ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ನಿರ್ಲಕ್ಷ್ಯ: ಬಿಜೆಪಿ ವಿರುದ್ಧ ಸಿಡಿದೆದ್ದ ಮಾದಿಗ ಸಮುದಾಯ
ರಾಜ್ಯ ಬಿಜೆಪಿಯ ವಿವಿಧ ಘಟಕಗಳಿಗೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಪದಾಧಿಕಾರಿಗಳನ್ನು ನೇಮಿಸಿದ್ದಾರೆ. ಇದರ ಬೆನ್ನಲ್ಲೇ ಅಸಮಾಧಾನ ಸ್ಪೋಟವಾಗಿದೆ. ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಅವಕಾಶ ನೀಡದಿರುವುದಕ್ಕೆ ಮಾದಿಗ ಸಮುದಾಯ ಸಿಡಿದೆದ್ದಿದೆ.
ಬೆಂಗಳೂರು, (ಜನವರಿ 17): ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಅವರು ಆಯ್ಕೆಯಾಗುತ್ತಿದ್ದಂತೆಯೇ ವಿವಿಧ ಘಟಕಗಳಿಗೆ ಹೊಸ ಪದಾಧಿಕಾರಿಗಳ ನೇಮಕಾತಿ ನಡೆದಿದ್ದು, ಲೋಕಸಭೆ ಚುನಾವಣೆಗಾಗಿ ತಯಾರಾಗುವಂತೆ ಕರೆ ನೀಡಿದ್ದಾರೆ. ಇದರ ಮಧ್ಯೆ ಬಿಜೆಪಿ ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಅವಕಾಶ ನೀಡದಿರುವುದಕ್ಕೆ ಮಾದಿಗ ಸಮುದಾಯ ಸಿಡಿದೆದ್ದಿದೆ. ಮಾದಿಗ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರು.ಒಂದು ವೇಳೆ ಪ್ರಾತಿನಿಧ್ಯ ನೀಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇನ್ನು ಮಾದಿಗ ಸಮುದಾಯ ಸಭೆ ಮಾಡುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಎಚ್ಚೆತ್ತುಕೊಂಡಿದ್ದು, ಮಾದಿಗ ಸಮುದಾಯದ ಮುಖಂಡರನ್ನು ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸಕ್ಕೆ ಕರೆಯಿಸಿಕೊಂಡು ಮಾತುಕತೆ ನಡೆಸಿದರು.
ಸಭೆಯಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಕೃಷ್ಣಮೂರ್ತಿ, ಮಾಜಿ ಸಚಿವ ಕೋಟೆ ಶಿವಣ್ಣ, ಮಾಜಿ ಸಚಿವ ದೇವೇಂದ್ರ ನಾಥ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಹೆಚ್. ಅನಿಲ್ ಕುಮಾರ್ ಮತ್ತು ಎಂ. ಲಕ್ಷ್ಮೀನಾರಾಯಣ ಸೇರಿದಂತೆ ಹಲವು ಮಾದಿಗ ಸಮುದಾಯದ ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ: ಸಿದ್ದರಾಮಯ್ಯ ನೇತೃತ್ವದಲ್ಲಿ ಲೋಕಸಭೆ ಚುನಾವಣೆ: ಡಿಕೆ ಶಿವಕುಮಾರ್ ಘೋಷಣೆ
ಮಧ್ಯೆ ಪ್ರವೇಶಿಸಿದ ಯಡಿಯೂರಪ್ಪ
ಮಾಜಿ ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದಲ್ಲಿ ಮಾದಿಗ ಸಮಯದಾಯದ ಮುಖಂಡರು ಯಡಿಯೂರಪ್ಪನವರ ಜೊತೆ ಚರ್ಚಿಸಿದರು. ಈಗ ಆಗಿರುವ ಪದಾಧಿಕಾರಿಗಳ ಪಟ್ಟಿ ಬಗ್ಗೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಎಲ್ಲವನ್ನೂ ನಾನು ಸರಿಪಡಿಸಿಕೊಡುತ್ತೇನೆ ಎಂದು ಸಭೆಯಲ್ಲಿ ಮಾದಿಗ ಸಮುದಾಯದ ಮುಖಂಡರನ್ನು ಯಡಿಯೂರಪ್ಪ ಸಮಾಧಾನಪಡಿಸಿದರು.
ತಮ್ಮ ಪುತ್ರ ರಾಜ್ಯ ಬಿಜೆಪಿಯನ್ನು ಮುನ್ನಡೆಸುತ್ತಿರುವುದರಿಂದ ಯಾವುದೇ ಭಿನ್ನಾಭಿಪ್ರಾಯಗಳ ಬರಬಾರದೆಂದು ಬಿಎಸ್ ಯಡಿಯೂರಪ್ಪ ಆಗಾಗ ಮಧ್ಯೆ ಪ್ರವೇಶಿಸಿ ಅಸಮಾಧಾನಿತರನ್ನು ಸಮಾಧಾನ ಮಾಡುವ ಕೆಲಸ ನಡೆಸಿದ್ದಾರೆ. ಅದರಂತೆ ಮಾದಿಗ ಸಮುದಾಯವನ್ನು ಸಮಾಧಾನಪಡಿಸಿದ್ದಾರೆ. ಆದ್ರೆ, ಮುಖಂಡ ಈ ಬಗ್ಗೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದನ್ನು ಮುಂದೆ ಕಾದುನೋಡಬೇಕಿದೆ.
ಒಟ್ಟಿನಲ್ಲಿ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿಗೆ ಇದೊಂದು ಶಾಕ್ ಕೊಟ್ಟಿದಂತೂ ಸತ್ಯ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ