ರಾಮನಗರ, (ಫೆಬ್ರವರಿ 05): ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ನೀಡದೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಕಾಂಗ್ರೆಸ್ನ ಶಾಸಕರು, ಸಚಿವರು ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಮಾಗಡಿ ಕಾಂಗ್ರೆಸ್ ಶಾಸಕ ಎಚ್ಸಿ ಬಾಲಕೃಷ್ಣ(Congress MLA HC Balakrishna ), ಜೆಪಿಯ ಸಂಸದರೆಲ್ಲರೂ ಶೋಪೀಸ್‌ಗಳು, ಅದರ ನಾಯಕರು ಯಾರೂ ಗಂಡಸರಲ್ಲ ಎಂದು ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮನಗರದ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಎಚ್.ಸಿ.ಬಾಲಕೃಷ್ಣ, ನಮ್ಮ ಹೋರಾಟ ನೋಡಿಯಾದರೂ ಬಿಜೆಪಿಯ ಗಂಡಸರು ಹೋರಾಟ ಮಾಡುತ್ತಾರಾ ನೋಡೋಣ.. ಇದರ ಅರ್ಥ ಬಿಜೆಪಿಯಲ್ಲಿ ಯಾರು ಗಂಡಸರು ಇಲ್ಲ ಅಂತ. ಈಗಿರುವ ಬಿಜೆಪಿ ಎಂಪಿಗಳು ಯಾರು ಗಂಡಸರಲ್ಲ ಎಂದು ಅರ್ಥ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಹೆಚ್ಚು ಟ್ಯಾಕ್ಸ್ ಕಟ್ಟುವ ಎರಡನೇ ರಾಜ್ಯ ನಮ್ಮದು. ನಮಗೆ ಕೊಡಬೇಕಾದ ಅನಯದಾನವನ್ನ ನಮಗೆ ಕೊಡುತ್ತಿಲ್ಲ. ಬಿಜೆಪಿಯ ಸಂಸದರು ನರೇಂದ್ರ ಮೋದಿ ಮುಂದೆ ಕೂರೋದು ಇಲ್ಲ, ಏಳೋದು ಇಲ್ಲ. ಕೇವಲ ಮೋದಿ ಹೆಸರಲ್ಲಿ ಗೆಲ್ಲುತ್ತಾರೆ. ಆದರೆ ವೈಯಕ್ತಿಕ ವರ್ಚಸ್ಸು ಇಲ್ಲ. ಪಕ್ಕದ ತಮಿಳುನಾಡು ತನ್ನ ಹಕ್ಕಿಗಾಗಿ ಮಾಡುವ ಹೋರಾಟವನ್ನ ನೋಡಿ ಕಲಿಯಲಿ. ಬಿಜೆಪಿ ಸಂಸದರೆಲ್ಲಾ ಶೋ ಪೀಸ್ ಗಳು. ಕೇವಲ ದೆಹಲಿಗೆ ಹೋಗೋದು ಟಿಎ-ಡಿಎ ತಕೊಂಡು ಬರೋದು ಅಷ್ಟೇ ಇವರ ಕೆಲಸ. ಬಿಜೆಪಿ ಎಂಪಿಗಳು, ಮಂತ್ರಿಗಳು ರಾಜ್ಯದ ಧ್ವನಿ ಎತ್ತಿಲ್ಲ. ಹಾಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೆಲವು ದಿನದ ಹಿಂದಷ್ಟೇ ಇದೇ ಮಾಗಡಿಯ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಅವರು ಸಂಸತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾದರೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿ ವಿವಾದಕ್ಕೆ ಸಿಲುಕಿದ್ದರು. ಇದೀಗ ಬಿಜೆಪಿಯ ಸಂಸದರೆಲ್ಲರೂ ಶೋಪೀಸ್‌ಗಳು, ಅದರ ನಾಯಕರು ಯಾರೂ ಗಂಡಸರಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ .
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ