲಿಗರು, ಮುಸ್ಲಿಂ ಸಮುದಾಯದ ಮುಖಂಡರು ಪ್ರತಿಭಟನೆ ನಡೆಸಿದ್ದರು. ಮುಸ್ಲಿಂ ಪ್ರಭಾವಿ ನಾಯಕನಿಗೆ ಡಿಸಿಎಂ ಪಟ್ಟ ಹಾಗೂ ಸಚಿವ ಸ್ಥಾನ ಕೊಡಬೇಕು ಅಂತಾ ಆಗ್ರಹಿಸಿದ್ದರು.

ಇದನ್ನೂ ಓದಿ: ಸಿಎಂ ಡಿಕೆ ಶಿವಕುಮಾರ್​​​ ಹೇಳಿದ ಆ ಒಂದು ಮಾತು ನನ್ನ ನಿರ್ಧಾರ ಬದಲಿಸಿದೆ ಎಂದ ರಾಮಲಿಂಗಾರೆಡ್ಡಿ

ಬಾಗಲಕೋಟೆ, ಚಿತ್ರದುರ್ಗದಲ್ಲಿ ಜಮೀರ್ ಆಡಿಯೋ ವೈರಲ್ ಹಿಂದೆ ದೊಡ್ಡ ಷಡ್ಯಂತ್ರ ಅಂತಾ ಜಮೀರ್ ಬೆಂಬಲಿಗರು ಕಿಡಿಕಾರಿದ್ದಾರೆ. ಕಾಂಗ್ರೆಸ್ 134 ಸೀಟ್ ಗೆಲ್ಲೋದಕ್ಕೆ ಜಮೀರ್ ಕೂಡ ಕಾರಣ ಅಂತಾ ರಾಮನಗರದಲ್ಲಿ ಬೆಂಬಲಿಗರು ಜೈಕಾರ ಕೂಗಿದರು. ಜಮೀರ್ 85 ಲಕ್ಷ ಮುಸ್ಲಿಂ ಸಮುದಾಯವನ್ನ ಪ್ರತಿನಿಧಿಸುತ್ತಾರೆ. ಕ್ಯಾಬಿನೆಟ್‌ನಲ್ಲಿ ಅವಕಾಶ ಸಿಗದಿದ್ದರೆ ಮುಂದೆ ಕಾಂಗ್ರೆಸ್‌ಗೆ ಪಾಠ ಕಲಿಸೋದಾಗಿ ಬೆಂಬಲಿಗರು ಎಚ್ಚರಿಸಿದ್ದಾರೆ.

ಜಮೀರ್​ಗೆ ತಾಳ್ಮೆ, ನಿಷ್ಠೆ, ಬದ್ಧತೆ ಬಗ್ಗೆ ಖಾದರ್ ಪಾಠ! 

ಅತ್ತ ಜಮೀರ್​ಗೆ ಪರೋಕ್ಷವಾಗಿ ಟಾಂಗ್ ನೀಡಿದ ಸಚಿವ ಯು.ಟಿ.ಖಾದರ್‌, ತಾಳ್ಮೆ, ನಿಷ್ಠೆ, ಪ್ರಾಮಾಣಿಕತೆ, ಬದ್ಧತೆ ಅಂತೆಲ್ಲ ಪಾಠ ಮಾಡಿದ್ದಾರೆ.

ಇನ್ನು ಸಚಿವ ಸ್ಥಾನಕ್ಕಾಗಿ ಲಾಬಿ ಇಷ್ಟಕ್ಕೆ ಮುಗಿಯಲಿಲ್ಲ. ಗದಗದಲ್ಲಿ ಶಾಸಕ ಜಿ.ಎಸ್.ಪಾಟೀಲ್ ಬೆಂಬಲಿಗರು ಉರುಳು ಸೇವೆ ಮಾಡಿದರು. ಗಜೇಂದ್ರಗಢ ತಾಲೂಕಿನ ನರೇಗಲ್ ಪಟ್ಟಣದಲ್ಲಿ 101 ಟೆಂಗಿನಕಾಯಿ ಒಡೆದು ಹರಕೆ ಕಟ್ಟಿಕೊಂಡರು.

ಡಿಕೆ ಶಿವಕುಮಾರ್​ ಕೊಟ್ಟ ಮಾತು ನೆನಪಿಸಿಕೊಂಡ ಲಕ್ಷ್ಮಣ ಸವದಿ

ಶಿವಮೊಗ್ಗದಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಸಿದ್ದರಾಮಯ್ಯ ಸರ್ಕಾರದಲ್ಲಿ ನನಗೆ ಅವಕಾಶ ಸಿಗಲಿಲ್ಲ. ಈಗಲಾದರೂ ಕೊಡಿ ಅಂದ್ರೆ, ಬಳ್ಳಾರಿಯಲ್ಲಿ ಸಂಸದ ತುಕಾರಾಂ, ಪರೋಕ್ಷವಾಗಿ ಮಾಜಿ ಸಚಿವ ನಾಗೇಂದ್ರಗೆ ಮಂತ್ರಿಗಿರಿ ಬೇಡ. ಕ್ಲೀನ್ ಇಮೇಜ್ ಇರೋರಿಗೆ ಕೊಡಿ ಅಂತಾ ಹೇಳಿದ್ದಾರೆ. ಇನ್ನು ಬೆಳಗಾವಿಯಲ್ಲಿ ಡಿಕೆ ಶಿವಕುಮಾರ್ ಸಚಿವ ಸ್ಥಾನ ನೀಡುವ ಭರವಸೆ ಕೊಟ್ಟಿದ್ದಾರೆ ಅಂತಾ ಲಕ್ಷ್ಮಣ ಸವದಿ ಕೊಟ್ಟ ಮಾತು ನೆನಪಿಸಿದರು.

ಇದನ್ನೂ ಓದಿ: ತಣ್ಣಗಾಯ್ತು ಮುನಿಯಪ್ಪ ಮುನಿಸು, ನಿಲ್ಲದ ಜಮೀರ್‌ ಬೆಂಬಲಿಗರ ಆಕ್ರೋಶ: ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ

ಕೊಪ್ಪಳದಲ್ಲಿ ಶಾಸಕ ಹಿಟ್ನಾಳ್ ಬೆಂಬಲಿಗರು ಸಭೆ ಸೇರಿ, ಸೋಮವಾರ ಪ್ರತಿಭಟನೆಗೆ ಕರೆ ನೀಡಿದ್ದರು. ಗಂಗಾವತಿ ನಗರದ ಶ್ರೀ ಕೃಷ್ಣ ದೇವರಾಯ ಸರ್ಕಲ್​ನಲ್ಲಿ ಶಿವರಾಜ ತಂಗಡಗಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದರು.

ಒಟ್ಟಿನಲ್ಲಿ ಖಾತೆ ಹಂಚಿಕೆ ಕಗ್ಗಂಟು ಈಗಷ್ಟೇ ಕ್ಲಿಯರ್ ಆಗಿದೆ. ಸಂಪುಟ ವಿಸ್ತರಣೆಯಾದರೆ ಸಂಪುಟ ಕಿಚ್ಚು ಮತ್ತಷ್ಟು ಹೊತ್ತಿ ಉರಿರುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ.

ವರದಿ: ಬ್ಯುರೋ ರಿಪೋರ್ಟ್ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us