ಬಿಜೆಪಿ ಎರಡನೇ ಪಟ್ಟಿಗೆ ಕ್ಷಣಗಣನೆ: ಕರ್ನಾಟಕದ ಅಭ್ಯರ್ಥಿಗಳ ಹೆಸರು ಇಂದೇ ಅಂತಿಮ ಸಾಧ್ಯತೆ
ಲೋಕಸಭೆ ಚುನಾವಣೆಗೆ ಬಿಜೆಪಿಯ ಸಿದ್ಧತೆ ಭರದಿಂದ ಸಾಗುತ್ತೆ. ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ತಂತ್ರಗಾರಿಕೆ ಆರಂಭಿಸಿವೆ. ಈ ಮಧ್ಯೆ ದೆಹಲಿಯಲ್ಲಿ ಇಂದು ಬಿಜೆಪಿ ಸಭೆ ನಡೆಯಲಿದ್ದು, ಅಭ್ಯರ್ಥಿಗಳ ಎರಡನೇ ಪಟ್ಟಿ ಘೋಷಣೆ ಆಗುವ ನಿರೀಕ್ಷೆ ಇದೆ. ಇದರಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಕೂಡ ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೆಂಗಳೂರು, ಮಾರ್ಚ್ 6: ಲೋಕಸಭೆ ಚುನಾವಣೆಗೆ (Lok Sabha Elections) ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಭಾರಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸದ್ಯ ಟಿಕೆಟ್ ಹಂಚಿಕೆಯ ಕಸರುತ್ತು ಜೋರಾಗಿದೆ. ಇಂದು ದೆಹಲಿಯಲ್ಲಿ ಬಿಜೆಪಿ (BJP) ಸಭೆ ನಡೆಯಲಿದ್ದು, ಎರಡನೇ ಪಟ್ಟಿ ಬಿಡುಗಡೆ ಸಂಬಂಧ ಚರ್ಚೆ ನಡೆಯಲಿದೆ. ಚುನಾವಣೆಗೆ ಬಿಜೆಪಿ ಭರದಿಂದ ಸಿದ್ಧತೆ ನಡೆಸುತ್ತಿದೆ. ಅದರ ಭಾಗವಾಗಿ 195 ಅಭ್ಯರ್ಥಿಗಳ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಇಂದು ದೆಹಲಿಯಲ್ಲಿ ಪ್ರಧಾನಿ ಮೋದಿ (Narendra Modi) ನೇತೃತ್ವದಲ್ಲಿ ಸಭೆ ನಡೆಯಲಿದ್ದು. ಎರಡನೇ ಪಟ್ಟಿ ಘೋಷಣೆ ಆಗುವ ಸಾಧ್ಯತೆ ಇದೆ. ಅದರಲ್ಲೂ ಎರಡನೇ ಪಟ್ಟಿಯಲ್ಲಿ ಕರ್ನಾಟಕದ ಅಭ್ಯರ್ಥಿಗಳ ಹೆಸರು ಘೋಷಣೆ ಆಗೋ ಸಾಧ್ಯತೆ ಇದೆ ಎನ್ನಲಾಗಿದೆ.
ಬಿಜೆಪಿ, ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಟಿಕೆಟ್ ಹಂಚಿಕೆ ಹೇಗಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿದೆ. ಯಾಕಂದ್ರೆ ಮಂಡ್ಯದಿಂದ ಸ್ಪರ್ಧೆಗೆ ಸುಮಲತಾ ಬೇಡಿಕೆ ಇಟ್ಟಿದ್ದರೆ, ಹಾಸನದಲ್ಲಿ ಜೆಡಿಎಸ್ ಟಿಕೆಟ್ ಬೇಕೆಂದು ಪಟ್ಟು ಹಿಡಿದಿದೆ. ಇನ್ನು ಬಿಜೆಪಿಯಲ್ಲೇ ಮಾಜಿ ಸಚಿವರಾದ ವಿ. ಸೋಮಣ್ಣ, ಮಾಧುಸ್ವಾಮಿ, ಸಿ.ಟಿ ರವಿ, ಡಾ. ಕೆ.ಸುಧಾಕರ್, ಬಿ.ಸಿ ಪಾಟೀಲ್ ಸೇರಿ ಇತರರು ಲಾಬಿ ನಡೆಸುತ್ತಿದ್ದಾರೆ. ಹೀಗಾಗಿ ಟಿಕೆಟ್ ಹಂಚಿಕೆ ತೀವ್ರ ಕುತೂಹಲ ಮೂಡಿಸಿದೆ.
ಕಮಲ ಭದ್ರಕೋಟೆ ಗಟ್ಟಿಗೊಳಿಸಲು ನಡ್ಡಾ ಎಂಟ್ರಿ
ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದ ಜಿಲ್ಲೆಗಳು ಬಿಜೆಪಿ ಭದ್ರಕೋಟೆ. ಅದನ್ನು ಮತ್ತೆ ಹಾಗೇ ಉಳಿಸಿಕೊಳ್ಳಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ನಿನ್ನೆ ಸಮಾವೇಶ ಮತ್ತು ಮೀಟಿಂಗ್‌ಗಳಲ್ಲಿ ಭಾಗಿಯಾದರು. ಕಿತ್ತೂರು ಕರ್ನಾಟಕ ಗೆಲ್ಲಲು ನಡ್ಡಾ ತಂತ್ರ ಹೆಣೆದಿದಾರೆ. ನಿನ್ನೆ ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ ಕ್ಷೇತ್ರದ ನಾಯಕರ ಜೊತೆ ಸಾಲು ಸಾಲು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಚುನಾವಣೆ ಗೆಲ್ಲುವ ಬಗ್ಗೆ ತಂತ್ರಗಾರಿಕೆ ಬಗ್ಗೆಯೂ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಹಿಂದಿನ ಸಾಲಿನಲ್ಲಿ ಕುಳಿತು ಬಿಜೆಪಿ ಶಾಸಕ ಯತ್ನಾಳ್ ಗಮನ ಸೆಳೆದರೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರಿದ್ದರೆ, ರಮೇಶ್ ಜಾರಕಿಹೊಳಿ ಗೈರಾಗಿದ್ದರು.
ನಾಳೆ ಕಾಂಗ್ರೆಸ್ ಸಭೆ
ಒಂದೆಡೆ ಬಿಜೆಪಿ ಇಷ್ಟೆಲ್ಲ ಸಿದ್ಧತೆ ಮಾಡುತ್ತಿದ್ದರೆ, ಕಾಂಗ್ರೆಸ್ ನಿಧಾನವಾಗಿ ಕೆಲಸ ಶುರು ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಂದ ಮೇಲೆ ತಮ್ಮ ಪಟ್ಟಿ ಬಿಡುಗಡೆ ಮಾಡುವ ಯೋಚನೆಯಲ್ಲಿ ಕಾಂಗ್ರೆಸ್ ಇದೆ. ಈ ಬಗ್ಗೆ ಮಾಹಿತಿ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಾರ್ಚ್ 7 ರಂದು ಸಿಇಸಿ ಸಭೆ ಇದೆ. ಬಳಿಕ ಟಿಕೆಟ್ ಬಗ್ಗೆ ಗೊತ್ತಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ: ಶಿವರಾಮ್ ಹೆಬ್ಬಾರ್ಗೂ ಗ್ಯಾರಂಟಿ ಕೊಟ್ಟಿದ್ದೇನೆ: ಸಿದ್ದರಾಮಯ್ಯ ಹೇಳಿಕೆ ಹಿಂದಿನ ಗೂಢಾರ್ಥ ಏನು?
ಇತ್ತ ಜೆಿಡಿಎಸ್ ಕೂಡ ತಂತ್ರಗಾರಿಕೆ ಶುರು ಮಾಡಿದೆ. ಬೆಂಗಳೂರಿನ ಜೆ.ಪಿ ನಗರದಲ್ಲಿರೋ ಮಾಜಿ ಸಿಎಂ ಕುಮಾರಸ್ವಾಮಿ ನಿವಾಸದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಭೆ ನಡೆಸಲಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆ ಕುರಿತು ಚರ್ಚಿಸಲಾಯಿತು. ಸಭೆಯಲ್ಲಿ ಸಿಪಿ ಯೋಗೇಶ್ವರ್, ಮುನಿರತ್ನ, ಎಂ.ಕೃಷ್ಣಪ್ಪ ಭಾಗಿಯಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ