ಕೇಂದ್ರ ನಾಯಕರನ್ನು ಮನೆಯಲ್ಲಿ ಕೂರಿಸಿ ಹೊರ ಹೋದ ಈಶ್ವರಪ್ಪ: ಶಮನವಾಗದ ಬಂಡಾಯ

| Updated By: ವಿವೇಕ ಬಿರಾದಾರ

Updated on: Mar 17, 2024 | 2:39 PM

ಪುತ್ರ ಕಾಂತೇಶ್​​ಗೆ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡಿರುವ ಕೆಎಸ್ ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಬಂಡಾಯವನ್ನು ಶಮನಗೊಳಿಸಲು ಬಿಜೆಪಿ ಹೈಕಮಾಂಡ್​ ನಾಯಕರು ಕೆಎಸ್​ ಈಶ್ವರಪ್ಪ ಅವರ ಮನೆಗೆ ಹೋಗಿದ್ದರು. ಆದರೆ ಮನೆಗೆ ಹೋದ ಹೈಕಮಾಂಡ್​ ನಾಯಕರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ತೆರಳಿಸಿದ್ದಾರೆ.

ಕೇಂದ್ರ ನಾಯಕರನ್ನು ಮನೆಯಲ್ಲಿ ಕೂರಿಸಿ ಹೊರ ಹೋದ ಈಶ್ವರಪ್ಪ: ಶಮನವಾಗದ ಬಂಡಾಯ
ಮಾಜಿ ಸಚಿವ ಕೆಎಸ್​ ಈಶ್ವರಪ್ಪ
Follow us on

ಶಿವಮೊಗ್ಗ, ಮಾರ್ಚ್​ 17: ಬಿಜೆಪಿ ವಿರುದ್ಧ ಮಾಜಿ ಸಚಿವ ಕೆಎಸ್​ ಈಶ್ವರಪ್ಪ (KS Eshwarappa) ಬಂಡಾಯವೆದ್ದಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ (Shivamogga Lok Sabha Constituency) ಪಕ್ಷೇತರವಾಗಿ ಸ್ಪರ್ಧಿಸುವುದಾಗಿ ನಿರ್ಧರಿಸಿದ್ದಾರೆ. ಈ ಬಂಡಾಯ ಶಮನಕ್ಕೆ ಬಿಜೆಪಿ (BJP) ಹೈಕಮಾಂಡ್​ ನಾಯಕರು ಮತ್ತು ಕೆಎಸ್​ ಈಶ್ವರಪ್ಪ ಅವರ ನಡುವೆ ನಡೆದ ಸಭೆ ವಿಫಲವಾಗಿದೆ. ನಾಳೆ (ಮಾರ್ಚ್​ 18) ರಂದು ಶಿವಮೊಗ್ಗದಲ್ಲಿ ನಡೆಯುವ ಪ್ರಧಾನಿ ಮೋದಿ ಸಮಾವೇಶಕ್ಕೆ ಕೆಎಸ್​ ಈಶ್ವರಪ್ಪ ಗೈರಾಗುವ ಸಾಧ್ಯತೆ ಇದೆ. ಹೀಗಾಗಿ ಬಂಡಾಯ ಶಮನ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಹೇಳಲು ಇಂದು (ಮಾರ್ಚ್​.17) ಬೆಳಿಗ್ಗೆ ಕೆಎಸ್​ ಈಶ್ವರಪ್ಪ ಮನೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್​ ಅಗರ್ವಾಲ್​, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಜೇಶ್, ವಿಧಾನ ಪರಿಷತ್​ ಸದಸ್ಯ ಡಿ.ಎಸ್.ಅರುಣ್​ ಭೇಟಿ ನೀಡಿ ಚರ್ಚಿಸಲು ಮುಂದಾಗಿದ್ದರು.

ಆದರೆ ಕೆಎಸ್​ ಈಶ್ವರಪ್ಪ ಮಾತುಕತೆ ನಡುವೆಯೇ ಎದ್ದು ಹೊರ ನಡೆದು, ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ನಗರದ ಗೋಪಾಳದಲ್ಲಿ ಆಯೋಜಿಸಿದ್ದ ದೇವಸ್ಥಾನ ಮತ್ತು ಹೋಮದಲ್ಲಿ ಭಾಗಿಯಾಗಿದ್ದ ಕೆಎಸ್​ ಈಶ್ವರಪ್ಪ ಅರ್ಧ ಗಂಟೆ ಕಳೆದರೂ, ಮನೆಗೆ ಬರಲಿಲ್ಲ. ಹೀಗಾಗಿ ಕೇಂದ್ರ ನಾಯಕರು ಕೆ.ಎಸ್​.ಈಶ್ವರಪ್ಪ ಮನೆಯಿಂದ ತೆರಳಿದರು. ಈ ಮೂಲಕ ಸಂಧಾನ ಸಭೆ ವಿಫಲವಾಗಿದೆ.

ರಾಜ್ಯ ನಾಯಕರ ಮನವೊಲಿಕೆಗೂ ಬಗ್ಗದ ​ಈಶ್ವರಪ್ಪ

ಹೈಕಮಾಂಡ್​ ನಾಯಕರ ಸಂಧಾನ ಸಭೆಗೂ ಮುನ್ನ ಹೈಕಮಾಂಡ್ ಸೂಚನೆ ಮೇರೆಗೆ ಈಶ್ವರಪ್ಪ ನಿವಾಸಕ್ಕೆ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿಎಸ್ ಅರುಣ್ ಮತ್ತು ರವಿಕುಮಾರ್ ಭೇಟಿ ನೀಡಿದ್ದರು.

ಇದನ್ನೂ ಓದಿ: ಕೆಎಸ್ ಈಶ್ವರಪ್ಪಗೆ ಮಠಾಧೀಶರ ಬೆಂಬಲ; ಚುನಾವಣೆಯಲ್ಲಿ ಈಶ್ವರಪ್ಪ ಗೆಲ್ಲಬೇಕು ಎಂದ ಆನಂದ್ ಗುರೂಜಿ

ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಈಶ್ವರಪ್ಪ ಜೊತೆ ಒಂದು ಗಂಟೆ ಮಾತುಕತೆ ನಡೆಸಿ ಸಂಧಾನಕ್ಕೆ ಯತ್ನಿಸಿದ್ದರು. ಅಲ್ಲದೆ, ನಾಳೆ ಜಿಲ್ಲೆಗೆ ಮೋದಿ ಆಗಮಿಸುತ್ತಿದ್ದು, ಸಮಾವೇಶಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ಆದರೆ, ಸಂಧಾನಕಾರರ ಮನವಿಗೆ ಈಶ್ವರಪ್ಪ ಸ್ಪಂದಿಸಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದರು.

ಕಾಂತೇಶ್ ಜನ ಸಂಘಟನೆ​

ಶಿವಮೊಗ್ಗ ಕ್ಷೇತ್ರದಲ್ಲಿ ತಂದೆ ಈಶ್ವರಪ್ಪ ಅವರು ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆ, ಈಶ್ವರಪ್ಪ ಪುತ್ರ ಕಾಂತೇಶ್ ತಂದೆಗೆ ಬೆಂಬಲಿಸುವಂತೆ ಜನರ ಬಳಿ ಮನವಿ ಮಾಡುತ್ತಿದ್ದಾರೆ. ಇನ್ನು ಚುನಾವಣಾ ಪ್ರಚಾರಕ್ಕೆ ಸೊರಬ ತಾಲೂಕಿನ ಆನವಟ್ಟಿಯ ಉಡುಪಿ ಹೋಟೆಲ್ ಮಾಲಿಕರು ದೇಣಿಗೆ ನೀಡಿದ್ದಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಅನುಕಂಪದ ಅಲೆ ಸೃಷ್ಟಿಸಲು ಕಾಂತೇಶ್ ಪ್ರವಾಸ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:08 pm, Sun, 17 March 24