ಹಿಂದೂ ಕಾರ್ಯಕರ್ತರನ್ನ ಅಣಬೆಗೆ ಹೋಲಿಸಿದ ಪುತ್ತೂರು ಬಿಜೆಪಿ ಶಾಸಕರ ವಿರುದ್ಧ ಭುಗಿಲೆದ್ದ ಆಕ್ರೋಶ, ಮುತ್ತಿಗೆ
ಹಿಂದೂ ಕಾರ್ಯಕರ್ತರನ್ನ ಅಣಬೆಗೆ ಹೋಲಿಸಿದ ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರ್ ಅವರು ಇದೀಗ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹಿಸಿ ಮಠಂದೂರಿಗೆ ಮುತ್ತಿಗೆ ಹಾಕಿದ ಪ್ರಸಂಗವೂ ನಡೆಯಿತು.
ಮಂಗಳೂರು: ಹಿಂದೂ ಕಾರ್ಯಕರ್ತರನ್ನ ಅಣಬೆಗೆ ಹೋಲಿಸಿದ ಪುತ್ತೂರು ಬಿಜೆಪಿ ಶಾಸಕ ಸಂಜೀವ ಮಠಂದೂರು (Sanjeeva Matandoor) ಅವರು ಇದೀಗ ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಹೇಳಿಕೆಗೆ ಕ್ಷಮೆಯಾಚನೆಗೆ ಆಗ್ರಹಿಸಿ ಮಠಂದೂರಿಗೆ ಮುತ್ತಿಗೆ ಹಾಕಿದ ಪ್ರಸಂಗ ಇಂದು ನಡೆಯಿತು. ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಪುತ್ತೂರು ಕ್ಷೇತ್ರಕ್ಕೆ ಭೇಟಿ ಹಿನ್ನಲೆ ಪುತ್ತೂರಿನಲ್ಲಿ ಆಯೋಜಿಸಿದ್ದ ಪ್ರಚಾರ ಕಾಲ್ನಡಿಗೆ ಜಾಥದ ವೇಳೆ ಶಾಸಕರಿಗೆ ಘೇರಾವ್ ಹಾಕಿದ ಕಾರ್ಯಕರ್ತರು, ಕ್ಷಮೆ ಕೇಳುವಂತೆ ಪಟ್ಟು ಹಿಡಿದರು. ಕಾರ್ಯಕರ್ತರ ಆಕ್ರೋಶ ತಡೆಯಲಾಗದೇ ಸಂಜೀವ ಮಠಂದೂರು ಸ್ಥಳದಿಂದ ತೆರಳಿದರು.
ಮಂಗಳೂರಿನ ಪುತ್ತೂರಿನಲ್ಲಿ ಫೆಬ್ರವರಿ 11 ರಂದ ಕ್ಯಾಂಪ್ಕೋ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭ ಜರುಗಲಿದ್ದು ಮುಖ್ಯ ಅತಿಥಿಗಳಾಗಿ ಅಮಿತ್ ಶಾ ಆಗಮಿಸಲಿದ್ದಾರೆ. ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸುವ ಗುರಿಯನ್ನು ಕರಾವಳಿ ಭಾಗದ ಬಿಜೆಪಿ ನಾಯಕರು ಇಟ್ಟುಕೊಂಡಿದ್ದಾರೆ. ಕಾರ್ಯಕ್ರಮದ ನೆಪದಲ್ಲಿ ಮತಬೇಟೆ ನಡೆಸುವ ಯೋಜನೆ ಅವರದ್ದಾಗಿದೆ. ಇದರ ಭಾಗವಾಗಿ ಪುತ್ತೂರಿನ ದರ್ಬೆಯಿಂದ ಬೊಳುವಾರುವರೆಗೆ ಬಿಜೆಪಿ ಹಮ್ಮಿಕೊಂಡಿದ್ದ ಪ್ರಚಾರ ಜಾಥ ನಡೆಯಿತು. ಈ ವೇಳೆ ಶಾಸಕರಿಗೆ ಕಾರ್ಯಕರ್ತರು ಘೇರಾವ್ ಹಾಕಿದರು.
ಅಷ್ಟಕ್ಕೂ ಶಾಸಕರು ಕಾರ್ಯಕರ್ತರನ್ನು ಅಣಬೆಗೆ ಹೋಲಿಸಿದ್ದೇಕೆ?
ಹಿಂದೂ ಮುಖಂಡರೂ ಆಗಿರುವ ಪುತ್ತೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿ ಅರುಣ್ ಪುತ್ತಿಲ ಬೆಂಬಲಿಗರು ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಕಟೌಟ, ಬ್ಯಾನರ್ ಅಳವಡಿಸಿದ್ದರು. ಆದರೆ ಈ ಬ್ಯಾನರ್ನಲ್ಲಿ ಶಾಸಕ ಮಠಂದೂರ್ ಅವರ ಭಾವಚಿತ್ರ ಇರಲಿಲ್ಲ. ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಶಾಸಕರನ್ನು ಪತ್ರಕರ್ತರು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸುತ್ತಾ, ಬ್ಯಾನರ್ ಹಾಕಿದವರನ್ನ ಪರೋಕ್ಷವಾಗಿ ಅಣಬೆಗೆ ಹೋಲಿಸಿದ್ದರು.
ಇದನ್ನೂ ಓದಿ: ಕಟುಕರಿಗೆ ದನ ಕೊಡಬಾರದು: ಕಾರ್ಕಳದಲ್ಲಿ ತಮ್ಮ ನೂತನ ಕಚೇರಿಯಲ್ಲಿ ಮಾತಾನಾಡಿದ ಪ್ರಮೋದ್ ಮುತಾಲಿಕ್
ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನೂ ಹೆಚ್ಚು ಅಲಂಕಾರಕ್ಕೆ ಮೆರಗು ಬರುತ್ತದೆ. ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ, ಮಳೆ ಬಂದಾಗ ಅಣಬೆ ಹುಟ್ಟುತ್ತದೆ. ಅದು ಭಾರೀ ಸಮಯ ಬಾಳಿಕೆ ಬರುವುದಿಲ್ಲ. ಮಳೆ ಹೋದಾಗ ಅಣಬೆಯು ಹೋಗುತ್ತದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಶಾಸಕರು ಅಣಬೆಗೆ ಹೋಲಿಸಿದ್ದು ಅರುಣ್ ಪುತ್ತಿಲ ಅವರನ್ನೇ ಎಂದು ಕಾರ್ಯಕರ್ತರು ಗರಂ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ಮಠಂದೂರು ವಿರುದ್ದ ಟೀಕಿಸಿದ್ದರು. ಇದೀಗ ಜಾಥಾದಲ್ಲಿಯೇ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ.
2018ರ ಚುನಾವಣೆ ಸಂದರ್ಭದಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಮತ್ತು ಮಠಂದೂರು ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ಮಠಂದೂರು ಅವರಿಗೆ ಟಿಕೆಟ್ ಒಲಿದುಬಂದಿತ್ತು. ಅದಾಗ್ಯೂ,ಅರುಣ್ ಪುತ್ತಿಲ ಅವರು ಮಠಂದೂರು ಪರ ಪ್ರಚಾರ ನಡೆಸಿದ್ದರು. ಆದರೀಗ ಸಂಜೀವ ಮಠಂದೂರು ಬದಲಾವಣೆಗೆ ಒತ್ತಡ ಹೆಚ್ಚಾಗಿದ್ದು, ಟ್ವಿಟರ್, ಫೇಸ್ ಬುಕ್ಗಳಲ್ಲಿ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ಹೆಸರಿನಲ್ಲಿ ಕ್ಯಾಂಪೇನ್ ಆರಂಭವಾಗಿದೆ. ಆ ಮೂಲಕ ಪುತ್ತೂರಿನ ಹಾಲಿ ಬಿಜೆಪಿ ಶಾಸಕ ಸಂಜೀವ ಮಠಂದೂರು ವಿರುದ್ದವೇ ಹಿಂದೂ ಸಂಘಟನೆಗಳು ತೊಡೆ ತಟ್ಟಿ ನಿಂತಿವೆ. ಮುಂದೆ ಯಾವ ಬದಲಾವಣೆಯಾಗುತ್ತೋ ಕಾದುನೋಡಬೇಕಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ