ಲೋಕಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ತಂತ್ರ, ಮೈಸೂರಿನಲ್ಲಿ ಚುರುಕಾದ ಬಿಜೆಪಿ

| Updated By: Ganapathi Sharma

Updated on: Feb 15, 2024 | 12:52 PM

Mysuru Kodagu Lok Sabha Constituency: ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಮೈಸೂರಿನಲ್ಲಿ ಬಿಜೆಪಿ ನಾಯಕರು ಸಕ್ರಿಯರಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರಿಗೆ ಸೀಮಿತ ಮಾಡಿ ಅದರ ಲಾಭವನ್ನು ಇತರೆಡೆಗಳಲ್ಲಿ ಪಡೆಯುವ ಲೆಕ್ಕಾಚಾರ ಬಿಜೆಪಿ ನಾಯಕರದ್ದಾಗಿದೆ. ಅದು ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಕಾದು ನೋಡಬೇಕಿದೆ.

ಲೋಕಸಭೆ ಚುನಾವಣೆ: ಸಿಎಂ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ತಂತ್ರ, ಮೈಸೂರಿನಲ್ಲಿ ಚುರುಕಾದ ಬಿಜೆಪಿ
ಸಿಎಂ ಸಿದ್ದರಾಮಯ್ಯ ಕಟ್ಟಿಹಾಕಲು ಬಿಜೆಪಿ ತಂತ್ರ, ಮೈಸೂರಿನಲ್ಲಿ ಚುರುಕಾದ ಬಿಜೆಪಿ
Follow us on

ಮೈಸೂರು, ಫೆಬ್ರವರಿ 15: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿರುವಂತೆಯೇ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಕಟ್ಟಿಹಾಕಲು ಬಿಜೆಪಿ ತಂತ್ರಗಾರಿಕೆ ಹೆಣೆಯುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗಷ್ಟೇ ಮೈಸೂರಿಗೆ ಭೇಟಿ ನೀಡಿದ್ದರು. ಇದಾದ ಬೆನ್ನಲ್ಲೇ ಮೈಸೂರಿನಲ್ಲಿ (Mysuru) ಬಿಜೆಪಿ (BJP) ನಾಯಕರು ಸಕ್ರಿಯರಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಒಂದು ವೇಳೆ, ಸಿದ್ದರಾಮಯ್ಯರನ್ನು ಮೈಸೂರು ಕೊಡುಗು ಕ್ಷೇತ್ರಕ್ಕೆ ಸೀಮಿತಗೊಳಿಸಿದರೆ ಇತರ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಅನುಕೂಲವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಕಮಲ ಪಾಳೆಯದ ನಾಯಕರಿದ್ದಾರೆ.

ಹೀಗಾಗಿಯೇ ಮೈಸೂರಿನಲ್ಲಿ ಮೊದಲಾಗಿ ‘ಮೈಸೂರು ಕೊಡಗು ಲೋಕಸಭಾ ಕ್ಷೇತ್ರ’ಕ್ಕೆ ಸಂಬಂಧಿಸಿದ ಚುನಾವಣಾ ಕಾರ್ಯಾಲಯ ಉದ್ಘಾಟನೆ ಮಾಡಲಾಗಿದೆ. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಚುನಾವಣಾ ಕಾರ್ಯಾಲಯ ಉದ್ಘಾಟನೆ ಕಾರ್ಯಕ್ರಮ ಗುರುವಾರ ನೆರವೇರಿದೆ. ಶಾಸಕ ಡಾ. ಅಶ್ವತ್ಥ್ ನಾರಾಯಣ್, ಮಾಜಿ ಸಚಿವ ಎಸ್ ಎ ರಾಮದಾಸ್, ಸಿಹೆಚ್ ವಿಜಯ್ ಶಂಕರ್, ಮಾಜಿ ಶಾಸಕ ಎಲ್ ನಾಗೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಗ್ರಾಮಾಂತರ ಜಿಲ್ಲಾಧ್ಯಕ್ಷ ಎಲ್​​ಆರ್ ಮಹದೇವಸ್ವಾಮಿ ಹಾಗೂ ಇತರರು ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹಗೆ ಸಾಥ್ ನೀಡಿದ್ದಾರೆ.

ಫಲ ಕೊಡಲಿದೆಯೇ ಬಿಜೆಪಿ ತಂತ್ರಗಾರಿಕೆ?

ಸಿಎಂ ಸಿದ್ದರಾಮಯ್ಯ ಅವರನ್ನು ಮೈಸೂರಿಗೆ ಸೀಮಿತ ಮಾಡುವ ಬಿಜೆಪಿ ತಂತ್ರಗಾರಿಕೆ ಫಲ ಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಯಾಕೆಂದರೆ, ಈ ಹಿಂದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಇಂಥದ್ದೇ ಪ್ರಯೋಗಕ್ಕೆ ಬಿಜೆಪಿ ಕೈಹಾಕಿತ್ತು. ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿ, ಮಾಜಿ ಸಚಿವ ವಿ ಸೋಮಣ್ಣ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ, ಇದನ್ನು ಸಮರ್ಥವಾಗಿ ಎದುರಿಸಿದ್ದ ಸಿದ್ದರಾಮಯ್ಯ ಗೆಲುವಿನ ನಗೆ ಬೀರಿದ್ದರು.

ವರುಣಾ ಕ್ಷೇತ್ರದ ಪೂರ್ಣ ಜವಾಬ್ದಾರಿಯನ್ನು ಪುತ್ರ ಯತೀಂದ್ರಗೆ ವಹಿಸಿದ್ದ ಸಿದ್ದರಾಮಯ್ಯ ರಾಜ್ಯದ ಇತರೆಡೆಗಳಲ್ಲಿ ಪ್ರವಾಸ ಮಾಡಿದ್ದರು. ಅಂತಿಮ ಹಂತದಲ್ಲಷ್ಟೇ ವರುಣಾದಲ್ಲಿ ಪ್ರಚಾರಕ್ಕೆ ತೆರಳಿದ್ದರು.

ಲೋಕಸಭೆ ಚುನಾವಣೆಗೆ ಬೇರೆಯೇ ಲೆಕ್ಕಾಚಾರ

ವಿಧಾನಸಭೆ ಚುನಾವಣೆಗೂ ಲೋಕಸಭೆ ಚುನಾವಣೆಗೂ ವ್ಯತ್ಯಾಸವಿದೆ. ವಿಧಾನಸಭೆ ಚುನಾವಣೆ ಸಂದರ್ಭ ವರುಣಾ ಕ್ಷೇತ್ರವೊಂದೇ ಪರಿಗಣನೆಗೆ ಬರುತ್ತದೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಮೈಸೂರು ಹಾಗೂ ಕೊಡಗಿನ ಅಷ್ಟೂ ಕ್ಷೇತ್ರಗಳು ಅಡಕವಾಗಿದ್ದು ತಮಗೆ ಪ್ಲಸ್ ಆಗಲಿದೆ ಎನ್ನುತ್ತಿದ್ದಾರೆ ಬಿಜೆಪಿ ನಾಯಕರು. ಹಳೆ ಮೈಸೂರು ಭಾಗದಲ್ಲಿ ಮಿತ್ರ ಪಕ್ಷ ಜೆಡಿಎಸ್ ಪ್ರಾಬಲ್ಯವೂ ಇರುವುದರಿಂದ ಸೂಕ್ತ ತಂತ್ರಗಾರಿಕೆ ರೂಪಿಸುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಹೆಚ್ಚು ಗಮನ ನೀಡಿದಲ್ಲಿ ಸಿದ್ದರಾಮಯ್ಯನವರು ಸಹ ಅಲ್ಲಿಗೇ ಹೆಚ್ಚು ಗಮನ ನೀಡಬೇಕಾಗುತ್ತದೆ. ಇದು ಇತರ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ನೆರವಾಗಲಿದೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ.

ಇದನ್ನೂ ಓದಿ: ಮುಂದೆ ಬೆಂಗಳೂರು ಮೈಸೂರು ಮೆಟ್ರೋ: ಸಂಸದ ಪ್ರತಾಪ್ ಸಿಂಹ ಭರವಸೆ

ಈ ಮಧ್ಯೆ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಹಲವು ಭರವಸೆಗಳನ್ನು ನೀಡಿರುವುದು ಗಮನ ಸೆಳೆದಿದೆ. ಬೆಂಗಳೂರು ಮೈಸೂರು ಮೆಟ್ರೋ, ಮೈಸೂರಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇತ್ಯಾದಿ ಹಲವು ಭರವಸೆಗಳನ್ನು ನೀಡಿರುವ ಅವರು, ಜನ ಮತ್ತೊಮ್ಮೆ ಆಶೀರ್ವಾದ ನೀಡಬೇಕೆಂದು ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ