ಘರ್ ವಾಪ್ಸಿ ವೇಳೆ ಜಗದೀಶ್ ಶೆಟ್ಟರ್ ಏನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ: ಮಹೇಶ್ ಟೆಂಗಿನಕಾಯಿ
ಶೆಟ್ಟರ್ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವು ಬದ್ಧರಿದ್ದೇವೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬರಬೇಕು ಅಂದರೆ ರಾಜೀನಾಮೆ ಕೊಡಲೇಬೇಕು ಎಂದು ಮಹೇಶ್ ಟೆಂಗಿನಕಾಯಿ ಹೇಳಿದ್ದಾರೆ.
ಹುಬ್ಬಳ್ಳಿ, ಜನವರಿ 26: ಜಗದೀಶ ಶೆಟ್ಟರ್ (Jagadish Shettar) ಅವರು ಬಿಜೆಪಿ ಮರು ಸೇರ್ಪಡೆ ವೇಳೆ ಏನು ಬೇಡಿಕೆ ಇಟ್ಟಿದ್ದಾರೋ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ (Mahesh Tenginakai) ಹೇಳಿದ್ದಾರೆ. ಶೆಟ್ಟರ್ ಘರ್ ವಾಪ್ಸಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ನಾಯಕರು ನಮ್ಮನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡೇ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ಹೈಕಮಾಂಡ್ ತೀರ್ಮಾನವನ್ನು ನಾವೆಲ್ಲಾ ಸ್ವಾಗತ ಮಾಡುತ್ತೇವೆ ಎಂದರು.
ಶೆಟ್ಟರ್ ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವು ಬದ್ಧರಿದ್ದೇವೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಬರಬೇಕು ಅಂದರೆ ರಾಜೀನಾಮೆ ಕೊಡಲೇಬೇಕು ಎಂದು ಅವರು ಹೇಳಿದ್ದಾರೆ.
ಹೈಕಮಾಂಡ್ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾಲ್ಕು ಚೌಕಟ್ಟಿನಲ್ಲಿ ನಡೆಯುವ ಸಂಧಾನ ಇದು. ಮಾತುಕತೆ ನಡೆಯುತ್ತಾ ಇರುತ್ತದೆ ಅವುಗಳನ್ನು ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ಶೆಟ್ಟರ್ ಬಿಜೆಪಿಗೆ ವಾಪಸಾಗುವ ಸಂದರ್ಭ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಜರಿರದ ವಿಚಾರವಾಗಿ ಸ್ಪಷ್ಟನೆ ನೀಡಿದ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡೇ ಪಕ್ಷ ನಿರ್ಧಾರ ಮಾಡಿರುತ್ತದೆ. ಒಂದೇ ಪಕ್ಷದಲ್ಲಿದ್ದಾಗ ಅಂತಹದ್ಯಾವುದೂ ಇರಲ್ಲ. ಕಾಂಗ್ರೆಸ್ನಲ್ಲಿದ್ದಾಗ ಬಿಜೆಪಿಯನ್ನು ಟೀಕೆ ಮಾಡುವುದು ಸಹಜ. ಈಗ ಪಕ್ಷಕ್ಕೆ ಸೇರಿದ್ದಾರೆ. ಎಲ್ಲರೂ ಜತೆಯಾಗಿ ಹೋಗುತ್ತೇವೆ. ಈಗ ನಾವೇನು ಹೇಳುವಂಥದ್ದಿಲ್ಲ, ಅವರನ್ನೇ ಕೇಳಬೇಕು ಎಂದು ಟೆಂಗಿನಕಾಯಿ ಹೇಳಿದ್ದಾರೆ.
ಇದನ್ನೂ ಓದಿ: ಶೆಟ್ಟರ್ ಬಿಜೆಪಿಗೆ ಮರಳಿದ ಬೆನ್ನಲ್ಲೇ ಸವದಿ ಜತೆ ಮಾತುಕತೆ ನಡೆಸಿದ ಡಿಕೆಶಿ
ವಿಧಾನಸಭೆ ಚುನಾವಣೆ ಸಂದರ್ಭ ಬಿಜೆಪಿಯಿಂದ ಟಿಕೆಟ್ ಸಿಗದೆ ಅಸಮಾಧಾನಗೊಂಡು ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, ಕೈ ಪಕ್ಷದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರು. ನಂತರ ಅವರನ್ನು ಪರಿಷತ್ ಸದಸ್ಯರನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡಿತ್ತು. ಇದೀಗ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳಿರುವ ಸಂದರ್ಭದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಶೆಟ್ಟರ್ ಗುರುವಾರ ನವದೆಹಲಿಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಜೆಪಿ ನಡ್ಡಾ ಸಮ್ಮುಖದಲ್ಲಿ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಅವರು ಬೆಳಗಾವಿ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಟಿಕೆಟ್ ಆಕಾಂಕ್ಷಿ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ