ಕೊಪ್ಪಳ, ಏಪ್ರಿಲ್ 03: ಕೊಪ್ಪಳ ಲೋಕಸಭಾ ಕ್ಷೇತ್ರ (Koppal Lok Sabha Constituency) ಗೆಲ್ಲಲು ಕಾಂಗ್ರೆಸ್ (Congress) ಮತ್ತು ಬಿಜೆಪಿ (BJP) ನಡುವೆ ಪೈಪೋಟಿ ಏರ್ಪಟ್ಟಿದೆ. ಕೊಪ್ಪಳ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಹೊಸಬರಿಗೆ ಮಣೆ ಹಾಕಿದ್ದು, ಹಾಲಿ ಸಂಸದ ಸಂಗಣ್ಣ ಕರಡಿ ಬದಲಿಗೆ ಡಾ.ಬಸವರಾಜ ಕ್ಯಾವಟರ್ ಅವರನ್ನು ಕಣಕ್ಕೆ ಇಳಿಸಿದೆ. ಇನ್ನು ಕಾಂಗ್ರೆಸ್ ಕಳೆದ ಬಾರಿಯೂ ಸ್ಪರ್ಧಿಸಿದ್ದ ಕೆ.ರಾಜಶೇಖರ್ ಬಸವರಾಜ ಹಿಟ್ನಾಳ್ ಅವರಿಗೆ ಮತ್ತೆ ಮಣೆ ಹಾಕಿದೆ. ಸದ್ಯ ತನ್ನ ವಶದಲ್ಲಿರುವ ಕೊಪ್ಪಳ ಲೋಕಸಭಾ ಕ್ಷೇತ್ರವನ್ನು ಈ ಬಾರಿಯೂ ಮತ್ತೆ ತನ್ನ ಮಡಿಲಿಗೆ ಹಾಕಿಕೊಳ್ಳಲು ಬಿಜೆಪಿ ನಾನಾ ಕಸರತ್ತು ನಡೆಸುತ್ತಿದೆ. ಲೋಕಸಭೆ ಚುನಾವಣೆಯ ಕಾವು ಏರುತ್ತಿದ್ದಂತೆ ಆಪರೇಷ್ ನಡೆಸುತ್ತಿರುವ ಜಿಲ್ಲೆಯ ಬಿಜೆಪಿ ನಾಯಕರು ಮಾಜಿ ಸಂಸದ ಶಿವರಾಮಗೌಡ ಅವರನ್ನು ಪಕ್ಷಕ್ಕೆ ಕರೆತರಲು ಮುಂದಾಗಿದ್ದಾರೆ.
ಶಿವರಾಮಗೌಡ ಅವರು 2009ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು. ಆದರೆ 2014ರ ಲೋಕಸಭಾ ಚುನಾವಣೆಯಲ್ಲಿ ಶಿವರಾಮಗೌಡ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿತ್ತು. ಶಿವರಾಮಗೌಡ ಅವರ ಬದಲಿಗೆ ಕರಡಿ ಸಂಗಣ್ಣ ಅವರಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಧಾನಗೊಂಡಿದ್ದ ಶಿವರಾಮಗೌಡ ಅವರು ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಇದೀಗ ಶಿವರಾಮಗೌಡ ಅವರನ್ನು ಮತ್ತೆ ಬಿಜೆಪಿಗೆ ಕರೆತರಲು ಜಿಲ್ಲೆಯ ಬಿಜೆಪಿ ನಾಯಕರು ಕಸರತ್ತು ನಡೆಸಿದ್ದಾರೆ.
ಇದನ್ನೂ ಓದಿ: ಬಂಡಾಯ ಇರುವ 4 ಲೋಕಸಭಾ ಕ್ಷೇತ್ರಗಳ ಬಿಜೆಪಿ ನಾಯಕರಿಗೆ ಗೆಲುವಿನ ಗುರಿ ಕೊಟ್ಟ ಅಮಿತ್ ಶಾ!
ಮಂಗಳವಾರ (ಏ.02) ರಂದು ಶಿವರಾಮಗೌಡ ಅವರ ನಿವಾಸಕ್ಕೆ ಶಾಸಕ ದೊಡ್ಡನಗೌಡ, ಮಾಜಿ ಸಚಿವ ಹಾಲಪ್ಪ ಆಚಾರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಸೇರಿ ಹಲವು ಮುಖಂಡರು ಭೇಟಿ ನೀಡಿ, ಬಿಜೆಪಿಗೆ ಆಹ್ವಾನಿಸಿದ್ದಾರೆ. ಶಿವರಾಮಗೌಡ ಸಧ್ಯದಲ್ಲೇ ಮರಳಿ ತವರಿಗೆ ವಾಪಸ್ ಆಗುವ ಸಾಧ್ಯತೆ ಇದೆ.
ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ ಕ್ಯಾವಟರ್ ಪಂಚಮಸಾಲಿ ಸಮುದಾಯದವರಾಗಿದ್ದು, ಇದೇ ಸಮುದಾಯದ ಶಿವರಾಮಗೌಡ ಅವರ ಸೇರ್ಪಡೆಯಿಂದ ಮತಗಳ ಕ್ರೋಢೀಕರಣಕ್ಕೆ ಅನುಕೂಲವಾಗುತ್ತದೆ ಎನ್ನುವುದು ನಾಯಕರ ಲೆಕ್ಕಾಚಾರ.
ಕೊಪ್ಪಳ ಲೋಕಸಭಾ ಕ್ಷೇತ್ರವು ಪ್ರಸ್ತುತ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ.ರಾಯಚೂರು ಜಿಲ್ಲೆಯ ಸಿಂಧನೂರು, ಮಾಸ್ಕಿ, ಕೊಪ್ಪಳ ಜಿಲ್ಲೆಯ ಕುಷ್ಟಗಿ, ಕನಕಗಿರಿ, ಗಂಗಾವತಿ, ಯೆಲ್ಬುರ್ಗಾ, ಕೊಪ್ಪಳ, ಸಿರಗುಪ್ಪ ವಿಧಾನಸಭಾ ಕ್ಷೇತ್ರಗಳು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುತ್ತವೆ. ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 6 ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಮತ್ತು ಎರಡು ಬಿಜೆಪಿ ಪಾಲಾಗಿವೆ.
ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿನ ಒಟ್ಟು 18,51,700 ಮತದಾರರಿದ್ದಾರೆ. ಅವರಲ್ಲಿ 9,12,818 ಪುರುಷರು, 9,38,750 ಮಹಿಳೆಯರು ಮತ್ತು 132 ಇತರರು ಇದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:41 am, Wed, 3 April 24